ಕುಂದಗೋಳ: ಶಾಲೆಗಳಲ್ಲಿ ಕೊನೆಯ ಬೆಂಚ್ ಮಕ್ಕಳು ದಡ್ಡರು ಎಂಬ ಭಾವನೆ ಬರಬಾರದು ಎಂಬ ದೃಷ್ಟಿಯಿಂದ ಸಮಾನ ಶಿಕ್ಷಣ ನಿಡಲು ತಾಲ್ಲೂಕಿನ ಗುಡೇನಕಟ್ಟಿ ಶಾಲೆಯಲ್ಲಿ ಹೊಸ ಪ್ರಯೋಗ ನಡೆದಿದೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ಮತ್ತು 5ನೇ ತರಗತಿಗೆ ‘ಲಾಸ್ಟ್ ಬೆಂಚ್’ ಎಂಬ ಪರಿಕಲ್ಪನೆಯನ್ನು ತಪ್ಪಿಸಲು ವಿನೂತನ ಮಾದರಿಯಲ್ಲಿ ಬೆಂಚ್ ವಿನ್ಯಾಸ ಮಾಡಲಾಗಿದೆ. ಕೊಠಡಿಯ ಒಂದು ಕಡೆ ಶಿಕ್ಷಕರು ಹಾಗೂ ಅವರ ಎಡ, ಬಲ ಮತ್ತೆ ಮುಂಬದಿಯ ಗೋಡೆಗಳಿಗೆ ಹೊಂದಿಕೊಂಡು ‘ಯು’ ಆಕಾರದಲ್ಲಿ ಮಕ್ಕಳಿಗೆ ಬೆಂಚ್ ವ್ಯವಸ್ಥೆ ಮಾಡಲಾಗಿದೆ.
‘ನೂತನ ಪ್ರಯೋಗದಲ್ಲಿ ಮಕ್ಕಳು ಪಾಠ ಕೇಳಲು ಉತ್ಸಾಹ ತೋರುತ್ತಿದ್ದಾರೆ. ಈ ರೀತಿ ಕುಳಿತುಕೊಳ್ಳುವ ವ್ಯವಸ್ಥೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಸಮಾನಾಂತರವಾಗಿ ಇರುವುದರಿಂದ ಪಾಠದ ಪ್ರಭಾವ ಹಾಗೂ ಪಾಠದ ಕಡೆಗೆ ವಿದ್ಯಾರ್ಥಿಗಳ ಒಲವು ಹೆಚ್ಚಾಗುತ್ತಿದೆ’ ಎಂದು ಶಿಕ್ಷಕ ಎಸ್.ಎಂ.ಮುಲ್ಲಾ ಹೇಳುತ್ತಾರೆ.
ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ನಾಗರಾಜ ಪಟಗಾರ ಮಾತನಾಡಿ, ‘ಈ ಪ್ರಯೋಗದಿಂದ ವಿದ್ಯಾರ್ಥಿಗಳು ಪಾಠದಲ್ಲಿ ಹೆಚ್ಚು ತೊಡಗಿಸಿಕೊಂಡು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಣದಲ್ಲಿ ಸಮಾನ ಉತ್ಸಾಹ ಹಾಗೂ ಸ್ಪಷ್ಟ ಸಂವಹನ ಸಾಧ್ಯವಾಗುತ್ತಿದೆ. ಅಲ್ಲದೆ ವಿದ್ಯಾರ್ಥಿಗಳಲ್ಲಿ ಸಹಕಾರ ಹಾಗೂ ಗಮನ ನೀಡುವಿಕೆ ಹೆಚ್ವಾಗಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇತರ ತರಗತಿಗಳಿಗೂ ಈ ಪ್ರಯೋಗ ವಿಸ್ತರಿಸುವ ಉದ್ದೇಶವಿದೆ’ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲ ದೊಡಮನಿ, ಉಪಾಧ್ಯಕ್ಷ ಲಕ್ಷ್ಮಿ ಮಲ್ಲಿಗವಾಡ ಹಾಗೂ ಸದಸ್ಯರು ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾವು ಮುಂದೆ ಹಿಂದೆ ಎನ್ನದೆ ಪಾಠಗಳ ಕಡೆ ಗಮನ ಹರಿಸಲು ಹೊಸ ಪ್ರಯೋಗ ತುಂಬಾ ಅನುಕೂಲವಾಗಿದೆ. ಮೊದಲಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಪಾಠಗಳು ಅರ್ಥವಾಗುತ್ತಿವೆಸ್ವಾತಿ ಹೊಸಳ್ಳಿ 5ನೇ ತರಗತಿ ವಿದ್ಯಾರ್ಥಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.