ADVERTISEMENT

ಗುರುಸಿದ್ಧೇಶ್ವರ ಮಹಾರಥೋತ್ಸವ ಸಂಭ್ರಮ

ಶ್ರಾವಣ ಮಾಸದ ಕೊನೆಯ ಸೋಮವಾರ: ಮಠ, ದೇಗುಲಗಳಲ್ಲಿ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 4:23 IST
Last Updated 19 ಆಗಸ್ಟ್ 2025, 4:23 IST
ಹುಬ್ಬಳ್ಳಿಯ ವಿದ್ಯಾನಗರದ ತಿಮ್ಮಸಾಗರ ಓಣಿಯ ದೇವಾಲಯದಲ್ಲಿ ಬಸವೇಶ್ವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಹುಬ್ಬಳ್ಳಿಯ ವಿದ್ಯಾನಗರದ ತಿಮ್ಮಸಾಗರ ಓಣಿಯ ದೇವಾಲಯದಲ್ಲಿ ಬಸವೇಶ್ವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು   

ಹುಬ್ಬಳ್ಳಿ: ನಗರದ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಮೂರುಸಾವಿರ ಮಠ, ಸಿದ್ಧಾರೂಢ ಮಠದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮೂರು ಸಾವಿರ ಮಠದಲ್ಲಿ ಸಂಜೆ ಮಳೆಯ ನಡುವೆಯೇ ಅಪಾರ ಭಕ್ತರ ಸಮ್ಮುಖದಲ್ಲಿ ಗುರುಸಿದ್ಧೇಶ್ವರರ ಮಹಾರಥೋತ್ಸವ ಸಂಭ್ರಮದಿಂದ ಜರುಗಿತು.

ಮಠದಿಂದ ಸಕಲ ವಾದ್ಯ ಮೇಳದೊಂದಿಗೆ ಪಲ್ಲಕ್ಕಿ ಮೆರವಣಿಗೆ ಆರಂಭವಾಗಿ, ಬಮ್ಮಾಪುರ ಓಣಿಯ ಗುರುಸಿದ್ದೇಶ್ವರ ಕಲ್ಯಾಣ ಮಂಟಪಕ್ಕೆ (ಓಲೆ ಮಠ) ತೆರಳಿ, ಮಠಕ್ಕೆ ಮರಳಿದ ಬಳಿಕ ರಥೋತ್ಸವ ನಡೆಯಿತು. ರಥವು ಸೊರಬದಮಠ ಗಲ್ಲಿವರೆಗೆ ತೆರಳಿ, ಮತ್ತೆ ಮಠಕ್ಕೆ ವಾಪಸಾಯಿತು. ಡೋಲು, ಕರಡಿ ಮಜಲು, ಜಾಂಜ್ ಮತ್ತಿತರ ವಾದ್ಯ ತಂಡಗಳು ರಥೋತ್ಸವಕ್ಕೆ ಕಳೆ ತಂದವು.

ADVERTISEMENT

ರಸ್ತೆಗಳ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತರು ‘ಗುರುಸಿದ್ದೇಶ್ವರ ಮಹಾರಾಜ ಕೀ ಜೈ’, ‘ಹರ ಹರ ಮಹಾದೇವ’ ಎಂದು ಜಯಘೋಷ ಹಾಕುತ್ತ ರಥಕ್ಕೆ ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವದ ನಂತರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರ ವಾರ್ಷಿಕ ರಜತ ಸಿಂಹಾಸನಾರೋಹಣ ನಡೆಯಿತು. ಶ್ರೀಗಳು ಭಕ್ತರನ್ನು ಆಶೀರ್ವದಿಸಿದರು.

ಬೆಳಿಗ್ಗೆ ರುದ್ರಾಭಿಷೇಕ ನಡೆಯಿತು. ಗುರುಸಿದ್ಧೇಶ್ವರರ ಕರ್ತೃ ಗದ್ದುಗೆಯನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಮಧ್ಯಾಹ್ನ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಠವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.

ಮುಖಂಡರಾದ ಸದಾನಂದ ಡಂಗನವರ, ಶಿವು ಮೆಣಸಿನಕಾಯಿ, ಮೋಹನ ಅಸುಂಡಿ, ಅರವಿಂದ ಕುಬಸದ, ಅಮರೇಶ ಹಿಪ್ಪರಗಿ, ಗುರು ಹಿರೇಮಠ, ಪ್ರಸಾದ ಹೊಂಬಳ, ಶಶಿಧರ ಕರವೀರಶೆಟ್ಟರ, ಗುರುಸಿದ್ದಯ್ಯ, ರಾಜು ಕೋರ್ಯಾಣಮಠ ಪಾಲ್ಗೊಂಡಿದ್ದರು.

ಬಸವೇಶ್ವರ ಜಾತ್ರೋತ್ಸವ: ವಿದ್ಯಾನಗರದ ತಿಮ್ಮಸಾಗರ ಓಣಿಯ ಬಸವೇಶ್ವರ ಜಾತ್ರಾ ಮಹೋತ್ಸವ ಸೋಮವಾರ ಜರುಗಿತು. ಸಂಜೆ ವೇಳೆ ಅರಳಿಕಟ್ಟಿ ಓಣಿಯ ಸಿದ್ದಲಿಂಗೇಶ್ವರ ದೇವಸ್ಥಾನದಿಂದ ಬಸವೇಶ್ವರ ದೇವರ ಬೆಳ್ಳಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಬಸವೇಶ್ವರ ದೇವಸ್ಥಾನಕ್ಕೆ ತರಲಾಯಿತು. ಅಲ್ಲಿಂದ ಮೂರು ಸಾವಿರ ಮಠಕ್ಕೆ ಸಾಗಿದ ಪಲ್ಲಕ್ಕಿ, ಪುನಃ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿತು. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಶಿರೂರು ಪಾರ್ಕ್‌ ಅಯ್ಯಪ್ಪಸ್ವಾಮಿ ದೇವಸ್ಥಾನ, ದ್ಯಾಮವ್ವದೇವಿ ದೇವಸ್ಥಾನ, ಕಮರಿಪೇಟೆಯ ತುಳಜಾಭವಾನಿ, ವಿಕಾಸ ನಗರದ ಕರಿಯಮ್ಮದೇವಿ ದೇವಸ್ಥಾನ, ರಾಜಧಾನಿ ಕಾಲೊನಿಯ ಈಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲೂ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಚರಮೂರ್ತೇಶ್ವರ ಪಲ್ಲಕ್ಕಿ ಉತ್ಸವ: ತಾಲ್ಲೂಕಿನ ವರೂರು (ಛಬ್ಬಿ ಕ್ರಾಸ್) ಗ್ರಾಮದಲ್ಲಿ ಸಂಜೆ ಹುಚ್ಚಯ್ಯನಬಂಡಿ ಚರಮೂರ್ತೇಶ್ವರ ಪಲ್ಲಕ್ಕಿ ಉತ್ಸವ ನಡೆಯಿತು.

ಛಬ್ಬಿ ಗ್ರಾಮದಿಂದ ಚರಮೂರ್ತೇಶ್ವರ ಮಠಕ್ಕೆ ವೀರಭದ್ರೇಶ್ವರ ಪಲ್ಲಕ್ಕಿ, ಗದಿಗೆಪ್ಪ ಅಜ್ಜನ ಪಲ್ಲಕ್ಕಿ, ಬಸವಣ್ಣನ ಪಲ್ಲಕ್ಕಿಗಳು ಬಂದ ನಂತರ ಗುರು ಚರಮೂರ್ತೇಶ್ವರ ಪೂಜೆ, ಮಹಾ ಮಂಗಳಾರತಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಡೊಳ್ಳು, ಜಗ್ಗಲಿಗೆ ತಂಡಗಳು ಪಾಲ್ಗೊಂಡಿದ್ದವು.

ಬೆಳಿಗ್ಗೆ ರುದ್ರಾಭಿಷೇಕ, ಗಣಹೋಮ, ಮಧ್ಯಾಹ್ನ ಮಹಾಪ್ರಸಾದ ಸೇವೆ ನಡೆಯಿತು.

ಶ್ರಾವಣ ಕೊನೆಯ ಸೋಮವಾರದ ಅಂಗವಾಗಿ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭಕ್ತರು ಭೇಟಿ ನೀಡಿದರು
ಹುಬ್ಬಳ್ಳಿ ತಾಲ್ಲೂಕಿನ ವರೂರು (ಛಬ್ಬಿ ಕ್ರಾಸ್) ಗ್ರಾಮದಲ್ಲಿ ಹುಚ್ಚಯ್ಯನಬಂಡಿ ಚರಮೂರ್ತೇಶ್ವರ ಪಲ್ಲಕ್ಕಿ ಉತ್ಸವ ನಡೆಯಿತು

ಗುರು ಸಿದ್ಧಾರೂಢರ ಸ್ಮರಣೆ

ಇಲ್ಲಿಯ ಗುರು ಸಿದ್ಧಾರೂಢ ಸ್ವಾಮಿ ಮಠದಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ಸಿದ್ಧಾರೂಢರು ಹಾಗೂ ಗುರುನಾಥರೂಢರ ದರ್ಶನ ಪಡೆದರು. ಉಭಯ ಶ್ರೀಗಳ ಗದ್ದುಗೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆ ಕಾಕಡಾರತಿ ಅಭಿಷೇಕ ಪೂಜೆ ಮಧ್ಯಾಹ್ನ ನೈವೇದ್ಯ ಸಮರ್ಪಣೆ ಸಂಜೆ ಭಜನೆ ಕೈಲಾಸ ಮಂಟಪ ಪೂಜೆ ಪಲ್ಲಕ್ಕಿ ಪೂಜೆ ಬಳಿಕ ಮೆರವಣಿಗೆ ಮಂಗಳಾರತಿ ಮತ್ತು ರಾತ್ರಿ ಪೂಜೆಗಳು ನಡೆದವು. 8–10 ಸಾವಿರ ಭಕ್ತರು ‍ಪ್ರಸಾದ ಸೇವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.