ADVERTISEMENT

ಸಿಬ್ಬಂದಿಗೆ ಕಿರುಕುಳ ಆರೋಪ; ವಿಚಾರಣೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 6:31 IST
Last Updated 12 ಜನವರಿ 2022, 6:31 IST

ಹುಬ್ಬಳ್ಳಿ: ರಾತ್ರಿ ಪಾಳೆಯಲ್ಲಿ ಪಾಯಿಂಟ್‌ ಪುಸ್ತಕ ಪಂಚ್‌ ಮಾಡುವ ವಿಷಯದಲ್ಲಿ ನಗರದ ಪೊಲೀಸ್ ಠಾಣೆಯೊಂದರ ಇನ್‌ಸ್ಟೆಕ್ಟರ್‌ ತಮ್ಮ ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ಡಿಸಿಪಿ ಸಾಹಿಲ್ ಬಾಗ್ಲಾ ಠಾಣೆಗೆ ತೆರಳಿ ವಿಚಾರಣೆ ಮಾಡಿದ್ದಾರೆ.

ಸಾಹಿಲ್ ಬಾಗ್ಲಾ ಅವರು ಕೆಲ ಸಿಬ್ಬಂದಿಯನ್ನು ಆ ಠಾಣೆಯ ಇನ್‌ಸ್ಟೆಕ್ಟರ್‌ ಸಮ್ಮುಖದಲ್ಲಿಯೇ ವಿಚಾರಣೆ ಮಾಡಿದ್ದಾರೆ. ಇದಕ್ಕೆ ಕೆಲ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದು, ‘ಇನ್‌ಸ್ಟೆಕ್ಟರ್‌ ಎದುರೇ ನಮ್ಮನ್ನು ವಿಚಾರಣೆ ಮಾಡಿದರೆ ಹೇಗೆ? ಅಲ್ಲಿ ಮುಕ್ತವಾಗಿ ಮಾತನಾಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

ಪಾಯಿಂಟ್ ಬುಕ್ ಪಂಚ್ ಮಾಹಿತಿ ನೀಡಲು ಇನ್‌ಸ್ಪೆಕ್ಟರ್‌ಗೆ ಹೆಡ್‌ ಕಾನ್‌ಸ್ಟೆಬಲ್ ಕರೆ ಮಾಡಿದ್ದಾಗ ಅವಾಚ್ಯವಾಗಿ ನಿಂದಿಸಿದ್ದಾರೆ. ಅಮಾನತು ಮಾಡಿಸುತ್ತೇನೆ ಎಂದು ದರ್ಪ ತೋರಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಸುವಂತೆ ಆಯುಕ್ತ ಲಾಭೂರಾಮ್‌ ಅವರು ಡಿಸಿಪಿಗೆ ಸೂಚಿಸಿದ್ದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಸಾಹಿಲ್ ಬಾಗ್ಲಾ ‘ಇನ್‌ಸ್ಪೆಕರ್ ವಿರುದ್ಧ ಸಿಬ್ಬಂದಿ ಆರೋಪ ಮಾಡಿರುವುದು ಆಂತರಿಕ ವಿಷಯ. ಎಲ್ಲರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.