ಹುಬ್ಬಳ್ಳಿ: ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಳೆಯಾಯಿತು.
ತಾಳಿಕೋಟೆಯಿಂದ ವಿಜಯಪುರಕ್ಕೆ ಹೋಗುವ ಹೆದ್ದಾರಿಯಲ್ಲಿ, ಡೋಣಿ ನದಿ ಸೇತುವೆ ಮೇಲಿನ ಪ್ರವಾಹ ಹೆಚ್ಚಿದೆ. ಮುದ್ದೇಬಿಹಾಳ, ಬಸವನ ಬಾಗೇವಾಡಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಹುಣಸಗಿ, ಸುರಪುರ, ಕಲಬುರ್ಗಿ, ಬೀದರ್ ಮೊದಲಾದ ಕಡೆ ಹೋಗುವ ಮಾರ್ಗಗಳು ಬಂದ್ ಆಗಿವೆ.
ಡೋಣಿ ನದಿ ದಡದ ಗುತ್ತಿಹಾಳ, ಬೋಳವಾಡ, ತುಂಬಗಿ ಸಾಸನೂರ ಮೊದಲಾದ ಗ್ರಾಮಗಳ 200ಕ್ಕೂ ಅಧಿಕ ಹೆಕ್ಟೇರ್ ಜಮೀನಿನಲ್ಲಿ ಬೆಳೆಗಳು ಜಲಾವೃತವಾಗಿವೆ. ನಾಲತವಾಡ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ತಗ್ಗು ಪ್ರದೇಶದ ಜಮೀನುಗಳಲ್ಲಿ ಮಳೆ ನೀರು ನಿಂತಿದೆ. ಹಳ್ಳಕೊಳ್ಳಗಳು ಭರ್ತಿಯಾಗಿವೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದ್ದು, ಸೀನಾ ನದಿ ತುಂಬಿ ಹರಿಯುತ್ತಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದಲ್ಲಿ ಶುಕ್ರವಾರ ಉಗರಗೋಳ–ಯಲ್ಲಮ್ಮನಗುಡ್ಡ ಮಾರ್ಗದಲ್ಲಿನ ಹಳ್ಳ ಉಕ್ಕಿ ಹರಿಯಿತು. ಶನಿವಾರ (ಆಗಸ್ಟ್ 9) ಯಲ್ಲಮ್ಮನಗುಡ್ಡದಲ್ಲಿ ನೂಲು ಹುಣ್ಣಿಮೆ ಪ್ರಯುಕ್ತ ಜಾತ್ರೆ ನಡೆಯಲಿದೆ.
ಮಧ್ಯಾಹ್ನ 3ರಿಂದ ಎರಡು ಗಂಟೆಗೂ ಹೆಚ್ಚು ಸಮಯದಿಂದ ಮಳೆ ಸುರಿದಿದ್ದು, ಹಳ್ಳಗಳು ತುಂಬಿ ಹರಿಯುತ್ತಿವೆ. ಸಂಪರ್ಕ ಕಡಿತಗೊಂಡಿದ್ದು, ಹಳ್ಳದ ಎರಡೂ ಬದಿ ವಾಹನಗಳು ಸಾಲುಗಟ್ಟಿ ನಿಂತಿವೆ. ಹಳ್ಳದ ನೀರು ಉಗರಗೋಳ ಗ್ರಾಮಕ್ಕೂ ನುಗ್ಗಿ, ಕೆಲ ವಾಹನಗಳು ತೇಲಿಹೋಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.