ADVERTISEMENT

ಯೋಗೇಶ್ ಗೌಡ ಕೊಲೆ ಪ್ರಕರಣ; ಆಕ್ಷೇಪಣೆ ಸಲ್ಲಿಕೆಗೆ ಸಿಬಿಐಗೆ ಹೈಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 12:22 IST
Last Updated 4 ಡಿಸೆಂಬರ್ 2019, 12:22 IST
ಯೋಗೇಶ್ ಗೌಡ
ಯೋಗೇಶ್ ಗೌಡ   

ಬೆಂಗಳೂರು:ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸಿಬಿಐಗೆ ಹೈಕೋರ್ಟ್ ನಿರ್ದೇಶಿಸಿದೆ.

ಸಿಬಿಐ ತನಿಖೆ ರದ್ದು ಕೋರಿ ಬಸವರಾಜ ಶಿವಪ್ಪ ಮುತ್ತಗಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ‌.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ‌ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶಶಿಕಿರಣ ಶೆಟ್ಟಿ, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿದ್ದರೂ ಧಾರವಾಡ ಪೊಲೀಸರು ಆರೋಪಿ ಸಂತೋಷ ಸವದತ್ತಿ ಅಲಿಯಾಸ್ ಸ್ಯಾಂಡಿಯನ್ನು ಬಂಧಿಸಿ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಈ‌ ಕ್ರಮ ಕಾನೂನು ಬಾಹಿರವಾಗಿದೆ ಮತ್ತು ಈ‌ ಮೂಲಕ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದೆ’ಎಂದು ಆಕ್ಷೇಪಿಸಿದರು.

ADVERTISEMENT

ಈ‌ ಆ‌ಕ್ಷೇಪಣೆಯನ್ನು ಅಲ್ಲಗೆಳೆದ ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್ ಅವರು, ‘ಆರೋಪಿ ಸ್ಯಾಂಡಿಯನ್ನು 2019ರ ನ.20 ರಂದು ಬಂಧಿಸಲಾಗಿದೆ ಮತ್ತು ಮರುದಿನ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಸ್ಯಾಂಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.‌ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ ತನಿಖಾಧಿಕಾರಿಯು, ಸಿಬಿಐ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವುದನ್ನು ಗಮನಕ್ಕೆ ತಂದಿದ್ದಾರೆ. ಹೀಗಾಗಿ ಹೈಕೋರ್ಟ್ ಆದೇಶ ಉಲ್ಲಂಘನೆ ಆಗಿಲ್ಲ’ಎಂದರು.

‘ಆರೋಪಿ ಜಾಮೀನು ಅರ್ಜಿಯನ್ನೇ ಹಾಕಿಲ್ಲ. ಆತ ನ್ಯಾಯಾಂಗ ವಶದಲ್ಲಿ ಇದ್ದಾನೆ‌ ಮತ್ತು ಹೈಕೋರ್ಟ್ ಆದೇಶವನ್ನು ಕೋರ್ಟ್ ಗಮನಕ್ಕೆ ತರಲಾಗಿದೆ’ಎಂದು ವಿವರಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಪ್ರಕರಣದ ಕಡತ ಹಾಗೂ ದಾಖಲೆಗಳನ್ನು ಮುಖ್ಯ ನ್ಯಾಯಮೂರ್ತಿ ಮತ್ತು ಧಾರವಾಡ ಜಿಲ್ಲಾ ಆಡಳಿತ ಹೊಣೆ ಹೊತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಮುಂದೆ ಮಂಡಿಸುವಂತೆ ಆದೇಶಿಸಿದರು.

ಅಲ್ಲಿಯವರೆಗೂ ಸಿಬಿಐ ತನಿಖೆಗೆ ಈ ಹಿಂದೆ ನೀಡಲಾದ ಮಧ್ಯಂತರ ತಡೆ ಆದೇಶವನ್ನು ಇದೇ 16ರವೆರಗೆ ವಿಸ್ತರಿಸಿದರು. ಈ ಪ್ರಕರಣದ ಕುರಿತು ಸರ್ಕಾರದ ಪರವಾಗಿ ಅಗತ್ಯ ಸಲಹೆ ಹಾಗೂ ಮಾಹಿತಿ ನೀಡಲು ಅಡ್ವೋಕೇಟ್ ಜನರಲ್ ಅವರಿಗೆ ಸೂಚಿಸಿದರು.

ವಿಚಾರಣೆ ವೇಳೆ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಶೀಲವಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.