ADVERTISEMENT

ಲಸಿಕೆಗೆ ಅಡ್ಡಿಯಾದ ಹಿಜಾಬ್‌, ರಜೆ

17,601 ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಎರಡನೇ ಡೋಸ್‌ ಲಸಿಕೆ

ಬಸವರಾಜ ಹವಾಲ್ದಾರ
Published 16 ಫೆಬ್ರುವರಿ 2022, 4:18 IST
Last Updated 16 ಫೆಬ್ರುವರಿ 2022, 4:18 IST

ಹುಬ್ಬಳ್ಳಿ: ಪ್ರೌಢಶಾಲೆ ಹಾಗೂ ಪಿಯುಸಿಯಲ್ಲಿ ಓದುತ್ತಿರುವ 15 ರಿಂದ 18 ವರ್ಷದ ವಿದ್ಯಾರ್ಥಿಗಳಿಗೆ ಜ.3 ರಿಂದ ಕೋವಿಡ್‌ ವ್ಯಾಕ್ಸಿನ್‌ ನೀಡಲು ಆರಂಭಿಸಲಾಗಿತ್ತು. ಬಹುತೇಕ ಕಡೆ ಶಾಲೆಗಳಲ್ಲಿಯೇ ಮಕ್ಕಳಿಗೆ ಮೊದಲ ಡೋಸ್ ನೀಡಲಾಗಿತ್ತು. ಎರಡನೇ ಡೋಸ್‌ ಈಗಾಗಲೇ ನೀಡಬೇಕಾಗಿತ್ತು. ಹಿಜಾಬ್‌ ವಿವಾದ ಹಾಗೂ ರಜೆಯಿಂದಾಗಿ ವಿಳಂಬವಾಗುತ್ತಿದೆ.

ಜ.3 ರಿಂದ ಜ.16ರವರೆಗೆ ಕೋವ್ಯಾಕ್ಸಿನ್‌ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಈಗಾಗಲೇ ಎರಡನೇ ಡೋಸ್‌ ನೀಡಬೇಕಾಗಿತ್ತು. ಪ್ರೌಢ, ಕಾಲೇಜುಗಳಲ್ಲಿ ಎದ್ದಿರುವ ಹಿಜಾಬ್‌ ವಿವಾದದಿಂದಾಗಿ ಶಾಲೆಗಳಲ್ಲಿ ಲಸಿಕಾ ಮೇಳಗಳನ್ನು ಯೋಜಿಸಲು ಸಾಧ್ಯವಾಗುತ್ತಿಲ್ಲ. ವಿಳಂಬವಾದಷ್ಟು ಲಸಿಕೆಯ ಪ್ರಭಾವ ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುತ್ತಾರೆ ವೈದ್ಯರು.

ಹಿಜಾಬ್‌ ವಿವಾದದಿಂದಾಗಿ ಪಿಯುಸಿ ಕಾಲೇಜುಗಳಿಗೆ ವಾರದಿಂದ ರಜೆ ನೀಡಲಾಗಿದೆ. ಹಾಗಾಗಿ, ಕಾಲೇಜುಗಳಲ್ಲಿ ಲಸಿಕಾ ಶಿಬಿರಗಳನ್ನು ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಕಾಲೇಜುಗಳಲ್ಲಿಯೇ ಒಂದೇ ಬಾರಿಗೆ ಹಾಕಿಸಬಹುದು ಎಂದು ಪೋಷಕರೂ ಮಕ್ಕಳಿಗೆ ಲಸಿಕೆ ಹಾಕಿಸಲು ಮುಂದಾಗಿಲ್ಲ. ಬುಧವಾರದಿಂದ ಪಿಯುಸಿ ಕಾಲೇಜುಗಳು ಆರಂಭವಾದರೂ, ಸುಗಮವಾಗಿ ನಡೆಯುತ್ತವೆಯೇ ಎಂಬುದು ಪ್ರಶ್ನೆಯಾಗಿದೆ.

ADVERTISEMENT

‘ಪ್ರೌಢಶಾಲೆಗಳಿಗೂ ನಾಲ್ಕು ದಿನ ರಜೆ ನೀಡಲಾಗಿತ್ತು. ಸೋಮವಾರದಿಂದ ಶಾಲೆಗಳು ಆರಂಭವಾಗಿವೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬಹಳಷ್ಟು ಶಾಲೆಗಳಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯುತ್ತಿರುವುದರಿಂದ ಲಸಿಕಾ ಶಿಬಿರ ಆಯೋಜಿಸಲು ಸಾಧ್ಯವಾಗಿಲ್ಲ. ಪರೀಕ್ಷೆ ಪೂರ್ಣಗೊಳ್ಳುತ್ತಿದ್ದಂತೆಯೇ ಲಸಿಕಾ ಶಿಬಿರ ಆಯೋಜಿಸಲಾಗುವುದು’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌. ಕೆಳದಿಮಠ.

ಮೊದಲ ಡೋಸ್‌ ಪೂರ್ಣಗೊಂಡಿಲ್ಲ: ಜಿಲ್ಲೆಯಲ್ಲಿ 9 ಹಾಗೂ 10ನೇ ತರಗತಿ ಅಧ್ಯಯನ ಮಾಡುತ್ತಿರುವ 62,134 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ನಿರ್ಧರಿಸಲಾಗಿತ್ತು. ಲಸಿಕೆ ಹಾಕಲು ಆರಂಭಿಸಿ ಒಂದೂವರೆ ತಿಂಗಳಾಗುತ್ತಾ ಬಂದರೂ ಗುರಿ ಸಾಧನೆ ಸಾಧ್ಯವಾಗಿಲ್ಲ. ಇಲ್ಲಿಯವರೆಗೆ 56,165 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆ. ಎರಡನೇ ಡೋಸ್ ಇಲ್ಲಿಯವರೆಗೆ 17,601 ಮಂದಿಗೆ ಹಾಕಲಾಗಿದೆ.

‘ಎರಡನೇ ಡೋಸ್‌ ಲಸಿಕೆ ಪಡೆಯಲು ಅರ್ಹರಾದ ಮೇಲೂ ವಿಳಂಬ ಮಾಡಬಾರದು. ಇದರಿಂದ ಮೊದಲ ಡೋಸ್‌ ಲಸಿಕೆಯ ಪ್ರಭಾವ ಕಡಿಮೆಯಾಗುತ್ತಾ ಹೋಗುತ್ತದೆ. ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ನೀಡಿರುವುದರಿಂದ ಲಸಿಕೆ ಶಿಬಿರ ಆಯೋಜಿಸಿಲ್ಲ’ ಎಂದುಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಸಿ. ಕರಿಗೌಡರ ಹೇಳಿದರು.‌

‘ಮೊದಲ ಡೋಸ್‌ಗೆ ಏರ್ಪಡಿಸಿದಂತೆ ಎರಡನೇ ಡೋಸ್‌ಗೂ ಶಾಲೆಗಳಲ್ಲಿ ಶಿಬಿರ ಆಯೋಜಿಸಲಾಗುವುದು. ಈ ಬಗ್ಗೆ ಶಾಲೆಯವರು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಶಿಬಿರಕ್ಕೆ ಸಮಯ ನಿಗದಿ ಮಾಡಲಾಗುವುದು’ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದ ಆಸ್ಪತ್ರೆಗಳಲ್ಲಿ ಪೋಷಕರೊಂದಿಗೆ ತೆರಳಿ ಲಸಿಕೆ ಪಡೆಯಬಹುದಾಗಿದೆ.
ಡಾ.ಬಿ.ಸಿ. ಕರಿಗೌಡರ, ಜಿಲ್ಲಾ ಆರೋಗ್ಯಾಧಿಕಾರಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.