
ಹುಬ್ಬಳ್ಳಿ: ‘ಹಿಂದೂ ಧರ್ಮದಲ್ಲಿ ಮುಕ್ತ ಅಭಿಪ್ರಾಯಕ್ಕೆ ಪ್ರಾಧಾನ್ಯ ಇದೆ. ಬೇರೆ ಯಾವ ಧರ್ಮದಲ್ಲೂ ಇಷ್ಟೊಂದು ಸ್ವಾತಂತ್ರ್ಯವಿಲ್ಲ’ ಎಂದು ಲೇಖಕ ಎನ್. ಜಗದೀಶ ಕೊಪ್ಪ ಅಭಿಪ್ರಾಯಪಟ್ಟರು.
ಇಲ್ಲಿಯ ಕೊಯಿನ್ ರಸ್ತೆಯ ಲಕ್ಷ್ಮೀ ಮಾಲ್‌ನಲ್ಲಿರುವ ಸಪ್ನ ಬುಕ್ ಹೌಸ್‌ನಲ್ಲಿ ತಮ್ಮ ರಚನೆಯ ‘ದಂಗೆಯ ದಿನಗಳು’ ಕೃತಿ ಕುರಿತ ಸಂವಾದದಲ್ಲಿ ಸೋಮವಾರ ಅವರು ಪಾಲ್ಗೊಂಡರು.
‘ಹಿಂದೂ ಧರ್ಮದಲ್ಲಿ ಮುಕ್ತ ಸ್ವಾತಂತ್ರ್ಯವಿದೆ. ನಕಾರಾತ್ಮಕ ವಿಶ್ಲೇಷಣೆಗಿಂತ ಸಕಾರಾತ್ಮಕ ಚಿಂತನೆಗೆ ಪಾಧಾನ್ಯ ನೀಡುವ ಅಗತ್ಯವಿದೆ’ ಎಂದು ಹೇಳಿದರು.
‘ಪ್ರತಿ ಗ್ರಾಮ, ಜಿಲ್ಲೆಯಲ್ಲಿಯೂ ಪ್ರತಿರೋಧ ಮನೋಭಾವ ಇರುತ್ತದೆ. ಅಲ್ಲಿಯ ಸಾಮಾಜಿಕ ಅಸಮತೋಲನ, ಪದ್ಧತಿ ವಿರುದ್ಧ ಧ್ವನಿ ಎತ್ತಲಾಗುತ್ತದೆ. ಈ ರೀತಿಯ ಒಟ್ಟುಗೂಡಿದ ವಿಷಯವೇ ‘ದಂಗೆಯ ದಿನಗಳು’ ಎಂದು ತಿಳಿಸಿದರು.
‘ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿ ಇಂಥ ದಂಗೆಗಳು ನಡೆದಿವೆ. ಭಕ್ತಿ ಪಂಥ, ಚಾರ್ವಾಕ ದರ್ಶನ ಹೀಗೆ ಹತ್ತು ಹಲವು ವಿಷಯಗಳು ಲೇಖನಗಳಾಗಿ ಪರಿವರ್ತನೆಗೊಂಡಿವೆ. ಪ್ರತಿಯೊಂದನ್ನೂ ದಾಖಲೆಯಾಗಿ ಇಟ್ಟುಕೊಂಡು ಸಂಶೋಧನಾತ್ಮಕ ರೀತಿಯಲ್ಲಿ ಅಕ್ಷರ ರೂಪಕ್ಕೆ ಇಳಿಸಲಾಗಿದೆ’ ಎಂದರು.
ಸಪ್ನ ಬುಕ್ ಹೌಸ್ ಹುಬ್ಬಳ್ಳಿ ಶಾಖೆ ಮುಖ್ಯಸ್ಥ ಎಂ.ವಿ. ರಘು ಮಾತನಾಡಿ, ‘ಈ ಕೃತಿಯು ಸಂಶೋಧನಾತ್ಮಕವಾಗಿ ಹೊರ ಬಂದಿದೆ. ಪಠ್ಯವಾಗಿಯೂ ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಓದುಗರಾದ ವೆಂಕಟೇಶ ಮಾಚಕನೂರ, ಲಕ್ಷ್ಮೀಕಾಂತ ಇಟ್ನಾಳ, ಶಿಲ್ಪಾ ಶೆಟ್ಟರ್, ಕೋಡಿ ಗೌಡ್ರ ಅಭಿಪ್ರಾಯ ಹಂಚಿಕೊಂಡರು. ಮೇಘನಾ ರಘು ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.