
ಹುಬ್ಬಳ್ಳಿ: ನಿರಂತರ ಜಾಗೃತಿ ಕಾರ್ಯಕ್ರಮಗಳಿಂದ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ.
2023–24ರಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ 482 ಇತ್ತು. ಪ್ರಸಕ್ತ ವರ್ಷ ಅಕ್ಟೋಬರ್‌ವರೆಗೆ 237 ಜನರಲ್ಲಿ ಮಾತ್ರ ಸೋಂಕು ಕಂಡು ಬಂದಿದೆ. ಅಲ್ಲದೆ, ಯಾವುದೇ ಶಿಶುವಿನಲ್ಲಿ ಸೋಂಕು ಕಂಡು ಬಂದಿಲ್ಲ.
ಗರ್ಭಿಣಿಯರಲ್ಲೂ ಸೋಂಕಿನ ಪ್ರಮಾಣ ತಗ್ಗಿದೆ. 2021–22ರಲ್ಲಿ 44,720 ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 24 ಗರ್ಭಿಣಿಯರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಈ ವರ್ಷ ಅದು ಏಳಕ್ಕೆ ಇಳಿದಿದೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಿಂದ (ಕೆಎಸ್‌ಎಪಿಎಸ್) ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿರುವುದರ ಪರಿಣಾಮ ಜನರಲ್ಲಿ ಜಾಗೃತಿ ಮೂಡಿದೆ.
ಜಿಲ್ಲೆಯಲ್ಲಿ ಬೆಳಕು ಮಹಿಳಾ ಸಂಘ ಮತ್ತು ಸಹನಾ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘಗಳು ಸಹ ಜಾಗೃತಿಯಲ್ಲಿ ತೊಡಗಿವೆ. ಸೋಂಕು ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಮತ್ತು ಅಪಾಯದ ಸಮುದಾಯಗಳಿಂದ ಸಾಮಾನ್ಯ ಜನರವರೆಗೂ ವಿಸ್ತರಿಸಿದೆ. ಇದನ್ನು ತಡೆಗಟ್ಟಲು ಜಾಗೃತಿಯೊಂದೇ ಮದ್ದಾಗಿದೆ.
‘ಜಾನಪದ ಕಲಾ ತಂಡಗಳಿಂದ ಐಇಸಿ ಕಾರ್ಯಕ್ರಮದ ಭಾಗವಾಗಿ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಶಿಬಿರಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಲೈಂಗಿಕ ಕಾರ್ಯಕರ್ತೆಯರು ಹೆಚ್ಚು ಇರುವ ಕಡೆ, ಹೆದ್ದಾರಿ ಬದಿ ಜಾಗೃತಿ ಮೂಡಿಸುವ ಜತೆಗೆ ಪರೀಕ್ಷೆ ಮಾಡಲಾಗುತ್ತಿದೆ. ಎಆರ್‌ಟಿ ಕೆಂದ್ರಗಳಲ್ಲಿ ಸೋಂಕಿತರು ಸರಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೋ, ಇಲ್ಲವೋ ಎಂಬ ಬಗ್ಗೆ ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿ ಡಾ.ರವೀಂದ್ರ ಭೋವೇರ ಹೇಳಿದರು.
ಸೋಂಕಿತರು ಸರಿಯಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಅವರ ಮನೆಗಳಿಗೆ ತೆರಳಿ ಎನ್‌ಜಿಒಗಳ ಸದಸ್ಯರು ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ, ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸಿ, ಅವರಿಗೆ ಪರೀಕ್ಷೆ ಮಾಡಿಸಿ, ಪಾಸಿಟಿವ್ ಬಂದರೆ ಎಆರ್‌ಟಿ ಕೇಂದ್ರಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ತಿಳಿಸಿದರು.
ತಾಯಿಯಿಂದ ಮಗುವಿಗೆ ಸೋಂಕು ಬರುವುದನ್ನು ತಡೆಗಟ್ಟಲು ಗರ್ಭಿಣಿಯರಿಗೆ ಪರೀಕ್ಷೆ ಮಾಡಲಾಗುತ್ತದೆ. ಪಾಸಿಟಿವ್ ಕಂಡು ಬಂದರೆ ಎಆರ್‌ಟಿ ಚಿಕಿತ್ಸೆ ಆರಂಭಿಸಲಾಗುತ್ತದೆ. ಹೆರಿಗೆ ಆದ ನಂತರ ಶಿಶುವಿಗೆ ಆರು ವಾರ, ಆರು ತಿಂಗಳು, 12 ತಿಂಗಳು ಮತ್ತು 18 ತಿಂಗಳಿಗೆ ಲಸಿಕೆ ಹಾಕಲಾಗುತ್ತಿದೆ. ಅಲ್ಲದೆ ಬಿಬಿಎಸ್ ಪರೀಕ್ಷೆ ಮಾಡಲಾಗುತ್ತದೆ. ಆ ವರದಿ ಅನ್ವಯ ಈವರೆಗೆ ಶಿಶುಗಳಲ್ಲಿ ಸೋಂಕು ಕಂಡು ಬಂದಿಲ್ಲ ಎಂದರು.
ಹರಡುವ ವಿಧಾನ: ಬಹುತೇಕ ಅಸುರಕ್ಷಿತ ಲೈಂಗಿಕ ಕ್ರಿಯೆ ಮೂಲಕವೇ ಈ ಸೋಂಕು ಹರಡುತ್ತದೆ. ಹೀಗಾಗಿ ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬಳಸಬೇಕು. ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾಂಡೋಮ್‌ಗಳನ್ನು ಇಡಲಾಗುತ್ತದೆ. ಅವುಗಳನ್ನು ಉಚಿತವಾಗಿ ತೆಗೆದುಕೊಂಡು ಹೋಗಿ ಬಳಸಬಹುದು ಎಂದು ರವೀಂದ್ರ ಭೋವೇರ ತಿಳಿಸಿದರು.
ಪರೀಕ್ಷೆ ಮಾಡದ ರಕ್ತ, ಸಂಸ್ಕರಿಸದ ಸಿರಿಂಜ್ ಮತ್ತು ಸೋಂಕಿತ ತಾಯಿಯಿಂದಲೂ ಶಿಶುವಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಸೋಂಕು ನಿಯಂತ್ರಣಕ್ಕಾಗಿ ರಕ್ತವನ್ನು ಐದು ಹಂತಗಳಲ್ಲಿ ಪರೀಕ್ಷಿಸಲಾಗುತ್ತದೆ. ಗರ್ಭಿಣಿಯನ್ನು ಮೂರು ಹಂತದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದರು.
ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನ: ಪ್ರತಿ ವರ್ಷ ಡಿ.1ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. ಇದರ ಅಂಗವಾಗಿ ಧಾರವಾಡದಲ್ಲಿ ಅಂದು ವಿವಿಧ ಕಲಾತಂಡಗಳೊಂದಿಗೆ ಜಾಥಾ ನಡೆಯಲಿದೆ. ಜಿಲ್ಲಾಧಿಕಾರಿ, ಜಿಲ್ಲಾ ನ್ಯಾಯಾಧೀಶರು ಸೇರಿ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
‘ಅಡೆತಡೆಗಳನ್ನು ನಿವಾರಿಸಿ, ಏಡ್ಸ್ ಪ್ರತಿಕ್ರಿಯೆಯನ್ನು ಪರಿವರ್ತಿಸಿ’ ಎಂಬುದು ಪ್ರಸಕ್ತ ವರ್ಷದ ಏಡ್ಸ್ ದಿನದ ಘೋಷವಾಕ್ಯ. 2030ರ ವೇಳೆಗೆ ಸೋಂಕಿತರ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿ ಹೊಂದಲಾಗಿದೆ.
ನಿರಂತರ ಜಾಗೃತಿಯಿಂದ ಯುವ ಜನರಲ್ಲಿ ಆರೋಗ್ಯ ಪ್ರಜ್ಞೆ ಮೂಡಿದೆ. ಸುರಕ್ಷಿತ ಲೈಂಗಿಕ ಕ್ರಿಯೆ ಅನುಸರಿಸುತ್ತಿದ್ದಾರೆ. ಹೀಗಾಗಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆಡಾ.ರವೀಂದ್ರ ಭೋವೇರ ಅಧಿಕಾರಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ
ಗುರಿ ಆಧಾರಿತ ಕಾರ್ಯಕ್ರಮ
‘ಜಿಲ್ಲೆಯಲ್ಲಿ 3500ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರಿದ್ದು ಅವರಿಗೆ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಡಿ (ಕೆಎಸ್‌ಎಪಿಎಸ್) ಗುರಿ ಆಧಾರಿತ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುತ್ತಿದೆ’ ಎಂದು ‘ಬೆಳಕು’ ಮಹಿಳಾ ಸಂಘದ ಕಾರ್ಯಕ್ರಮ ವ್ಯವಸ್ಥಾಪಕ ಸಂತೋಷ್‌ಕುಮಾರ್ ಮುದಗಲ್ ಹೇಳಿದರು. ‘ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸಿ ಅವರಿಗೆ ಎಚ್‌ಐವಿ ಪರೀಕ್ಷೆ ಮಾಡಿಸಲಾಗುತ್ತದೆ. ಅವರ ಮಾಹಿತಿ ಗೋಪ್ಯವಾಗಿ ಇಡಲಾಗುತ್ತದೆ. ಲೈಂಗಿಕ ಕಾಯಿಲೆಗಳ ಬಗ್ಗೆ ಅವರಿಗೆ ತಿಳಿವಳಿಕೆ ನೀಡುವ ಜತೆಗೆ ಕಾಯಿಲೆ ಇದ್ದರೆ ಚಿಕಿತ್ಸೆ ಕೊಡಿಸಲಾಗುತ್ತದೆ. ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವಂತೆ ಪ್ರತಿ ತಿಂಗಳು ಉಚಿತವಾಗಿ ಕಾಂಡೋಮ್‌ಗಳನ್ನು ವಿತರಿಸಲಾಗುತ್ತದೆ’ ಎಂದರು. ‘ಅವರನ್ನು ಮುಖ್ಯ ವಾಹಿನಿಗೆ ತರುವುದು ನಮ್ಮ ಉದ್ದೇಶ. ಅವರಿಗೆ ಸರ್ಕಾರದ ಚೇತನಾ ಯೋಜನೆಯಡಿ ಸ್ವಉದ್ಯೋಗಕ್ಕೆ ಸಾಲ ಕೊಡಿಸಲಾಗುತ್ತದೆ. ನಮ್ಮ ಸಂಘದ ಅಡಿ 41 ಅಡಿ ಜನ ಕೆಲಸ ಮಾಡುತ್ತಿದ್ದಾರೆ’ ಎಂದರು.
ಸೋಂಕಿತರ ಕಾಡುವ ಟಿ.ಬಿ
ಎಚ್‌ಐವಿ ಸೋಂಕಿತರನ್ನು ಕ್ಷಯರೋಗ (ಟಿ.ಬಿ) ಕಾಡುತ್ತದೆ. ಹೀಗಾಗಿ ಸ್ವಚ್ಛತೆ ಪೌಷ್ಟಿಕ ಆಹಾರ ಸೇವನೆಗೆ ಒತ್ತು ಕೊಡಬೇಕು. ಅಪಾಯಕಾರಿ ಪರಿಶ್ರಮದ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬಾರದು. ಆರಾಮದಾಯಕ ಜೀವನಶೈಲಿಯಿಂದ ಟಿಬಿ ಬಾರದಂತೆ ಎಚ್ಚರಿಕೆ ವಹಿಸಬೇಕು. ನಿರಂತರವಾಗಿ ಜ್ವರ ಚರ್ಮ ಸಂಬಂಧಿತ ಕಾಯಿಲೆ ಟಿಬಿ ಲಕ್ಷಣಗಳು ಕಂಡು ಬಂದರೆ ತಕ್ಷಣ ತಪಾಸಣೆ ಒಳಗಾಗಿ ಚಿಕಿತ್ಸೆ ಪಡೆಯಬೇಕು. ಸೋಂಕಿತರಿಗೆ ಬದುಕುವ ಘನತೆ ಮತ್ತು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಮಾಸಾಶನ ಪೌಷ್ಟಿಕ ಆಹಾರ ಸೋಂಕಿತ ಮಕ್ಕಳಿಗೆ ಪದವಿವರೆಗೆ ಉಚಿತ ಶಿಕ್ಷಣ ಕಾನೂನು ನೆರವು ನೀಡಲಾಗುತ್ತದೆ.
ಪ್ರಮುಖ ಅಂಶಗಳು
ಸೋಂಕು ದೃಢಪಟ್ಟರೆ ಜೀವನವಿಡಿ ಚಿಕಿತ್ಸೆ ಪಡೆಯಬೇಕು
ಪೌಷ್ಟಿಕ ಆಹಾರ ನಿಯಮಿತವಾಗಿ ಔಷಧಿ ಸೇವಿಸಬೇಕು
ಸೋಂಕಿತರದಲ್ಲಿ ಆತ್ಮವಿಶ್ವಾಸ ಸಕಾರಾತ್ಮಕ ಚಿಂತನೆ ಅಗತ್ಯ
ಉತ್ತಮ ಚಿಕಿತ್ಸೆಯಿಂದ ಸೋಂಕಿತರು 25 ವರ್ಷ ಆರಾಮದಾಯಕ ಜೀವನ ನಡೆಸಬಹುದು
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಚ್‍ಐವಿ ಸೋಂಕಿತರಿಗೆ ಪರೀಕ್ಷೆ ಮಾಡಲಾಗುತ್ತದೆ
ಹುಬ್ಬಳ್ಳಿಯ ಕೆಎಂಸಿಆರ್‌ಐ ಧಾರವಾಡ ಜಿಲ್ಲಾಸ್ಪತ್ರೆ ಮತ್ತು ನವಲಗುಂದ ಕಲಘಟಗಿ ಕುಂದಗೋಳ ತಾಲ್ಲೂಕು ಆಸ್ಪತ್ರೆಗಳಲ್ಲಿ ಔಷಧೋಪಚಾರ ಲಭ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.