ಧಾರವಾಡ: ಸಾಹಿತ್ಯ ಲೋಕದಲ್ಲಿ ಧಾರವಾಡವು ತನ್ನ ಶ್ರೇಷ್ಠತೆ ಉಳಿಸಿಕೊಳ್ಳಬೇಕಾದರೆ ಇಲ್ಲಿನ ವಿಶ್ವವಿದ್ಯಾಲಯಗಳು ತಮ್ಮ ಉತ್ತುಂಗವನ್ನು ಕಾಪಾಡಿಕೊಂಡೇ ಇರಬೇಕು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್ ಮತ್ತು ಮನೋಹರ ಗ್ರಂಥಮಾಲಾ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಕೀರ್ತಿನಾಥ ಕುರ್ತಕೋಟಿ ಅವರ ‘ವಾಗರ್ಥ’ ಹಾಗೂ ಕಮಲಾಕರ್ ಭಟ್ ಅವರು ಅನುವಾದಿಸಿರುವ ‘ಕರ್ಟಸಿ ಆಫ್ ಕ್ರಿಟಿಸಿಸಂ’ (ಕೀರ್ತಿನಾಥ ಕುರ್ತಕೋಟಿ ಅವರ ಕೆಲವು ಲೇಖನಗಳ ಸಂಗ್ರಹ) ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
‘ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಾಯಂ ಅಧ್ಯಾಪಕರ ಸಂಖ್ಯೆ ಕಡಿಮೆಯಾಗಿದೆ. ಶೇ 80ರಷ್ಟು ಹುದ್ದೆಗಳು ಖಾಲಿ ಇದ್ದರೆ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುವುದಾದರೂ ಹೇಗೆ? ಅನುದಾನ ಇಲ್ಲದಿದ್ದರೆ ಅಭಿವೃದ್ಧಿ ಅಪೇಕ್ಷಿಸಲು ಹೇಗೆ ಸಾಧ್ಯ? ಈ ಕುರಿತು ವಿಶ್ವವಿದ್ಯಾಲಯದ ಸಿಂಡಿಕೇಟ್‌ನಲ್ಲಿ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಬೇಕು’ ಎಂದು ಸಲಹೆ ನೀಡಿದರು.
‘ಕನ್ನಡ, ಸಾಹಿತ್ಯದ ವಿಚಾರಗಳು ಚರ್ಚೆಯಾದಾಗ ಕರ್ನಾಟಕ ವಿಶ್ವವಿದ್ಯಾಲಯದ ಕಡೆಗೆ ನೋಡುವ ಕಾಲವೊಂದಿತ್ತು. ಕನ್ನಡಕ್ಕೆ ಗಂಡಾಂತರ ಎದುರಾದಾಗ ಸರ್ಕಾರ, ರಾಜಕಾರಣಿಗಳು, ಸಾಮಾಜಿಕ–ಸಾಂಸ್ಖೃತಿಕ ನಾಯಕರು ಧಾರವಾಡದ ಕಡೆಗೆ ನೋಡುತ್ತಿದ್ದರು’ ಎಂದರು.
‘ಅಧಿಕಾರಿಗಳು ಧಾರವಾಡವನ್ನು ವಾಣಿಜ್ಯಿಕವಾಗಿ ಬೆಳಸುವುದರ ಜೊತೆಗೆ ಸಾಹಿತ್ಯ ಚಟುವಟಿಕೆಗಳಿಗೆ ಗಮನ ನೀಡಬೇಕು. ಸಾಹಿತ್ಯ ಕ್ಷೇತ್ರಕ್ಕೆ ಅನುದಾನ ಸೆಳೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಧಾರವಾಡದಲ್ಲಿ ಸಾಹಿತ್ಯದ ಆಸಕ್ತಿ ಇನ್ನೂ ಕುಂದುವ ಸಾಧ್ಯತೆ ಇದೆ. ಸಾಹಿತ್ಯಕ ಚಟುವಟಿಕೆ ಹೆಚ್ಚು ನಡೆಯಬೇಕು. ಸಾಹಿತ್ಯ ಪರಿಷತ್ತಿನವರು ಹೆಚ್ಚು ಕೆಲಸ ಮಾಡಬೇಕು’ ಎಂದರು.
‘ಕೀರ್ತಿನಾಥ ಕುರ್ತಕೋಟಿ ಅವರು ಕುಮಾರವ್ಯಾಸ ಮತ್ತು ದ.ರಾ.ಬೇಂದ್ರೆ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮತ್ತು ವಿಮರ್ಶೆ ಮಾಡಿದ ಸಾಹಿತಿ. ಅವರ ಹೆಸರಿನಲ್ಲಿ ಸರ್ಕಾರದಿಂದ ವಿಮರ್ಶಾ ಪ್ರಶಸ್ತಿ ಆರಂಭಿಸಲು ಮತ್ತು ಅವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಲು ಪ್ರಯತ್ನ ಮಾಡುತ್ತೇನೆ. ಗದಗ ಜಿಲ್ಲಾ ಸಾಹಿತಿಗಳ ಶ್ರೇಷ್ಠ ಕೃತಿಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಕುರ್ತಕೋಟಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.
‘ಪ್ರಜಾವಾಣಿ‘ ಮುಖ್ಯ ಉಪಸಂಪಾದಕ ಎಸ್. ಸೂರ್ಯಪ್ರಕಾಶ ಪಂಡಿತ ಮಾತನಾಡಿ, ‘ಬೇಂದ್ರೆ ಅವರ ವಾಕ್‌ತತ್ವಕ್ಕೆ ಅರ್ಥವಾದವರು ಕುರ್ತಕೋಟಿ. ಅಂದರೆ, ಬೇಂದ್ರೆ ಶಬ್ದವಾದರೆ ಕುರ್ತಕೋಟಿ ಅರ್ಥ. ವಾಕ್ ಮತ್ತು ಅರ್ಥಗಳ ಬೆಸುಗೆಯ ಬಿಂದುವಾಗಿ ಇವರಿಬ್ಬರ ಸಂಬಂಧ ಅದ್ಭುತವಾಗಿತ್ತು. ಬೇಂದ್ರೆ ಅವರ ಕುರಿತ ಸಮಗ್ರ ಬರಹಗಳು ‘ವಾಗರ್ಥ’ ಕೃತಿಯಲ್ಲಿ ಇವೆ’ ಎಂದರು.
ಪ್ರೊ.ವಿನಾಯಕ ನಾಯಕ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಪ್ರೊ.ಕಮಲಾಕರ ಭಟ್, ಮನೋಹರ ಗ್ರಂಥಮಾಲಾದ ಸಮೀರ ಜೋಶಿ, ಲೇಖಕ ಹ.ವೆಂ. ಕಾಖಂಡಿಕಿ ಇದ್ದರು.
ಕೀರ್ತಿನಾಥ ಕುರ್ತಕೋಟಿ ಅವರ ಹೆಸರಿನಲ್ಲಿ ಸರ್ಕಾರವು ವಿಮರ್ಶಾ ಪ್ರಶಸ್ತಿ ಆರಂಭಿಸಬೇಕು. ಅವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಬೇಕು.-ಕೃಷ್ಣಕಟ್ಟಿ ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್
ಪುಸ್ತಕ ವಿವರ ಕೃತಿ: ವಾಗರ್ಥ
ಕೃತಿಕಾರ: ಕೀರ್ತಿನಾಥ ಕುರ್ತಕೋಟಿ
ಪ್ರಕಾಶನ: ಮನೋಹರ ಗ್ರಂಥಮಾಲಾ ಧಾರವಾಡ
ಪುಟ: 756
ಬೆಲೆ: ₹ 1200
ಪುಸ್ತಕ ವಿವರ ಕೃತಿ: ಕರ್ಟಸಿ ಆಫ್ ಕ್ರಿಟಿಸಿಸಂ
ಅನುವಾದಕ: ಕಮಲಾಕರ ಭಟ್
ಪ್ರಕಾಶನ: ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ಗುರುಗಾಂವ್ ಹರಿಯಾಣ
ಪುಟ: 434 ಬೆಲೆ: ₹ 599
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.