ADVERTISEMENT

ಹುಬ್ಬಳ್ಳಿ | ಹಾಸ್ಟೆಲ್‌ ಅಧೋಗತಿ; ಕೊಠಡಿಯಲ್ಲಿ ಫೈರ್‌ ಕ್ಯಾಂಪ್‌

ಹುಬ್ಬಳ್ಳಿ ನೃಪತುಂಗ ಬೆಟ್ಟದ ತಪ್ಪಲಿನಲ್ಲಿರುವ ಅನುದಾನಿತ ಜಗಜೀವನ್‌ ರಾಮ್‌ ವಸತಿ ನಿಲಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 2:37 IST
Last Updated 16 ನವೆಂಬರ್ 2025, 2:37 IST
ಹುಬ್ಬಳ್ಳಿಯ ನೃಪತುಂಗ ಬೆಟ್ಟದ ತಪ್ಪಲಿನಲ್ಲಿರುವ ಜಗಜೀವನ್‌ ರಾಮ್‌ ಅನುದಾನಿತ ಬಾಲಕರ ವಸತಿ ನಿಲಯದ ಕೊಠಡಿಯೊಂದರ ದೃಶ್ಯ
ಹುಬ್ಬಳ್ಳಿಯ ನೃಪತುಂಗ ಬೆಟ್ಟದ ತಪ್ಪಲಿನಲ್ಲಿರುವ ಜಗಜೀವನ್‌ ರಾಮ್‌ ಅನುದಾನಿತ ಬಾಲಕರ ವಸತಿ ನಿಲಯದ ಕೊಠಡಿಯೊಂದರ ದೃಶ್ಯ   

ಹುಬ್ಬಳ್ಳಿ: ನಗರದ ನೃಪತುಂಗ ಬೆಟ್ಟದ ತಪ್ಪಲಿನಲ್ಲಿರುವ ಜಗಜೀವನ್‌ ರಾಮ್‌ ಅನುದಾನಿತ ಬಾಲಕರ ವಸತಿ ನಿಲಯ ಅವಸಾನದ ಅಂಚಿಗೆ ತಲುಪಿದೆ. 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ವಾಸವಿದ್ದು, ಊಟ–ತಿಂಡಿ ಹೊರತುಪಡಿಸಿ ಮತ್ಯಾವ ಸೌಲಭ್ಯಗಳು ಇಲ್ಲದೆ ಪರದಾಡುತ್ತಿದ್ದಾರೆ.

ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ಕಟ್ಟಡಕ್ಕೆ ಇದೀಗ 45 ವರ್ಷ. ಧಾರವಾಡ ಜಿಲ್ಲಾ ಆದಿಜಾಂಭವ ಸಂಘದ ಅಧೀನದಲ್ಲಿ ಸರ್ಕಾರದ ಅನುದಾನ ಪಡೆದು ನಿರ್ವಹಣೆ ಮಾಡಲಾಗುತ್ತಿದೆ. ಎರಡು ಅಂತಸ್ತಿನ ಈ ಕಟ್ಟಡದಲ್ಲಿ 30ಕ್ಕೂ ಹೆಚ್ಚು ಕೊಠಡಿಗಳಿದ್ದು, ಬಹುತೇಕ ಹಾಳಾಗಿವೆ. ಕಟ್ಟಡದ ಗೋಡೆಗಳು, ಸ್ಲ್ಯಾಬ್‌ಗಳು, ಫಿಲ್ಲರ್‌ಗಳು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಕೆಲವೆಡೆ ಸಿಮೆಂಟ್‌ ಪ್ಲಾಸ್ಟರ್‌ ಉದುರಿ ಬಿದ್ದಿವೆ. ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಮುರಿದಿವೆ. ಪ್ರವೇಶದ್ವಾರದ ಪಕ್ಕದಲ್ಲಿಯ ಕಿಟಕಿಯ ಗಾಜು ಒಡೆದಿದ್ದರಿಂದ, ಒಳಗಿನಿಂದ ರಟ್ಟಿನ ತುಂಡು ಅಳವಡಿಸಲಾಗಿದೆ.

ಕಟ್ಟಡದ ಕೆಳ ಅಂತಸ್ತಿನಲ್ಲಿ ಮಕ್ಕಳು ವಾಸಿಸುವ ಮೂರು–ನಾಲ್ಕು ಕೊಠಡಿಗಳು ಮಾತ್ರ ಸಾಧಾರಣ ಎನ್ನುವಂತಿವೆ. ಕೆಲವು ಕೊಠಡಿಗಳ ಬಾಗಿಲು ಮುರಿದಿದ್ದರೆ, ಮತ್ತೆ ಕೆಲವು ಕೊಠಡಿಗಳ ನೆಲ ಹಾಳಾಗಿದೆ. ಕೆಲವು ಕೊಠಡಿಗಳಲ್ಲಿ ಹಳೇ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟು, ಗೋದಾಮು ಆಗಿ ಪರಿವರ್ತಿಸಲಾಗಿದೆ. ನಿಲಯದ ತುಂಬೆಲ್ಲಾ ಜೇಡರ ಬಲೆಗಳೇ ತುಂಬಿಕೊಂಡಿವೆ. ಮಳೆ ಬಂದಾಗ ಕಟ್ಟಡ ತುಂಬೆಲ್ಲ ನೀರು ಸೋರುತ್ತದೆ.

ADVERTISEMENT

ಎರಡನೇ ಅಂತಸ್ತಿನಲ್ಲಿರುವ ಕೆಲವು ಕೊಠಡಿಗಳಲ್ಲಿ ರಾತ್ರಿ ವೇಳೆ ಮೋಜು–ಮಸ್ತಿ ಮಾಡುತ್ತಿರುವ ಕುರುಹುಗಳಿವೆ. ಕೆಲವು ವಸ್ತುಗಳನ್ನು ಸುಟ್ಟು ಫೈರ್‌ ಕ್ಯಾಂಪ್‌ ಹಾಕಿರುವ ದೃಶ್ಯಗಳು ಕಾಣಿಸುತ್ತವೆ. ಬಹುತೇಕ ಕೊಠಡಿಗಳು ದೂಳು ಹಿಡಿದಿದ್ದು, ಕಬೋರ್ಡ್‌ಗಳು ಸಹ ಹಾಳಾಗಿವೆ. ನಿರ್ವಹಣೆ ಕೊರತೆ ಹಾಗೂ ನಿರ್ಲಕ್ಷ್ಯದಿಂದಾಗಿ ಬಡ ಮಕ್ಕಳ ವಸತಿ ನಿಲಯ ಪಾಳುಬಿದ್ದ ಕಟ್ಟಡದಂತೆ ಗೋಚರಿಸುತ್ತಿದೆ.

‘ನೀರಿನ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಎರಡು–ಮೂರು ದಿನಕ್ಕೊಮ್ಮೆ ಸ್ನಾನ ಮಾಡುತ್ತೇವೆ. ಶೌಚಾಲಯ ಹಾಗೂ ಸ್ನಾನದ ಗೃಹಗಳು ಹಾಳಾಗಿದ್ದು ತುರ್ತಾಗಿ ದುರಸ್ತಿಪಡಿಸಬೇಕು. ರಾತ್ರಿ ವೇಳೆ ಓದಲು ಒಮ್ಮೊಮ್ಮೆ ದೀಪದ ವ್ಯವಸ್ಥೆಯೂ ಇರುವುದಿಲ್ಲ. ನಾವೆಲ್ಲ ಕೊಪ್ಪಳ, ನವಲಗುಂದ, ಹಾವೇರಿ, ಗದಗ ಭಾಗದಿಂದ ಓದಬೇಕೆಂಬ ಆಸೆಯಿಂದ ಬಂದ ಬಡ ಕುಟುಂಬದ ಮಕ್ಕಳು. ಕನಿಷ್ಠ ಮೂಲಸೌಲಭ್ಯವನ್ನಾದರೂ ಒದಗಿಸಿದರೆ ಅನುಕೂಲವಾಗುತ್ತದೆ’ ಎಂದು ವಸತಿ ನಿಲಯದ ವಿದ್ಯಾರ್ಥಿಗಳು ಹೇಳುತ್ತಾರೆ.

‘ಈ ಹಿಂದೆ ಸ್ಥಳೀಯ ವಿದ್ಯಾರ್ಥಿಗಳು ಸೇರಿದಂತೆ ಧಾರವಾಡ ಜಿಲ್ಲೆಯ ಸುತ್ತಮುತ್ತಲಿನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿಯಿದ್ದು, ಪಕ್ಕದಲ್ಲಿರುವ ಜನತಾ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಸೌಲಭ್ಯದ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಅನುದಾನಿತ ವಸತಿ ನಿಲಯವಾಗಿದ್ದರಿಂದ, ಸರ್ಕಾರ ಪ್ರತಿ ತಿಂಗಳು ಪ್ರತಿ ವಿದ್ಯಾರ್ಥಿಗೆ ಊಟ–ಉಪಾಹಾರಕ್ಕಷ್ಟೇ ₹1,000 ಸಹಾಯಧನ ನೀಡುತ್ತದೆ. ಅದು ಸಹ ಎರಡು–ಮೂರು ತಿಂಗಳಿಗೊಮ್ಮೆ ಬಿಡುಗಡೆಯಾಗುತ್ತದೆ’ ಎಂದು ವಸತಿ ನಿಲಯದ ಸಮಿತಿಯ ಅಧ್ಯಕ್ಷ ವಸಂತ ಜೋಗಣ್ಣವರ ತಿಳಿಸಿದರು.

ವಸತಿ ನಿಲಯದ ಪ್ರವೇಶದ್ವಾರದ ಬಲಭಾಗದ ಕಿಟಕಿಯ ಗಾಜು ಒಡೆದು ರಟ್ಟು ಅಳವಡಿಸಿರುವುದು ಹಾಗೂ ಚಾವಣಿಯ ಪ್ಲಾಸ್ಟರ್‌ ಕಿತ್ತು ಹೋಗಿದೆ
ಶೀಘ್ರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಮಕ್ಕಳ ಕಲಿಕೆಗೆ ಸಮಸ್ಯೆಯಾಗದಂತೆ ಮೂಲಸೌಲಭ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು
ದಿವ್ಯಪ್ರಭು ಜಿಲ್ಲಾಧಿಕಾರಿ
ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾಯ್ತಿ ವತಿಯಿಂದ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ತಾಲ್ಲೂಕಾಡಳಿತಕ್ಕೆ ನಿರ್ದೇಶನ ನೀಡಿ ತುರ್ತು ಕ್ರಮಕ್ಕೆ ಸೂಚಿಸಲಾಗುವುದು
ಭುವನೇಶ ಪಾಟೀಲ್ ಸಿಇಒ ಜಿ.ಪಂ ಧಾರವಾಡ
ವಸತಿ ನಿಲಯ ದುರಸ್ತಿ ಮತ್ತು ನಿರ್ವಹಣೆ ಕಷ್ಟವಾಗುತ್ತಿದೆ. ಹೀಗೆ ಮುಂದುವರಿದರೆ ಯಾವುದಾದರೂ ಚಾರಿಟೇಬಲ್‌ಗೆ ಅಥವಾ ಸರ್ಕಾರಕ್ಕೆ ವಹಿಸಿಕೊಡುವ ಯೋಚನೆ ಇದೆ
ವಸಂತ ಜೋಗಣ್ಣವರ ಅಧ್ಯಕ್ಷ ವಸತಿ ನಿಲಯ ಸಮಿತಿ

‘ಅನುದಾನ ಸಾಲುತ್ತಿಲ್ಲ ಪ್ರಸ್ತಾವಕ್ಕೆ ಬೆಲೆಯಿಲ್ಲ’

‘ಧಾರವಾಡ ಜಿಲ್ಲಾ ಆದಿಜಾಂಭವ ಸಂಘದ ಆಶ್ರಯದಲ್ಲಿ ರಚಿಸಿಕೊಂಡು ಸಮಿತಿ ಅಡಿಯಲ್ಲಿ ವಸತಿ ನಿಲಯ ಕಾರ್ಯನಿರ್ವಹಿಸುತ್ತಿದೆ. ಸರ್ಕಾರ ನೀಡುವ ಉಟೋಪಚಾರದ ಅನುದಾನ ಎಲ್ಲಿಯೂ ಸಾಕಾಗುತ್ತಿಲ್ಲ. ಕಟ್ಟಡ ದುರಸ್ತಿ ಹಾಗೂ ನಿರ್ವಹಣೆಗೆ ಪ್ರಸ್ತಾವ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮಕ್ಕಳಿಗೆ ಆಹಾರ ಪದಾರ್ಥದ ಕೊರತೆಯಾದಾಗೆಲ್ಲ ನಮ್ಮ ಹೊಲದಲ್ಲಿ ಬೆಳೆದ ಬೇಳೆ–ಕಾಳು ಹಾಗೂ ಇನ್ನಿತರ ದವಸ–ಧಾನ್ಯಗಳನ್ನು ತಂದು ನಿಲಯಕ್ಕೆ ಕೊಡುತ್ತೇನೆ’  ಎಂದು ವಸತಿ ನಿಲಯ ಸಮಿತಿ ಅಧ್ಯಕ್ಷ ವಸಂತ ಜೋಗಣ್ಣವರ ಹೇಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.