ADVERTISEMENT

ಪಾರ್ಸೆಲ್‌ ಸೇವೆಗೆ ಅನುಮತಿ ನೀಡುವಂತೆ ಸಚಿವ ಜಗದೀಶ ಶೆಟ್ಟರ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 30 ಮೇ 2021, 10:21 IST
Last Updated 30 ಮೇ 2021, 10:21 IST
ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ, ಹುಬ್ಬಳ್ಳಿ ಹೋಟೆಲ್ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದ್ದಾರೆ
ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ, ಹುಬ್ಬಳ್ಳಿ ಹೋಟೆಲ್ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದ್ದಾರೆ   

ಹುಬ್ಬಳ್ಳಿ: ಕೋವಿಡ್–19 ಎರಡನೇ ಅಲೆ ನಿಯಂತ್ರಣಕ್ಕಾಗಿ ಘೋಷಿಸಿರುವ ಲಾಕ್‌ಡೌನ್‌ನಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ, ಪಾರ್ಸೆಲ್ ಸೇವೆಗೆ ಅನುಮತಿ ನೀಡಬೇಕು ಎಂದು ಹುಬ್ಬಳ್ಳಿ ಹೋಟೆಲ್ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.

ಹೋಟೆಲ್‌ಗಳು ಬಂದ್ ಆಗಿರುವುದರಿಂದ ಮಾಲೀಕರಿಗಷ್ಟೇ ಅಲ್ಲದೆ, ಸಾರ್ವಜನಿಕರಿಗೂ ತೊಂದರೆಯಾಗಿದೆ. ಸದ್ಯ ಸ್ವೀಗಿ, ಝೊಮ್ಯಾಟೊ ಸೇರಿದಂತೆ ಕೆಲ ಪಾರ್ಸೆಲ್ ಸೇವೆಗಳಿಗೆ ಬೆಳಿಗ್ಗೆ 6ರಿಂದ ಸಂಜೆ 4ರವರೆಗೆ ಅವಕಾಶವಿದೆ. ಈ ಅವಧಿಯನ್ನು ರಾತ್ರಿ 8ರವರೆಗೆ ವಿಸ್ತರಿಸಬೇಕು. ಬೆಳ್ಳಿಗೆ 6ರಿಂದ 10ರ ತನಕ ಜನರಿಗೆ ಹೋಟೆಲ್‌ಗಳಿಂದ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕು ಎಂದು ಸಂಘದ ಪದಾಧಿಕಾರಿಗಳುಒತ್ತಾಯಿಸಿದರು.

ನಮ್ಮ ಉದ್ಯಮವನ್ನು ನಂಬಿಕೊಂಡು ನೂರಾರು ಕುಟುಂಬಗಳು ಬದುಕುತ್ತಿವೆ. ಲಾಕ್‌ಡೌನ್‌ನಿಂದ ಹೋಟೆಲ್‌ಗಳು ಏಕಾಏಕಿ ಬಂದ್ ಆಗಿರುವುದರಿಂದ ಎಲ್ಲರ ಜೀವನ ನಿರ್ವಹಣೆ ಕಷ್ಟವಾಗಿದೆ. ಕಡೇ ಪಕ್ಷ ಪಾರ್ಸೆಲ್ ಸೇವಗೆ ಅನುಮತಿ ಸಿಕ್ಕರೆ, ಎಲ್ಲರ ಬದುಕಿಗೂ ಸ್ವಲ್ಪ ಅನುಕೂಲವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.

ADVERTISEMENT

ವಿನಾಯಿತಿ ಭರವಸೆ: ಮನವಿ ಸ್ವೀಕರಿಸಿ ಮಾತನಾಡಿದ ಶೆಟ್ಟರ್, ‘ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ, ಹೋಟೆಲ್‌ಗಳಲ್ಲಿ ಪಾರ್ಸಲ್ ಸೇವೆ ಅವಕಾಶ ನೀಡಲು ಸೂಚಿಸುವೆ. ಲಾಕ್‌ಡೌನ್ ನಿಯಮಗಳಲ್ಲಿ ಹೋಟೆಲ್ ಉದ್ಯಮಕ್ಕೆ ವಿನಾಯಿತಿ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಹೋಟೆಲ್ ಸಂಘದ ಸದಸ್ಯರಾದ ರವಿ ಗಾಯತೋಂಡೆ, ಎ.ಪಿ. ಐತಾಳ್, ಸರ್ವೋತ್ತಮ ಶೆಟ್ಟಿ, ಶ್ರೀನಿವಾಸ ಓಕೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.