ADVERTISEMENT

ಎಚ್‌ಪಿಎಲ್‌: ವಾರಿಯರ್ಸ್‌ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 3:57 IST
Last Updated 17 ಫೆಬ್ರುವರಿ 2022, 3:57 IST

ಹುಬ್ಬಳ್ಳಿ: ಉತ್ತಮ ಬ್ಯಾಟಿಂಗ್ ತೋರಿದ ಧಾರವಾಡದ ಎ.ಬಿ. ವಾರಿಯರ್ಸ್ ತಂಡ, ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಆಯೋಜಿಸಿರುವ 19 ವರ್ಷದ ಒಳಗಿನವರ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಮೂರು ವಿಕೆಟ್‌ಗಳ ಗೆಲುವು ಸಾಧಿಸಿತು.

ಬಾಣಜಿ ಡಿ. ಕಿಮ್ಜಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ ನಯಾಕಾಸ್‌ ತಂಡ ನಿಗದಿತ 30 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 185 ರನ್‌ ಕಲೆಹಾಕಿತು. ಕಮೀಲ್‌ ಬೊಂಬಾಯವಾಲೆ (66) ಅರ್ಧಶತಕ ಇದಕ್ಕೆ ಕಾರಣವಾಯಿತು. ಈ ಗುರಿಯನ್ನು ಧಾರವಾಡದ ತಂಡ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ತಲುಪಿ ರೋಚಕ ಗೆಲುವು ತನ್ನದಾಗಿಸಿಕೊಂಡಿತು.

ಸೌರವ್‌ ಸಮಂತ್‌ (19 ವರ್ಷದ ಒಳಗಿನವರ ವಿಭಾಗ), ವಿನಾಯಕ ಪಾಂಡೆ (16 ವರ್ಷದ ಒಳಗಿನವರ ವಿಭಾಗ) ಪಂದ್ಯ ಶ್ರೇಷ್ಠ ಗೌರವ ಪಡೆದರು.

ADVERTISEMENT

ಸುಗ್ಗಿ ಜಯಭೇರಿ: ದಿನದ ಮತ್ತೊಂದು ಪಂದ್ಯದಲ್ಲಿ ಸುಗ್ಗಿ ಸ್ಪಾರ್ಟನ್ಸ್‌ ತಂಡ 56 ರನ್‌ಗಳ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಈ ತಂಡ 30 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 209 ರನ್‌ ಗಳಿಸಿತು. ತಂಡದ ಸಂಘಟಿತ ಬ್ಯಾಟಿಂಗ್‌ನಿಂದ ಸವಾಲಿನ ಮೊತ್ತ ಕಲೆಹಾಕಿತು. ಎದುರಾಳಿ ಹುಬ್ಬಳ್ಳಿಯ ಆರ್ಖಾ ನೈಟ್ಸ್‌ ತಂಡ 30 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 153 ರನ್ ಗಳಿಸಿ ತನ್ನ ಹೋರಾಟ ಮುಗಿಸಿತು. ಚಿರಾಗ್ ನಾಯ್ಕ (19 ವರ್ಷದ ಒಳಗಿನವರ ವಿಭಾಗ), ಮಣಿಕಂಠ ಬುಕಿಟಗಾರ (16 ವರ್ಷದ ಒಳಗಿನವರ ವಿಭಾಗ) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.