ADVERTISEMENT

ಹುಬ್ಬಳ್ಳಿ: ಬೀದಿನಾಯಿ ದತ್ತು ಅಭಿಯಾನಕ್ಕೆ ಚಾಲನೆ

ಹು–ಧಾ ಮಹಾನಗರ ಪಾಲಿಕೆಯಿಂದ ಅನುಷ್ಠಾನ: ಮಾನವನೊಂದಿಗಿನ ಸಂಘರ್ಷ ತಪ್ಪಿಸುವ ಕ್ರಮ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 6:06 IST
Last Updated 25 ಆಗಸ್ಟ್ 2025, 6:06 IST
ಹುಬ್ಬಳ್ಳಿಯ ತೋಳನಕೆರೆಯಲ್ಲಿ ಭಾನುವಾರ ನಡೆದ ಬೀದಿನಾಯಿ ದತ್ತು ಶಿಬಿರದಲ್ಲಿ ನಾಯಿಮರಿಗೆ ಲಸಿಕೆ ಹಾಕಲಾಯಿತು
ಹುಬ್ಬಳ್ಳಿಯ ತೋಳನಕೆರೆಯಲ್ಲಿ ಭಾನುವಾರ ನಡೆದ ಬೀದಿನಾಯಿ ದತ್ತು ಶಿಬಿರದಲ್ಲಿ ನಾಯಿಮರಿಗೆ ಲಸಿಕೆ ಹಾಕಲಾಯಿತು   

ಪ್ರಜಾವಾಣಿ ವಾರ್ತೆ

ಹುಬ್ಬಳ್ಳಿ: ಧಾರವಾಡ ತಾಲ್ಲೂಕಿನ ಶಿವಳ್ಳಿಯಲ್ಲಿ ಬೀದಿನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಘಟಕ ಶೀಘ್ರವೇ ಕಾರ್ಯಾರಂಭಿಸಲಿದೆ ಎಂದು ಹು–ಧಾ ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.

ಇಲ್ಲಿನ ತೋಳನಕೆರೆ ಆವರಣದಲ್ಲಿ ಭಾನುವಾರ ನಡೆದ ‘ಸಮುದಾಯ ಬೀದಿನಾಯಿ ದತ್ತು ಶಿಬಿರ’ದಲ್ಲಿ ಅವರು ಮಾತನಾಡಿ, ‘ಪಾಲಿಕೆ ವ್ಯಾಪ್ತಿಯಲ್ಲಿ 30 ಸಾವಿರಕ್ಕೂ ಅಧಿಕ ಬೀದಿನಾಯಿಗಳಿವೆ’ ಎಂದರು.

ADVERTISEMENT

‘ಬೀಡಾಡಿ ದನಗಳಿಗೂ ಶಿವಳ್ಳಿಯಲ್ಲಿ ಪುನರ್ವಸತಿ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಬೀದಿನಾಯಿ ಹಿಡಿಯಲೂ ಆಗದ ನೀವೆಂಥ ಕಾರ್ಪೊರೇಟರ್‌ಗಳು ಎಂದು ಸಾರ್ವಜನಿಕರು ನಮ್ಮನ್ನು ಅಪಹಾಸ್ಯ ಮಾಡುವ ಪರಿಸ್ಥಿತಿ ಬಂದಿದೆ’ ಎಂದು ಕಾರ್ಪೊರೇಟರ್ ರಾಮಣ್ಣ ಬಡಿಗೇರ ಹೇಳಿದರು.

‘ಮಕ್ಕಳಾದರೂ ನಮ್ಮನ್ನು ನೋಡಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ನಾಯಿಗೆ ತುತ್ತು ಅನ್ನ ಹಾಕಿದರೆ ಕೊನೆಯವರೆಗೂ ಅದು ನಮ್ಮನ್ನು ಪ್ರೀತಿಸುತ್ತದೆ’ ಎಂದ ಪಾಲಿಕೆ ಸದಸ್ಯೆ ದುರ್ಗಮ್ಮ ಬಿಜವಾಡ, ಸ್ವತಃ ಒಂದು ನಾಯಿ ದತ್ತು ಪಡೆಯುವ ವಾಗ್ದಾನ ಮಾಡಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ‘ಆಹಾರ ಸಿಗದಿದ್ದಾಗ ನಾಯಿಗಳು ದಾಳಿ ಮಾಡುತ್ತವೆ. ಅವುಗಳನ್ನು ಯಾರಾದರೂ ಆರೈಕೆ ಮಾಡಿದರೆ ಅಂಥ ಸಮಸ್ಯೆಗಳೇ ಇರುವುದಿಲ್ಲ. ಅದಕ್ಕೆ ಇಂಥ ಕಾರ್ಯಕ್ರಮ ಅನುಕೂಲಕರ’ ಎಂದರು.

‘ಬೀದಿನಾಯಿ ನಿಯಂತ್ರಣದ ವಿಚಾರದಲ್ಲಿ ಮಹಾನಗರ ಪಾಲಿಕೆಯು ಮಾದರಿ ಹೆಜ್ಜೆ ಇಟ್ಟಿದೆ’ ಎಂದು ಉಪ ಮೇಯರ್ ಸಂತೋಷ ಚವ್ಹಾಣ ಅಭಿಪ್ರಾಯಪಟ್ಟರು.

‘ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಿಗೆ ಬರುವ ಕರೆಗಳಲ್ಲಿ ಹೆಚ್ಚಿನವು ಬೀದಿನಾಯಿಗಳಿಗೆ ಸಂಬಂಧಿಸಿದ್ದೇ ಇರುತ್ತವೆ’ ಎಂದು ‍ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಶ್ರೀಧರ ದಂಡಪ್ಪನವರ ತಿಳಿಸಿದರು.

ಪಾಲಿಕೆ ಸದಸ್ಯೆ ಪ್ರೀತಿ ಖೋಡೆ ಇದ್ದರು.

Highlights - ಏಳು ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಯೋಜನೆ ಅನುಷ್ಠಾನ ಸಾಂಕೇತಿಕವಾಗಿ ಮೂವರಿಗೆ ಬೀದಿನಾಯಿ ದತ್ತು ನೀಡಿದ ಅಧಿಕಾರಿಗಳು ಶ್ವಾನ ಹಿಡಿಯುವವರಿಗೆ ಪಾಲಿಕೆ ವತಿಯಿಂದ ಗೌರವ

Quote - ಬೀದಿನಾಯಿ ನಿಯಂತ್ರಣ ದೊಡ್ಡ ಸವಾಲು. ನಾವು ಸಾರ್ವಜನಿಕರಿಂದ ಹೆಚ್ಚಾಗಿ ಬೈಸಿಕೊಳ್ಳುವುದು ಇದೇ ವಿಚಾರಕ್ಕೆ. ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ ರುದ್ರೇಶ ಘಾಳಿ ಹು–ಧಾ ಮಹಾನಗರ ಪಾಲಿಕೆ ಆಯುಕ್ತ

Quote - ಬೀದಿನಾಯಿಗಳ ವಿಚಾರದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಪಾಲಿಕೆಯೂ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಜ್ಯೋತಿ ಪಾಟೀಲ ಹು–ಧಾ ಮಹಾನಗರ ಪಾಲಿಕೆ ಮೇಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.