ADVERTISEMENT

ಹುಬ್ಬಳ್ಳಿ ವಿಮಾನ ನಿಲ್ದಾಣ ಖಾಸಗಿಗೆ?

ನಿರ್ವಹಣೆ, ಅಭಿವೃದ್ಧಿಗೆ ಪ್ರಥಮ ಆದ್ಯತೆ

ಸತೀಶ ಬಿ.
Published 31 ಮಾರ್ಚ್ 2025, 22:58 IST
Last Updated 31 ಮಾರ್ಚ್ 2025, 22:58 IST
ಹುಬ್ಬಳ್ಳಿ ವಿಮಾನ ನಿಲ್ದಾಣ
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ನಿರ್ವಹಣೆ ಗುತ್ತಿಗೆಯನ್ನು ಒಟ್ಟು 30 ವರ್ಷಗಳ ಅವಧಿಗೆ ಖಾಸಗಿ ಸಂಸ್ಥೆಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಆದಾಯ ತಂದುಕೊಡದ ಈ ನಿಲ್ದಾಣವು ಈಗಾಗಲೇ ಭುವನೇಶ್ವರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆ ವಿಲೀನಗೊಂಡಿದೆ.

ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿಯನ್ನು ಅದಾನಿ ಸಮೂಹ ಸಂಸ್ಥೆಗೆ ವಹಿಸಿದ ಸಂದರ್ಭದಲ್ಲಿ ಇದನ್ನು ಖಂಡಿಸಿ ಕಾಂಗ್ರೆಸ್ ಸೇರಿ ವಿವಿಧ ಸಂಸ್ಥೆಗಳಿಂದ ಪ್ರತಿಭಟನೆ ವ್ಯಕ್ತವಾಗಿತ್ತು.

ಆದಾಯ ಹಂಚಿಕೆ ಆಧಾರದ ಮೇಲೆ ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳ ನಿರ್ವಹಣೆ ಹೊಣೆ ಖಾಸಗಿ ಸಂಸ್ಥೆಗೆ ನೀಡಲಾಗಿದೆ. ವಾರ್ಷಿಕ ಆದಾಯದಲ್ಲಿ ಶೇಕಡ ಅರ್ಧದಷ್ಟು ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ (ಎಎಐ) ಹೋಗುತ್ತದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಆಧರಿಸಿ, ಎಎಐ ಪ್ರಾಧಿಕಾರಕ್ಕೆ ಹಣ ಪಾವತಿ ಆಗುತ್ತದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಖಾಸಗಿ ಹೊಣೆ ಯಾವ ಸ್ವರೂಪದ್ದು ಎಂಬುದು ಇನ್ನೂ ಅಸ್ಪಷ್ಟವಾಗಿದೆ.

ADVERTISEMENT

ಹೆಚ್ಚು ಮೊತ್ತಕ್ಕೆ ಬಿಡ್ಡಿಂಗ್‌ ಸಲ್ಲಿಸುವ ಕಂಪನಿಗೆ ಟೆಂಡರ್ ನೀಡಲಾಗುತ್ತದೆ. ಸದ್ಯ ನಿಲ್ದಾಣದಲ್ಲಿ ಎಎಐ ಪ್ರಾಧಿಕಾರದಡಿ 70 ಸಿಬ್ಬಂದಿ ಇದ್ದಾರೆ. ಉಳಿದ 250ಕ್ಕೂ ಹೆಚ್ಚು ಸಿಬ್ಬಂದಿ ವಿವಿಧ ಏಜೆನ್ಸಿಗಳಿಂದ ನೇಮಕವಾಗಿದ್ದಾರೆ. ಟೆಂಡರ್‌ ಪಡೆದ ಕಂಪನಿ ತಮಗೆ ಬೇಕಾದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತದೆ.

‘ವಿಮಾನ ನಿಲ್ದಾಣದಲ್ಲಿ ₹320 ಕೋಟಿ ವೆಚ್ಚದಲ್ಲಿ ನೂತನ ಟರ್ಮಿನಲ್ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ನಿಲ್ದಾಣದ ನಿರ್ವಹಣೆ, ಅಭಿವೃದ್ಧಿ ಹೊಣೆ ಮಾತ್ರ ಖಾಸಗಿ ಸಂಸ್ಥೆ ವಹಿಸಿಕೊಳ್ಳಲಿದೆ. ವಾಯು ಸಂಚಾರ ದಟ್ಟಣೆ ನಿಯಂತ್ರಣ (ಎಟಿಸಿ) ಮತ್ತು ಸಂವಹನ, ನ್ಯಾವಿಗೇಷನ್ ಮತ್ತು ಕಣ್ಗಾವಲು ವ್ಯವಸ್ಥೆ (ಸಿಎನ್‌ಎಸ್) ಎಲ್ಲವನ್ನೂ ಎಎಐ ನಿರ್ವಹಿಸಲಿದೆ’ ಎಂದು ಮೂಲಗಳು ತಿಳಿಸಿವೆ.

‘ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸದ್ಯಕ್ಕೆ ಒಂದು ಕೆಫೆ, ವಿಐಪಿ ಲಾಂಜ್‌ ಬಿಟ್ಟರೆ ಬೇರೆ ಸೌಲಭ್ಯಗಳಿಲ್ಲ. ನಿಲ್ದಾಣವನ್ನು ಖಾಸಗಿಗೆ ನೀಡಿದರೆ, ಉತ್ತಮ ನಿರ್ವಹಣೆ ಮತ್ತು ಅಭಿವೃದ್ಧಿ ಜೊತೆಗೆ ಹೆಚ್ಚಿನ ಸೌಲಭ್ಯ ಸಿಗುತ್ತವೆ. ಓಲಾ, ಉಬರ್ ಸೇವೆ ಲಭ್ಯವಾಗಲಿದೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚುತ್ತದೆ’ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ಬಳಕೆದಾರರ ಸಲಹಾ ಸಮಿತಿ ಸದಸ್ಯ ಕೌಸ್ತುಭ ಸಂಶೀಕರ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ನಿಲ್ದಾಣದ ಮೂಲಕ ಪ್ರತಿ ವಾರ ಇಂಡಿಗೊ ಸಂಸ್ಥೆಯ 78 ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಪುಣೆಗೆ ವಿಮಾನಯಾನ ಸೌಲಭ್ಯ ಇದೆ.

‘ಹುಬ್ಬಳ್ಳಿ ವಿಮಾನ ನಿ‌ಲ್ದಾಣದಲ್ಲಿ ಟರ್ಮಿನಲ್ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನಷ್ಟು ಸೌಲಭ್ಯ ಕಲ್ಪಿಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಬೇಕು. ಖಾಸಗೀಕರಣದಿಂದ ಸಾಕಷ್ಟು ಜನ ಉದ್ಯೋಗ ಕಳೆದುಕೊಳ್ಳಬಹುದು ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡಬೇಕು’ ಎಂದು ಹೋರಾಟಗಾರ ಗುರುನಾಥ ಉಳ್ಳಿಕಾಶಿ ತಿಳಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದ ಜೊತೆ ದೇಶದ ಇತರ 11 ನಿಲ್ದಾಣಗಳು ಖಾಸಗೀಕರಣಗೊಳ್ಳಲಿವೆ. 6 ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ
ರೂಪೇಶಕುಮಾರ್‌, ನಿರ್ದೇಶಕ ಹುಬ್ಬಳ್ಳಿ ವಿಮಾನ ನಿಲ್ದಾಣ
ಕೇಂದ್ರ ಸರ್ಕಾರ ಖಾಸಗೀಕರಣ ನೀತಿ ಜಾರಿಗೆ ತರುತ್ತಿದೆ. ಅದಾನಿ ಕಂಪನಿ 2019ರಲ್ಲಿ 6 ವಿಮಾನ ನಿಲ್ದಾಣಗಳ ನಿರ್ವಹಣೆ ಗುತ್ತಿಗೆ ಪಡೆದಿತ್ತು. ಹುಬ್ಬಳ್ಳಿ ವಿಮಾನ ನಿಲ್ದಾಣವು ಯಾರ ಪಾಲಾಗುತ್ತೋ ನೋಡಬೇಕು
ಗುರುನಾಥ ಉಳ್ಳಿಕಾಶಿ, ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.