ADVERTISEMENT

ಹುಬ್ಬಳ್ಳಿ | ಎಪಿಎಂಸಿ: ಕುಸಿದ ಕೃಷಿ ಉತ್ಪನ್ನ ಆವಕ

ರೈತರು ನಿರೀಕ್ಷಿಸಿದ್ದ ಫಸಲನ್ನು ನೀರುಪಾಲು ಮಾಡಿದ ‘ವರುಣ’

ನಾಗರಾಜ ಚಿನಗುಂಡಿ
Published 29 ಅಕ್ಟೋಬರ್ 2025, 4:57 IST
Last Updated 29 ಅಕ್ಟೋಬರ್ 2025, 4:57 IST
ಹುಬ್ಬಳ್ಳಿಯ ಅಮರಗೋಳದಲ್ಲಿನ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರವೇಶದ್ವಾರದ ನೋಟ
ಹುಬ್ಬಳ್ಳಿಯ ಅಮರಗೋಳದಲ್ಲಿನ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರವೇಶದ್ವಾರದ ನೋಟ   

ಹುಬ್ಬಳ್ಳಿ: ಇಲ್ಲಿನ ಅಮರಗೋಳದಲ್ಲಿರುವ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯಲ್ಲಿ ಪ್ರತಿವರ್ಷ ಮುಂಗಾರು ಮುಕ್ತಾಯದ ಅವಧಿಯಲ್ಲಿ ಕಾಣುತ್ತಿದ್ದ ಸಂಭ್ರಮ ಈ ಸಲ ಕಾಣುತ್ತಿಲ್ಲ!

ಮುಂಗಾರು ಅವಧಿ ಆರಂಭದಲ್ಲಿ ಬಂಪರ್ ಬೆಳೆ ಕೈಸೇರುವ ಆಸೆ ಹೊತ್ತಿದ್ದ ರೈತರು ಕ್ರಮೇಣ ನಿರಾಸೆ ಅನುಭವಿಸುವ ಪರಿಸ್ಥಿತಿ ಎದುರಾಯಿತು. ನಿರಂತರ ಮಳೆಯಿಂದ ಹಸಿರು ತುಂಬಿಕೊಂಡಿದ್ದ ಬೆಳೆಗಳು ಕ್ರಮೇಣ ಹಳದಿ ಬಣ್ಣಕ್ಕೆ ತಿರುಗಿದವು.

ನಿರೀಕ್ಷಿಸಿದಷ್ಟು ಫಸಲು ಬರದಿದ್ದರೂ ತಕ್ಕಮಟ್ಟಿಗೆ ಉತ್ಪನ್ನ ಪಡೆಯಬಹುದು ಎಂದು ರೈತರು ಅರ್ಧ ಆಸೆಗೆ ಸಿಮೀತವಾಗಿದ್ದರು. ಆದರೆ, ಸೆಪ್ಟೆಂಬರ್‌ ಬೆಳೆ ಕೊಯ್ಲು ಅವಧಿಯಲ್ಲೂ ಮಳೆರಾಯನ ಆರ್ಭಟ ಮುಂದುವರಿಯಿತು. ಈ ಕಾರಣದಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ವಿವಿಧ ಕೃಷಿ ಉತ್ಪನ್ನದೊಂದಿಗೆ ಬರುತ್ತಿದ್ದ ರೈತರ ಸಂಖ್ಯೆ ಗಣನೀಯ ಕುಸಿದಿದೆ. ಎಪಿಎಂಸಿ ದಲ್ಲಾಳಿಗಳಲ್ಲೂ ಸಂಭ್ರಮ ಇಲ್ಲದಂತಾಗಿದೆ.

ADVERTISEMENT

ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆ ಕೆಲವು ಭಾಗದ ರೈತರಿಗೆ ಹುಬ್ಬಳ್ಳಿ ಎಪಿಎಂಸಿ ಪ್ರಮುಖ ಮಾರುಕಟ್ಟೆ. ಈ ಅವಧಿಯಲ್ಲಿ ಹೆಸರು, ಸೋಯಾಬಿನ್‌, ಮೆಕ್ಕೆಜೋಳ ಹಾಗೂ ಉದ್ದಿನಕಾಳು ಮಾರಾಟ ಮಾಡುವುದಕ್ಕೆ ಟ್ರ್ಯಾಕ್ಟರ್‌, ಲಾರಿ ಭರ್ತಿ ಮಾಡಿಕೊಂಡು ಸರದಿಯಲ್ಲಿ ಬರುತ್ತಿದ್ದರು. ಈ ವರ್ಷ ಟಂಟಂ ಹಾಗೂ ಆಟೊ ಸರಕು ಸಾಗಣೆ ವಾಹನದಲ್ಲಿ ಕೃಷಿ ಉತ್ಪನ್ನ ಮಾರಾಟಕ್ಕೆ ತರುತ್ತಿದ್ದಾರೆ. ಅಳಿದುಳಿದ ಉತ್ಪನ್ನ ಮಾರಾಟ ಮಾಡಿದರೂ ರೈತರು ಬಿತ್ತನೆಗಾಗಿ ಮಾಡಿದ ಖರ್ಚು ವಾಪಸ್ಸಾಗುತ್ತಿಲ್ಲ.

ಈ ವರ್ಷ ಜುಲೈ 1ರಿಂದ ಅಕ್ಟೋಬರ್‌ 15ರವರೆಗೂ ಹುಬ್ಬಳ್ಳಿ ಎಪಿಎಂಸಿಯಲ್ಲಿ ಒಟ್ಟು 5,62,157 ಕ್ವಿಂಟಲ್‌ ವಿವಿಧ ಕೃಷಿ ಉತ್ಪನ್ನಗಳ ಆವಕವಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಮಳೆ ಕೊರತೆ ಮಧ್ಯೆಯೂ 7,49,023 ಕ್ವಿಂಟಲ್‌ ವಿವಿಧ ಕೃಷಿ ಉತ್ಪನ್ನಗಳ ಆವಕವಾಗಿತ್ತು. ಮುಖ್ಯವಾಗಿ ಸೋಯಾಬಿನ್‌ ಆವಕದಲ್ಲಿ ಗಣನೀಯ ಕುಸಿತ ಕಂಡು ಬಂದಿದೆ.

ಕಳೆದ ವರ್ಷ ಈರುಳ್ಳಿಗೆ ತುಂಬಾ ಬೇಡಿಕೆಯಿತ್ತು. ಹೀಗಾಗಿ ಈರುಳ್ಳಿ ಆವಕ ಮತ್ತು ಮಾರಾಟ ಪ್ರಮಾಣ ಅಧಿಕ ಪ್ರಮಾಣದಲ್ಲಿತ್ತು. ಈ ವರ್ಷ ಮಳೆ ಕಾರಣದಿಂದ ಈರುಳ್ಳಿ ಬೆಳೆ ನಷ್ಟವಾಗಿದ್ದಲ್ಲದೆ, ದರ ಕೂಡಾ ಯೋಗ್ಯ ಪ್ರಮಾಣದಲ್ಲಿ ಇಲ್ಲ. ಆದರೂ ಈರುಳ್ಳಿಯನ್ನು ಈ ವರ್ಷ ಅಧಿಕ ಪ್ರಮಾಣದಲ್ಲಿ ಬೆಳೆಯಲಾಗಿದ್ದು, ಮಾರುಕಟ್ಟೆಗೆ ಬರುತ್ತಿದೆ. ಈ ವರ್ಷ ಹೊರ ರಾಜ್ಯಗಳಿಂದಲೂ ಈರುಳ್ಳಿ ಮಾರುಕಟ್ಟೆಗೆ ಬರುತ್ತಿರುವುದು ಕೂಡಾ ರೈತರಿಗೆ ಹೊಡೆತ ನೀಡಿದೆ.

'ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಸರು ಬಿತ್ತನೆ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿತ್ತು. ಮುಂಗಾರು ಅವಧಿಯಲ್ಲಿ ಮಳೆ ದಿನಗಳು ಹೆಚ್ಚಾಗಿದ್ದರಿಂದ ಬಹುತೇಕ ಬೆಳೆ ಹಾನಿಯಾದವು. ನಿರೀಕ್ಷಿಸಿದ್ದ ಅರ್ಧದಷ್ಟು ಪ್ರಮಾಣದಲ್ಲಿ ಮಾತ್ರ ಹೆಸರು ಮಾರಾಟಕ್ಕೆ ಬರುತ್ತಿದೆ. ಇತರೆ ಕೃಷಿ ಬೆಳೆಗಳು ಕೂಡಾ ಹನಿಯಾಗಿವೆ. ಒಟ್ಟಾರೆ ಈ ವರ್ಷ ಮುಂಗಾರು ಹಂಗಾಮಿನಿಂದ ಎಪಿಎಂಸಿಯಲ್ಲಿ ಆಗಬೇಕಾದಷ್ಟು ಆವಕ ಆಗುತ್ತಿಲ್ಲ‘ ಎಂದು ಹುಬ್ಬಳ್ಳಿ ಎಪಿಎಂಸಿ ಕಾರ್ಯದರ್ಶಿ ಕೆ.ಎಚ್‌.ಗುರುಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವರ್ಷ ಒಟ್ಟಾರೆ ಕೃಷಿ ಉತ್ಪನ್ನದ ಆವಕದಲ್ಲಿ ಕಡಿಮೆಯಾಗಿದೆ. ಬಂದಿರುವ ಉತ್ಪನ್ನದಲ್ಲೂ ಸಾಕಷ್ಟು ಕಳಪೆ ಕಂಡು ಬರುತ್ತಿದೆ
ಕೆ.ಎಚ್‌.ಗುರುಪ್ರಸಾದ್‌ ಹುಬ್ಬಳ್ಳಿ ಎಪಿಎಂಸಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.