ಹುಬ್ಬಳ್ಳಿಯ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಪ್ರಮುಖರು ಭಾಗವಹಿಸಿದ್ದರು
ಹುಬ್ಬಳ್ಳಿ: ‘ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಪಕ್ಷಾತೀತವಾಗಿ ಒತ್ತಡ ಹಾಕಬೇಕಿದ್ದು, ಇದಕ್ಕಾಗಿ ಸಂಘಟಿತ ಹೋರಾಟದ ಅವಶ್ಯವಿದೆ’ ಎಂದು ರೈಲ್ವೆ ಯೋಜನೆಯ ಹೋರಾಟಗಾರ ವಸಂತ ಲದ್ವಾ ಹೇಳಿದರು.
ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಮಂಗಳವಾರ ನಡೆದ ಉತ್ತರ ಕನ್ನಡ ಮತ್ತು ಹುಬ್ಬಳ್ಳಿ ಭಾಗದ ವಿವಿಧ ಸಂಘ–ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ರೈಲ್ವೆ ಬಳಕೆದಾರರ ವಲಯ ಸಮಿತಿಯ ಸದಸ್ಯ ಮಹೇಂದ್ರ ಸಿಂಘಿ ಮಾತನಾಡಿ, ‘ಯೋಜನೆಯ ಅನುಷ್ಠಾನಕ್ಕಾಗಿ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳಲ್ಲಿ ಇನ್ನೂ ವಿವರವಾಗಿ ಚರ್ಚೆ ನಡೆಸಬೇಕಿದೆ’ ಎಂದು ಹೇಳಿದರು.
ಗಂಗಾಧರ ಹಿರೇಗುತ್ತಿ ಮಾತನಾಡಿ, ‘ಉತ್ತರ ಕನ್ನಡ ಜಿಲ್ಲೆ ಹಿಂದುಳಿದಿದ್ದು, ಒಳ್ಳೆಯ ಯೋಜನೆಗಳ ಅನುಷ್ಠಾನಕ್ಕೆ ಅನಗತ್ಯವಾಗಿ ತಡೆ ಹಾಕುವ ಪ್ರಯತ್ನ ನಡೆದಿದೆ’ ಎಂದರು.
ಉ.ಕ ಜಿಲ್ಲಾ ನಾಗರಿಕ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮಾಧವ ನಾಯಕ, ‘ಸರ್ಕಾರದ ಮಟ್ಟದಲ್ಲಿ ಇಚ್ಛಾಶಕ್ತಿ ಅವಶ್ಯವಿದೆ’ ಎಂದರು.
ಯೋಜನೆಯ ತ್ವರಿತ ಜಾರಿ ಕುರಿತು ಕೇಂದ್ರ–ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಸಿದ್ರಾಮಯ್ಯ ಸಂಶಿಮಠ, ಕಾರ್ಯದರ್ಶಿ ರವೀಂದ್ರ ಬಳಿಗಾರ, ಉ.ಕ ರೈಲ್ವೆ ಬಳಕೆದಾರರ ಸಮಿತಿಯ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್, ಪ್ರಮುಖರಾದ ಸಾಯಿ ಗಾಂವಕರ್, ಮಹೇಶ ಗೋಳಿಕಟ್ಟೆ, ಪ್ರೀತಂ ಮಾಸೂರಕರ್, ರವಿ ಟಿ.ನಾಯ್ಕ, ರಾಜಗೋಪಾಲ ಅಡಿ, ಹುಬ್ಬಳ್ಳಿ–ಅಂಕೋಲಾ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಕಾರ್ಯದರ್ಶಿ ವಿಠ್ಠಲದಾಸ ಕಾಮತ್ ಇದ್ದರು.
‘ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆಗೆ ಇರುವ ಕಾನೂನು ತೊಡಕು ಬಹುತೇಕ ಮುಗಿದಿದೆ. ಪರಿಸರಕ್ಕೆ ಹೆಚ್ಚಿನ ಹಾನಿಯಾಗದಂತೆ ಮತ್ತೊಮ್ಮೆ ಸರ್ವೆ ನಡೆಸಿ ವರದಿ ಸಿದ್ಧಪಡಿಸಲು ನ್ಯಾಯಾಲಯ ಸೂಚಿಸಿದೆ. ಈ ವರದಿಗೆ ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿ ಮತ್ತು ಕೇಂದ್ರ ವನ್ಯಜೀವಿ ಸಂರಕ್ಷಣಾ ಮಂಡಳಿಯಿಂದ ಒಪ್ಪಿಗೆ ದೊರೆತಲ್ಲಿ ಯೋಜನೆ ಜಾರಿಗೆ ಅಡ್ಡಿಯಿಲ್ಲ’ ಎಂದು ವಕೀಲ ಅಕ್ಷಯ ಕೊಲ್ಲೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.