ADVERTISEMENT

ಹುಬ್ಬಳ್ಳಿ: ಸಿ.ಸಿ ರಸ್ತೆ, 24X7 ನೀರಿನ ಸೌಲಭ್ಯಕ್ಕೆ ಆದ್ಯತೆ

ವಾರ್ಡ್‌ ಸಂಖ್ಯೆ 70ರಲ್ಲಿ ಹಲವು ಅಭಿವೃದ್ಧಿ ಕಾಮಗಾರಿ; ಚರಂಡಿ ಸ್ವಚ್ಛತೆಗೆ ಒತ್ತಾಯ

ಸತೀಶ ಬಿ.
Published 5 ಡಿಸೆಂಬರ್ 2025, 5:53 IST
Last Updated 5 ಡಿಸೆಂಬರ್ 2025, 5:53 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 70ರ ಗಾರ್ಡನ್‌ಪೇಟೆಯಲ್ಲಿ ಒಳಚರಂಡಿ ಪೈಪ್‌ ಅಳವಡಿಕೆಗೆ ರಸ್ತೆ ಅಗೆದು ಸರಿಯಾಗಿ ದುರಸ್ತಿ ಮಾಡಿಲ್ಲ
ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 70ರ ಗಾರ್ಡನ್‌ಪೇಟೆಯಲ್ಲಿ ಒಳಚರಂಡಿ ಪೈಪ್‌ ಅಳವಡಿಕೆಗೆ ರಸ್ತೆ ಅಗೆದು ಸರಿಯಾಗಿ ದುರಸ್ತಿ ಮಾಡಿಲ್ಲ ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ನಗರದ ಪುಣೆ– ಬೆಂಗಳೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ವಾರ್ಡ್‌ ಸಂಖ್ಯೆ 70ರಲ್ಲಿ ಸಿ.ಸಿ ರಸ್ತೆ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಈ ಹಿಂದೆ 55ನೇ ವಾರ್ಡ್ ಆಗಿದ್ದ ಇದು, ಮರು ವಿಂಗಡಣೆ ನಂತರ 70ನೇ ವಾರ್ಡ್ ಆಗಿ ಬದಲಾಗಿದೆ. ಇಲ್ಲಿ 20ಕ್ಕೂ ಹೆಚ್ಚು ದೇವಸ್ಥಾನಗಳು, ಐದು ಮಸೀದಿ, ಎರಡು ದರ್ಗಾಗಳು ಇವೆ. ಹಿಂದೂ ಮುಸ್ಲಿಮರ ಸಹಬಾಳ್ವೆಯನ್ನು ಇಲ್ಲಿ ಕಾಣಬಹುದು.

ಬಂಕಾಪುರ ಚೌಕ್‌ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಗಾರ್ಡನ್‌ಪೇಟೆಯಲ್ಲಿ ಸರ್ಕಾರಿ ಉರ್ದು ಶಾಲೆ ಇದೆ. ವಾರ್ಡ್‌ನಲ್ಲಿ ಕಿರಿದಾದ ಓಣಿಗಳಿವೆ. ರೈತರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಾಳ್ವೇಕರ ಹಕ್ಕಲ ಕೊಳೆಗೇರಿ ಪ್ರದೇಶವಾಗಿದ್ದು, ಇಲ್ಲಿ ಸಾರ್ವಜನಿಕ ಶೌಚಾಲಯ ಸೇರಿ ಹಲವು ಸೌಲಭ್ಯ ಕಲ್ಪಿಸಬೇಕಿದೆ.  ಬಹುತೇಕ ಬಡಾವಣೆಗಳಲ್ಲಿ 24X7 ಕುಡಿಯುವ ನೀರಿನ ಸೌಲಭ್ಯವಿದೆ.

ADVERTISEMENT

ವಾರ್ಡ್‌ನಲ್ಲಿ ಉದ್ಯಾನವಿಲ್ಲ. ಹೀಗಾಗಿ ಮಕ್ಕಳು ಆಟವಾಡಲು, ಹಿರಿಯ ನಾಗರಿಕರಿಗೆ ವಾಯು ವಿಹಾರಕ್ಕೆ ತೊಂದರೆಯಾಗುತ್ತಿದೆ ಎನ್ನುತ್ತಾರೆ ವಾರ್ಡ್‌ ನಿವಾಸಿಗಳು.

ಚರಂಡಿಯಲ್ಲಿ ಹೂಳು ತುಂಬಿದ್ದು, ದುರ್ನಾತ ಬೀರುತ್ತಿದೆ. ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಹೂಳು ತೆಗೆದು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಯಲ್ಲಾಪುರ ಓಣಿಯ ನಿವಾಸಿಯೊಬ್ಬರು ಒತ್ತಾಯಿಸಿದರು.

ಸಿದ್ಧನಪೇಟೆಯಲ್ಲಿ ಬೀಡಾಡಿ ದನಗಳ ಹಾವಳಿಯಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ಚಿಕ್ಕ ಮಕ್ಕಳನ್ನು ಹೊರಗೆ ಬಿಡಲು ಭಯವಾಗುತ್ತದೆ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

ವಾರ್ಡ್‌ನಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಪಾಲಿಕೆಯ ಅನುದಾನದಲ್ಲಿ ₹20 ಲಕ್ಷ ವೆಚ್ಚದಲ್ಲಿ 40 ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನೂ 20 ಕ್ಯಾಮೆರಾ ಅಳವಡಿಸಬೇಕಿದೆ ಎಂದು ವಾರ್ಡ್ ಸದಸ್ಯೆ ಗೀತಾ ಹೊಸಮನಿ ತಿಳಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಬಡಿಗೇರ ಓಣಿಯಿಂದ ಬಂಕಾಪುರ ಚೌಕ್‌ವರೆಗೆ ಮತ್ತು ವಿವಿಧೆಡೆ ನಿರ್ಮಿಸಿದ ರಸ್ತೆ ಹಾಳಾಗಿವೆ. ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಗೀತಾ ಹೊಸಮನಿ
ಚನ್ನವ್ವ ಬೆಂಡಿಗೇರಿ
ನೂರ್‌ ಅಹ್ಮದ್
ವಾರ್ಡ್ ಸಂಖ್ಯೆ 70ರ ನಕ್ಷೆ
ವಾರ್ಡ್‌ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪ್ರತಿ ದಿನ ಕಸ ಸಂಗ್ರಹಿಸಲು ವಾಹನಗಳು ಬರುತ್ತವೆ. ಇನ್ನೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಲಾಗುವುದು
ಗೀತಾ ಹೊಸಮನಿ ಪಾಲಿಕೆ ಸದಸ್ಯೆ
ಸಿದ್ಧನಪೇಟೆಯಲ್ಲಿ ಪ್ರತಿ ದಿನ ನೀರು ಬರುತ್ತದೆ. ಅಂಗನವಾಡಿ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಬೇಕು
ಚನ್ನವ್ವ ಬೆಂಡಿಗೇರಿ ಸಿದ್ಧನಪೇಟೆ
ಒಳಚರಂಡಿ ಪೈಪ್‌ ಅಳವಡಿಸಲು ರಸ್ತೆ ಅಗೆದು ನಂತರ ಸರಿಯಾಗಿ ದುರಸ್ತಿ ಮಾಡಿಲ್ಲ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು
ನೂರ್‌ ಅಹ್ಮದ್ ಗಾರ್ಡನ್‌ಪೇಟೆ

₹1.49 ಕೋಟಿ ವೆಚ್ಚದಲ್ಲಿ ನಾಲಾ ಕಾಮಗಾರಿ

ಗಾರ್ಡನ್‌ಪೇಟೆಯ ಮಾಲ್ದಾರ ಓಣಿ ಕುಂಬಾರ ಓಣಿ ನಾಲಬಂದ್‌ ಓಣಿಯಲ್ಲಿ ₹10 ಲಕ್ಷ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಬಡಿಗೇರ ಓಣಿ ಕ್ರಾಸ್‌ನಿಂದ ಗಿರಿಮಲ್ಲೇಶ್ವರ ದೇವಸ್ಥಾನದವರೆಗೆ ₹1.49 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ನಾಲಾ ಕಾಮಗಾರಿ ಅಪೂರ್ಣಗೊಂಡಿದೆ. ಹೆಚ್ಚಿನ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ವಾರ್ಡ್‌ ಸದಸ್ಯೆ ಗೀತಾ ಹೊಸಮನಿ ಹೇಳಿದರು.   ಕುಲಕರ್ಣಿ ಗಲ್ಲಿ ಮಾಲ್ದಾರ ಓಣಿಯಲ್ಲಿ ಸಿ.ಸಿ ರಸ್ತೆ ಯಲ್ಲಾಪುರ ಓಣಿ ಸರ್ಕಲ್‌ನಲ್ಲಿ ಪೇವರ್ಸ್‌ ಹಾಕಲಾಗಿದೆ. ಪಾಟೀಲ ಗಲ್ಲಿಯ ಒಂದು ಓಣಿಯಲ್ಲಿ ಸಿ.ಸಿ ರಸ್ತೆ ಕಾಮಗಾರಿ ಆಗಬೇಕಿದೆ. ವಾಳ್ವೇಕರ್ ಹಕ್ಕಲದಲ್ಲಿ ವಿವಿಧ ಸಮುದಾಯದವರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಾಣಕ್ಕೆ ₹50 ಲಕ್ಷ ಮಂಜೂರಾಗಿದೆ ಎಂದರು.

ಪ್ರಮುಖ ದೇವಸ್ಥಾನಗಳು

ಯಲ್ಲಾಪುರ ಓಣಿಯ ಹನುಮಂತ ದೇವಸ್ಥಾನ ದೇಸಾಯಿ ಓಣಿಯ ಗಿರಿಮಲ್ಲೇಶ್ವರ ದೇಗುಲ ಬಸವೇಶ್ವರ ದೇವಸ್ಥಾನ ದುರ್ಗಾದೇವಿ ದೇವಸ್ಥಾನ ಡೋಹರ ಗಲ್ಲಿಯ ಏಳುಮಕ್ಕಳ ತಾಯಿ ದೇವಸ್ಥಾನ ಮಲ್ಲಮ್ಮನ ಗುಡಿ. ಬಡಾವಣೆಗಳು: ಯಲ್ಲಾಪುರ ಓಣಿ ದೇಸಾಯಿ ಓಣಿ ಕುಲಕರ್ಣಿ ಗಲ್ಲಿ ಗಾರ್ಡನ್‌ ಪೇಟೆ ಪಾಟೀಲ ಗಲ್ಲಿ ಸಿದ್ಧನಪೇಟೆ ಬಂಕಾಪುರ ಚೌಕ್‌ ವಾಳ್ವೇಕರ ಹಕ್ಕಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.