ಹುಬ್ಬಳ್ಳಿ: ಗುತ್ತಿಗೆದಾರ ಮೋಹನ ಚವ್ಹಾಣ್ ಅವರನ್ನು ಎಂಟು–ಹತ್ತು ಮಂದಿಯ ಗುಂಪು ಶನಿವಾರ ಮಧ್ಯಾಹ್ನ ತೋಳನಕೆರೆ ಬಳಿಯ ಅವರ ಕಚೇರಿಯಿಂದ ಕಾರಿನಲ್ಲಿ ಅಪಹರಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಕ್ರೂಸರ್ ಮತ್ತು ಕಾರಿನಲ್ಲಿ ಬಂದ ಅಪಹರಣಕಾರರು, ಮೋಹನ ಅವರ ಕಚೇರಿಯೊಳಗೆ ನುಗ್ಗಿ ಹೊರಗೆ ಎಳೆದುಕೊಂಡು ಬಂದಿದ್ದಾರೆ. ಚಲಿಸುತ್ತಿದ್ದ ಕಾರಿನಲ್ಲಿಯೇ ಬಲವಂತವಾಗಿ ಅವರನ್ನು ನೂಕಿ, ಕರೆದೊಯ್ದಿದ್ದಾರೆ. ತಡೆಯಲು ಹೋದವರ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೆ, ಮಹಿಳೆಯರನ್ನು ಸಹ ಎಳೆದಾಡಿರುವ ವಿಡಿಯೊ ಹರಿದಾಡುತ್ತಿದೆ.
ಈಶ್ವರನಗರದ ನಿವಾಸಿಯಾದ ಗುತ್ತಿಗೆದಾರ ಮೋಹನ ಅವರು, ತಾವು ಗುತ್ತಿಗೆ ಪಡೆದ ಕೆಲಸವನ್ನು ಉಪ ಗುತ್ತಿಗೆ ನೀಡುತ್ತಿದ್ದರು. ಕೆಲಸ ಮುಗಿದ ನಂತರ ಹಣ ಪಾವತಿಸದ ಕಾರಣ ಈ ಹಿಂದೆ, ಉಪಗುತ್ತಿಗೆದಾರ ಬಸಪ್ಪ ಎಂಬಾತ ಅವರನ್ನು ಅಪಹರಿಸಿದ್ದ ಎನ್ನಲಾಗಿದ್ದು, ಪ್ರಕರಣ ದಾಖಲಾಗಿರಲಿಲ್ಲ. ಇಂದು ಅಪಹರಿಸಿದವರು ₹1 ಕೋಟಿಗೆ ಬೇಡಿಕೆ ಇಟ್ಟಿದ್ದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಧಾರವಾಡದ ಗರಗದಲ್ಲಿ ಕ್ರೂಸರ್ ವಾಹನ ಸಿಕ್ಕಿದ್ದು, ಅಪಹರಣಕ್ಕೆ ಬಳಸಿದ್ದ ಕಾರು ಪತ್ತೆಯಾಗಿಲ್ಲ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಗುತ್ತಿಗೆದಾರ ಮೋಹನ ಅವರನ್ನು ಅವರ ಪರಿಚಯದವರೇ ಕರೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿಯಿದೆ. ತನಿಖೆ ಮುಂದುವರಿದಿದೆ’ ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದ್ದಾರೆ.
ಅಪಹರಣಕ್ಕೊಳಗಾದ ಗುತ್ತಿಗೆದಾರ ಮೋಹನ ಅವರ ಕಚೇರಿಗೆ ಶಾಸಕ ಮಹೇಶ ಟೆಂಗಿನಕಾಯಿ ಭೇಟಿ ನೀಡಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪೊಲೀಸರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.