ADVERTISEMENT

ಹುಬ್ಬಳ್ಳಿ | ಬೆಳೆಗಳಿಗೆ ರೋಗ ಬಾಧೆ; ರೈತರಿಗೆ ಆತಂಕ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 4:08 IST
Last Updated 18 ಜುಲೈ 2025, 4:08 IST

ಧಾರವಾಡ ತಾಲ್ಲೂಕಿನ ದಾಸನಕೊಪ್ಪ ಹದ್ದಿನಲ್ಲಿರುವ ಹೊಲವೊಂದಲ್ಲಿನ ಬಟಾಣಿ ಬೆಳೆಯಲ್ಲಿ ಕಳೆ ಬೆಳೆದಿರುವುದು

ಧಾರವಾಡ ತಾಲ್ಲೂಕಿನ ದಾಸನಕೊಪ್ಪ ಹದ್ದಿನಲ್ಲಿರುವ ಹೊಲವೊಂದಲ್ಲಿನ ಬಟಾಣಿ ಬೆಳೆಯಲ್ಲಿ ಕಳೆ ಬೆಳೆದಿರುವುದು

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಒಂದು ತಿಂಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಬೆಳೆದ ಬೆಳೆಗಳು ನಂಜುಗಟ್ಟಿ ಕೀಟ ಹಾಗೂ ರೋಗಬಾಧೆ ಅಧಿಕವಾದ ಕಾರಣ ರೈತರಿಗೆ ಸಂಕಷ್ಟ ಎದುರಾಗಿದೆ.

ADVERTISEMENT

ಮುಂಗಾರು ಹಂಗಾಮಿನಲ್ಲಿ ಧಾರವಾಡ ತಾಲ್ಲೂಕಿನಲ್ಲಿ ಒಟ್ಟು 58,029 ಹೆಕ್ಟೇರ್‌ ಪ್ರದೇಶದಲ್ಲಿ  ಬಿತ್ತನೆ ಗುರಿ ಹೊಂದಲಾಗಿತ್ತು. ಪ್ರಸ್ತುತ ಅಂದಾಜು 58,283 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು, ಉದ್ದು, ಗೋವಿನ ಜೋಳ, ಸೊಯಾಬಿನ್‌, ಹತ್ತಿ, ಕಬ್ಬು ಸೇರಿದಂತೆ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ.

ಗೋವಿನ ಜೋಳ ಬೆಳೆಯನ್ನು 5 ಎಕರೆಯಲ್ಲಿ ಬೆಳೆದಿದ್ದು, ಅಧಿಕ ಮಳೆಯಿಂದಾಗಿ ಬೆಳವಣಿಗೆ ಕುಂಠಿತವಾಗಿದೆ. ಯೂರಿಯಾ ರಸಗೊಬ್ಬರ ಅವಶ್ಯಕತೆ ಇದ್ದು, ಸೊಸೈಟಿಯಲ್ಲಿ ಕೇಳಿದರೆ ಗೊಬ್ಬರ ಸಿಗುತ್ತಿಲ್ಲ. ಏನು ಮಾಡಬೇಕು ಎಂಬುದು ತಿಳಿಯದಂತಾಗಿದೆ. ಇದೇ ರೀತಿ ಮಳೆ ಮುಂದುವರೆದರೇ ಗೋವಿನ ಜೋಳ ಸಂಪೂರ್ಣ ನಾಶವಾಗುವ ಭಯ ಕಾಡುತ್ತಿದೆ ಎಂದು ಧಾರವಾಡ ತಾಲ್ಲೂಕಿನ ರೈತ ವೀರಭದ್ರಪ್ಪ ಕರಿಕಟ್ಟಿ ತಿಳಿಸಿದರು.

‘2 ಎಕರೆ‌ಯಲ್ಲಿ ಸೊಯಾಬಿನ್ ಬಿತ್ತನೆ ಮಾಡಿದ್ದೆ. ಆದರೆ, ನಿರಂತರ ಮಳೆಯಿಂದಾಗಿ ಹೊಲದ ತುಂಬೆಲ್ಲಾ ಗರಿಕೆ ಹುಲ್ಲು ಮತ್ತು ಹಣಜಿ ಕಸ ಹೆಚ್ಚಾಗಿ ಬೆಳೆಯಿತು. ಎರಡು ಎಕರೆಯಲ್ಲಿನ ಈ ಕಳೆ ತೆಗೆಸಲು ಕೂಲಿ ಆಳುಗಳನ್ನು ನೇಮಿಸುವುದರಿಂದ ನನಗೆ ಆರ್ಥಿಕ ಹೊರೆಯಾಯಿತು. ಇದರಿಂದಾಗಿ ನಾನು ಕಳೆನಾಶಕ ಸಿಂಪಡಿಸಿದೆ. ಈಗ ಕಳೆನಾಶಕದಿಂದಾಗಿ ಬೆಳೆದ ಬೆಳೆ ಕೂಡ ಸಂಪೂರ್ಣ ಹಾಳಾಗಿದೆ’ ಎಂದು ರೈತ ಬಸವರಾಜ ಅಳಲು ತೋಡಿಕೊಂಡರು.

‘ರೈತರು ಬೆಳೆದ ಬೆಳೆಗಳಿಗೆ ರೋಗಬಾಧೆ ಅಧಿಕವಾಗಿದ್ದು, ಇದರ ನಿವಾರಣೆಗೆ ತಾಲ್ಲೂಕು ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡಕ್ಕೆ ತಾಲ್ಲೂಕಿನಾದ್ಯಂತ ಸಂಚರಿಸಿ, ರೋಗ ಹಾಗೂ ಕೀಟ ನಿಯಂತ್ರಣ ಕುರಿತು ಅಧ್ಯಯನ ನಡೆಸಲು ಕೃಷಿ ಇಲಾಖೆಯಿಂದ ಸೂಚಿಸಲಾಗಿದೆ’ ಎಂದು ಧಾರವಾಡದ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನಗೌಡರ ಹೇಳುತ್ತಾರೆ.

ಬೆಳೆಗಳಲ್ಲಿ ಹೆಚ್ಚಿದ ಕಳೆ

‘ಅಧಿಕ ಮಳೆಯಾದ ಕಾರಣ ಬೆಳೆಗಳ ಮಧ್ಯದಲ್ಲಿ ಕಳೆ ಕಾಟವು ಹೆಚ್ಚಾಗಿದೆ. ಕಳೆ ಹೋಗಲಾಡಿಸಲು ಎಡೆ ಹೊಡೆಯುವುದು ಅಥವಾ ಕೂಲಿ ಆಳುಗಳಿಂದ ಕಳೆ ತೆಗೆಸುವುದು ಅವಶ್ಯಕ. ಆದರೆ, ರೈತನಿಗೆ ಒಂದು ಎಕರೆ ಭೂಮಿಗೆ ಸುಮಾರು ₹3ರಿಂದ ₹4 ಸಾವಿರ ವೆಚ್ಚ ತಗಲುತ್ತದೆ. ಭೂಮಿಯಲ್ಲಿ ತೇವಾಂಶ ಹೆಚ್ಚಾದ ಕಾರಣ ಇದು ಅಸಾಧ್ಯವಾಗಿದೆ’ ಎನ್ನುತ್ತಾರೆ ರೈತರು.

‘ಇತ್ತಿಚೀನ ದಿನಗಳಲ್ಲಿ ಕೃಷಿ ಸಂಶೊಧನೆಯಿಂದ ಬೆಳೆಗಳ ಮಧ್ಯದಲ್ಲಿ ಕಳೆನಾಶಕಗಳನ್ನು ಸಿಂಪಡಿಸಲಾಗುತ್ತಿದೆ. ಆದರೆ, ಸಿಂಪಡಿಸಿದ ಕಳೆನಾಶಕದಿಂದ ಬೆಳೆ ಕೂಡ ಹಾಳಾಗುತ್ತಿವೆ. ಆದ ಕಾರಣ ಕಳೆನಾಶಕದ ಕುರಿತು ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆ ನಡೆಸಬೇಕು’ ಎಂಬುದು ರೈತರ ಆಗ್ರಹವಾಗಿದೆ.

ನ್ಯಾನೊ ಯೂರಿಯಾ ಬಳಸಲು ಸಲಹೆ

‘ಯೂರಿಯಾ (N46) ರಸಗೊಬ್ಬರದಲ್ಲಿ ಶೇ 46 ರಷ್ಟು ಸಾರಜನಕ ಇರುತ್ತದೆ. ಇದು ಬೆಳೆಗಳ ವೃದ್ಧಿಗೆ ಸಹಕಾರಿ. ಆದರೆ, ಭೂಮಿಗೆ ಸೇರಿದ ಯೂರಿಯಾ ನೈಟ್ರೇಟ್‌ ಆಗಿ ಪರಿವರ್ತನೆಗೊಂಡು ಅಂತರ್ಜಲ ಸೇರಿ ನೀರು ಕಲುಷಿತಗೊಳ್ಳುತ್ತದೆ. ನ್ಯಾನೊ ಯೂರಿಯಾ ಶೇ 4ರಷ್ಟು ನ್ಯಾನೊ ಸಾರಜನಕ ಹೊಂದಿರುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರವನ್ನು ಕಡಿಮೆ ಸರಬರಾಜು ಮಾಡಲಾಗುತ್ತಿದೆ. ರೈತರು ಯೂರಿಯಾ ಬದಲಿಗೆ ನ್ಯಾನೊ ಯೂರಿಯಾ ಬಳಸಬೇಕು’ ಎಂದು ಧಾರವಾಡ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನಗೌಡರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.