ADVERTISEMENT

ಹುಬ್ಬಳ್ಳಿ–ಧಾರವಾಡ | ಸಮರ್ಪಕ ಕಸ ವಿಲೇವಾರಿ: ಸಮುದಾಯ ನಿರ್ವಾಹಕರಿಗೆ ಹೊಣೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 2:47 IST
Last Updated 14 ಜುಲೈ 2025, 2:47 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಕಚೇರಿ
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಕಚೇರಿ   

ಹುಬ್ಬಳ್ಳಿ: ಅವಳಿ ನಗರದಲ್ಲಿ ಕಸ ವಿಲೇವಾರಿ ಸಮರ್ಪಕ ಮೇಲ್ವಿಚಾರಣೆಗೆ ಸಮುದಾಯ ನಿರ್ವಾಹಕರ ನೇಮಕಕ್ಕೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ.  

ಸ್ವಚ್ಛ ಭಾರತ್ ಮಿಷನ್ –2.0 ಯೋಜನೆಯಡಿ 15 ಸಾವಿರ ಜನಸಂಖ್ಯೆಗೆ ಒಬ್ಬ ಸಮುದಾಯ ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಬೇಕಿದ್ದು, ಅದರಂತೆ ಪಾಲಿಕೆ ವ್ಯಾಪ್ತಿಯಲ್ಲಿ 63 ಜನ ನಿರ್ವಾಹಕರು ನೇಮಕವಾಗಲಿದ್ದಾರೆ. 

ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆ ಪರಿಶೀಲನೆ, ಮೂಲದಲ್ಲೇ ಕಸವನ್ನು ಬೇರ್ಪಡಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಕಸ  ಹಾಕಿದವರಿಗೆ ದಂಡ ವಿಧಿಸುವುದು ಸೇರಿದಂತೆ ಇನ್ನಿತರ ಕಾರ್ಯಗಳನ್ನು ನಿರ್ವಾಹಕರು ಮಾಡಲಿದ್ದಾರೆ. 

ADVERTISEMENT

ಪೌರಕಾರ್ಮಿಕರು ಬೆಳಿಗ್ಗೆ 6 ಗಂಟೆಗೆ  ಸ್ವಚ್ಛತಾ ಕಾರ್ಯ ಆರಂಭಿಸುತ್ತಾರೆ. ಸಮುದಾಯ ನಿರ್ವಾಹಕರು ಸಹ ಅವರ ಜತೆ ಸಮನ್ವಯ ಸಾಧಿಸಿ ಸ್ವಚ್ಛ, ಸುಂದರ ನಗರ ನಿರ್ಮಾಣಕ್ಕೆ ಶ್ರಮಿಸಲಿದ್ದಾರೆ. ಆ ಸ್ಥಾನಕ್ಕೆ ಈಗಾಗಲೇ ಸಂದರ್ಶನ ಮಾಡಲಾಗಿದ್ದು, ಜುಲೈ 15ರಂದು ಕಾರ್ಯಾದೇಶ ನೀಡಲಾಗುವುದು ಎಂದು  ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ವಿಜಯಕುಮಾರ್ ತಿಳಿಸಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ, ಕಂಪ್ಯೂಟರ್ ಜ್ಞಾನ ಇರುವವರನ್ನು ಗುರುತಿಸಲಾಗಿದೆ. ಪಾಲಿಕೆಯ ಆಯುಕ್ತ, ಅಧೀಕ್ಷಕ ಎಂಜಿನಿಯರ್, ಉಪ ಆಯುಕ್ತ (ಆಡಳಿತ) ಸೇರಿ ಇನ್ನಿತರ ಅಧಿಕಾರಿಗಳ ಸಮ್ಮುಖದಲ್ಲಿ ಸಂದರ್ಶನ ಮಾಡಲಾಗಿದೆ.  ಮೂರು ವರ್ಷಗಳ ಅವಧಿಗೆ ಅವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಪ್ರತಿ ತಿಂಗಳು ಅವರಿಗೆ ₹18 ಸಾವಿರ ವೇತನವನ್ನು ಸರ್ಕಾರದಿಂದಲೇ ನೀಡಲಾಗುತ್ತದೆ ಎಂದರು.

ಒಟ್ಟು ₹4.26 ಕೋಟಿ ಮೊತ್ತದ ಯೋಜನೆ ಇದಾಗಿದೆ. ನಿರ್ವಾಹಕರು ಪಾಲಿಕೆ ಅಡಿ ಕೆಲಸ ಮಾಡುತ್ತಾರೆ. ಪಾಲಿಕೆಯ ಆರೋಗ್ಯ ನಿರೀಕ್ಷಕರು ಸ್ವಚ್ಛತಾ ಕಾರ್ಯ ನಿರ್ವಹಣೆ ಜತೆಗೆ ಇತರ ಕೆಲಸಗಳನ್ನು ಮಾಡುತ್ತಾರೆ. ಆದರೆ, ನಿರ್ವಾಹಕರು ಕಸ ನಿರ್ವಹಣೆಗಾಗಿ ಮಾತ್ರ ಇವರು ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.  

‘ಪಾಲಿಕೆಯಲ್ಲಿ 51 ಆರೋಗ್ಯ ನಿರೀಕ್ಷಕರ ಹುದ್ದೆಗಳಿದ್ದು, 35 ಜನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ 9 ಜನ ಗೌರವಧನದ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಹೀಗಾಗಿ ಒಬ್ಬರಿಗೆ 2–3 ವಾರ್ಡ್‌ಗಳ ಹೊಣೆ ನೀಡಲಾಗಿದೆ ಎಂದರು.

‘ಮೂಲದಲ್ಲೇ ಕಸ ವಿಂಗಡಣೆ ಆಗಬೇಕು. ಸಾರ್ವಜನಿಕರು ಕಸ ವಿಂಗಡಣೆ ಮಾಡಿಕೊಟ್ಟರೂ ಸಂಗ್ರಹಿಸುವವರು ಅದನ್ನು ಒಂದೇ ವಾಹನಕ್ಕೆ ಹಾಕುತ್ತಾರೆ. ಹೀಗಾಗಿ, ವಾಹನಗಳ ಚಾಲಕರು, ಸಹಾಯಕರಿಗೆ ತರಬೇತಿ ನೀಡಲಾಗುವುದು’ ಎಂದು ಮೇಯರ್‌ ಜ್ಯೋತಿ ಪಾಟೀಲ ಹೇಳಿದರು. 

‘ಕಸ ಸಂಗ್ರಹಿಸುವ ವಾಹನಗಳು ಹಾಳಾದರೆ ರಿಪೇರಿ ಮಾಡಲು ಈ ಹಿಂದೆ 15 ರಿಂದ 20 ದಿನಗಳು ಬೇಕಾಗುತ್ತಿತ್ತು. ಈಗ ಎರಡು ದಿನಗಳಲ್ಲಿ ರಿಪೇರಿ ಮಾಡಲಾಗುತ್ತಿದೆ. ಸದ್ಯ 272 ಆಟೊ ಟಿಪ್ಪರ್‌ಗಳು ಇವೆ. ಹಾಳಾಗುವ ವಾಹನಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೊಸದಾಗಿ 66 ಟಿಪ್ಪರ್‌ಗಳ ಖರೀದಿಗೆ ಕಾರ್ಯಾದೇಶ ನೀಡಲಾಗಿದೆ’ ಎಂದು ಉಪಮೇಯರ್ ಸಂತೋಷ ಚವಾಣ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.