ADVERTISEMENT

ಧಾರವಾಡ: ರಭಸದ ಮಳೆ, ರಸ್ತೆ ಜಲಾವೃತ

ನೆಂದುಕೊಂಡೇ ಮನೆ ಸೇರಿದ ವಿದ್ಯಾರ್ಥಿಗಳು, ನೌಕರಸ್ಥರು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:14 IST
Last Updated 13 ಸೆಪ್ಟೆಂಬರ್ 2025, 6:14 IST
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುರಿದ ರಭಸದ ಮಳೆಗೆ ದಾಜಿಬಾನ್‌ ಪೇಟೆಯ ಮುಖ್ಯ ರಸ್ತೆ ಜಲಾವೃತವಾಗಿತ್ತು
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುರಿದ ರಭಸದ ಮಳೆಗೆ ದಾಜಿಬಾನ್‌ ಪೇಟೆಯ ಮುಖ್ಯ ರಸ್ತೆ ಜಲಾವೃತವಾಗಿತ್ತು   

ಹುಬ್ಬಳ್ಳಿ: ಬಿಸಿಲಿನ ಧಗೆಯಿಂದ ಬೇಸತ್ತಿದ್ದ ನಗರದ ಜನತೆಗೆ ಶುಕ್ರವಾರ ಮಧ್ಯಾಹ್ನದಿಂದ ರಾತ್ರಿವರೆಗೆ ಸುರಿದ ಮಳೆ ತಂಪೆರೆಯಿತು.

ಕಳೆದ ಮೂರು– ನಾಲ್ಕು ದಿನಗಳಿಂದ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬಿಸಿಲಿನ ತಾಪ ಹೆಚ್ಚಾಗಿತ್ತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆ ಒಮ್ಮೆಲೆ ಮಳೆ ಜೋರಾಗಿ ಸುರಿಯಿತು. ರಾತ್ರಿ ಎಂಟು ಗಂಟೆವರೆಗೂ ನಿರಂತರವಾಗಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು. ತಗ್ಗು ಪ್ರದೇಶದ ರಸ್ತೆಗಳೆಲ್ಲ ಜಲಾವೃತವಾಗಿದ್ದವು.

ಮಾರುಕಟ್ಟೆಗೆ ಬಂದವರು, ವ್ಯಾಪಾರಿಗಳು ಪರದಾಡಿದರು. ಅನಿರೀಕ್ಷಿತವಾಗಿ ಮಳೆ ಸುರಿದ ಕಾರಣ ಶಾಲೆಗೆ, ಉದ್ಯೋಗಕ್ಕೆ ತೆರಳಿದ್ದವರು ಮಳೆಯಲ್ಲೇ ನೆನೆದುಕೊಂಡು ಮನೆ ಸೇರುವಂತಾಯಿತು. ಬಹುತೇಕ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ಕೇಶ್ವಾಪುರ, ನವನಗರ, ಗೋಪನಕೊಪ್ಪ, ಆನಂದನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಿತ್ತು.

ADVERTISEMENT

ದಾಜಿಬಾನ್‌ ಪೇಟೆ ಮುಖ್ಯ ರಸ್ತೆ ಹಾಗೂ ತುಳಜಾಭವಾನಿ ವೃತ್ತದ ಬಳಿ ಅಪಾರ ಪ್ರಮಾಣದಲ್ಲಿ ನೀರು ನಿಂತಿತ್ತು. ರಸ್ತೆ ಅಕ್ಕಪಕ್ಕ ನಿಲ್ಲಿಸಿದ್ದ ಬೈಕ್‌ಗಳು ನೀರಿನಲ್ಲಿ ಮುಳುಗಿದ್ದವು. ಕೆಲವು ಕಟ್ಟಡಗಳ ನೆಲಮಹಡಿಗೂ ನೀರು ನುಗ್ಗಿತ್ತು. ಎಸ್‌.ಎಂ. ಕೃಷ್ಣ ನಗರ, ಯಲ್ಲಾಪುರ ಓಣಿ, ಕೆ.ಬಿ. ನಗರದ ಕೆಲವು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, ತಡ ರಾತ್ರಿವರೆಗೂ ನಿವಾಸಿಗಳು ನೀರು ಹೊರಹಾಕುವಲ್ಲಿ ನಿರತರಾಗಿದ್ದರು.

ದೇಸಾಯಿ ವೃತ್ತದ ಕೆಳಸೇತುವೆ ಹಾಗೂ ದೇಶಪಾಂಡೆನಗರದ ರೈಲ್ವೆ ಬ್ರಿಡ್ಜ್‌ ಕೆಳಗೆ ನೀರು ನಿಂತಿತ್ತು. ದೇಸಾಯಿವೃತ್ತದ ಕೆಳಭಾಗ ನೀರು ನಿಂತ ಪರಿಣಾಮ ಸುತ್ತಲಿನ ನಾಲ್ಕು ರಸ್ತೆಯಲ್ಲಿ ಸಂಚರಿಸುವ ವಾಹನಗಳು ಅಲ್ಲಲ್ಲಿಯೇ ನಿಂತಿದ್ದವು. ವಿಜಯಪುರ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಹಳೇ ಕೋರ್ಟ್‌ವೃತ್ತದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಕೆಲವು ವಾಹನ ಸವಾರರು ಅಡ್ಡಾದಿಡ್ಡಿಯಾಗಿ ಸಂಚರಿಸಿದ್ದರಿಂದ ಕೋರ್ಟ್‌ ವೃತ್ತ, ಚನ್ನಮ್ಮ ವೃತ್ತ, ದುರ್ಗದ ಬೈಲ್‌ ವೃತ್ತದ ಸುತ್ತಮುತ್ತ ಅರ್ಧತಾಸು ಸಂಚಾರ ದಟ್ಟಣೆ ಉಂಟಾಗಿತ್ತು.

ಬಿಆರ್‌ಟಿಎಸ್ ಪಥದಲ್ಲಿ ನೀರು

ಕೆಎಂಸಿ–ಆರ್‌ಐ ಆಸ್ಪತ್ರೆ ಮುಂಭಾಗದ ಹಾಗೂ ಹೊಸೂರು ಪ್ರಾದೇಶಿಕ ಬಸ್‌ ನಿಲ್ದಾಣದ ಮುಂಭಾಗದ ಬಿಆರ್‌ಟಿಎಸ್‌ ಬಸ್‌ ನಿಲ್ದಾಣದ ಕಾರಿಡಾರ್‌ನಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿತ್ತು. ಉಣಕಲ್‌ನ ಇಂಡಿಯನ್‌ ಆಯಿಲ್‌ ದೊಡ್ಮನಿ ಪೆಟ್ರೋಲ್‌ ಬಂಕ್‌ ಬಳಿಯ ಬಿಆರ್‌ಟಿಎಸ್‌ ಬಸ್‌ ಕಾರಿಡಾರ್‌ ಹಾಗೂ ಮಿಶ್ರಪಥದಲ್ಲಿ ನೀರು ನಿಂತ ಪ್ರಮಾಣ ವಾಹನಗಳ ಸಂಚಾರ ಕೆಲ ಸಮಯ ಸ್ಥಗಿತಗೊಂಡಿತ್ತು.

ಟೆಂಡರ್‌ ಶ್ಯೂರ್‌ ರಸ್ತೆಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯಿತು. ಲ್ಯಾಮಿಂಗ್ಟನ್‌ ರಸ್ತೆಯಲ್ಲಿನ ಮ್ಯಾನ್‌ಹೋಲ್‌ ತುಂಬಿ ರಸ್ತೆ ಮೇಲೆ ಮಳೆ ನೀರಿನ ಜೊತೆ ಕೊಳಚೆ ನೀರು ಹರಿಯಿತು. ವಿದ್ಯಾರ್ಥಿಗಳು ಕೊಳಚೆ ನೀರನ್ನೇ ದಾಟಿಕೊಂಡು ಬಸ್‌ ಹತ್ತಲು ತೆರಳಿದ ದೃಶ್ಯ ಕಂಡುಬಂತು. ನಗರದ ಬಹುತೇಕ ಕಡೆ ಮ್ಯಾನ್‌ಹೋಲ್‌ಗಳು ತುಂಬಿ ಹರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.