ಹು–ಧಾ ಮಹಾನಗರ ಪಾಲಿಕೆ ಕಚೇರಿ
ಹುಬ್ಬಳ್ಳಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಅವಳಿ ನಗರದ ನಿವಾಸಿಗಳಿಗೆ ಈಗ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ಆಸ್ತಿ ತೆರಿಗೆ ಹೆಚ್ಚಳದ ಬಿಸಿಯೂ ತಟ್ಟಲಿದೆ.
‘ಆಸ್ತಿ ತೆರಿಗೆಯನ್ನು ಶೇ 3ರಷ್ಟು ಹೆಚ್ಚಳ ಮಾಡಿರುವುದರ ಜತೆಗೆ ಈ ಬಾರಿ ಒಳಚರಂಡಿ ಬಳಕೆ, ಘನತ್ಯಾಜ್ಯ ಸಂಗ್ರಹಕ್ಕೂ ಶುಲ್ಕ ವಿಧಿಸಲಾಗಿದೆ. ಮೂರು ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಿಸಬೇಕು ಎಂಬ ನಿಯಮ ಇದ್ದರು ಅದನ್ನು ಉಲ್ಲಂಘಿಸಿ ಪ್ರತಿ ವರ್ಷ ಪಾಲಿಕೆ ತೆರಿಗೆ ಹೆಚ್ಚಳ ಮಾಡುತ್ತಿದೆ’ ಎಂಬುದು ಸಂಘ ಸಂಸ್ಥೆಗಳ ಆರೋಪ.
‘ಪಾಲಿಕೆ ವ್ಯಾಪ್ತಿಯಲ್ಲಿ ಸುಸಜ್ಜಿತ ರಸ್ತೆ, ಸಮರ್ಪಕ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಇಲ್ಲ. ಅಲ್ಲದೆ, ಅಗತ್ಯ ಮೂಲಸೌಲಭ್ಯ ಕೊರತೆ ಇದೆ. ಹೀಗಿದ್ದರೂ ತೆರಿಗೆ ಹೆಚ್ಚಳ ಮಾಡಿರುವುದಕ್ಕೆ ತೆರಿಗೆದಾರರಲ್ಲಿ ಅಸಮಾಧಾನ ಮೂಡಿದೆ.
ಮಾರ್ಗಸೂಚಿ ದರವನ್ನು (ಸಬ್ ರಿಜಿಸ್ಟ್ರಾರ್ ವ್ಯಾಲ್ಯೂ) ಸಹ ಈ ವರ್ಷ ಪರಿಷ್ಕರಿಸಲಾಗಿದೆ. 2019ನೇ ಸಾಲಿನಿಂದ ಅನ್ವಯವಾಗುವಂತೆ ಈ ಮೌಲ್ಯವನ್ನು ಆಕರ ಮಾಡಲಾಗುತ್ತಿದೆ. ಇದರ ಜತೆಗೆ ಆಸ್ತಿ ತೆರಿಗೆಯಲ್ಲಿ ಶೇ 3ರಷ್ಟು ಹೆಚ್ಚಳ ಮಾಡಿರುವುದರಿಂದ ಶೇ 25ರಿಂದ 30ರಷ್ಟು ತೆರಿಗೆ ಹೆಚ್ಚಾಗಿದ್ದು, ಇದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ವಸತಿ ಪ್ರದೇಶದಲ್ಲಿ ಒಳಚರಂಡಿ ಬಳಕೆಗೆ ನಿವೇಶನದ ವಿಸ್ತೀರ್ಣ ಆಧರಿಸಿ ವಾರ್ಷಿಕ ಕನಿಷ್ಠ ₹300ರಿಂದ ₹1,200, ವಸತಿ ರಹಿತ ಪ್ರದೇಶಕ್ಕೆ ಕನಿಷ್ಠ ₹900ರಿಂದ ಗರಿಷ್ಠ ₹6000 ಮತ್ತು ವಾಣಿಜ್ಯ ಪ್ರದೇಶಕ್ಕೆ ಕನಿಷ್ಠ ₹600ರಿಂದ ಗರಿಷ್ಠ ₹2,400 ಶುಲ್ಕ ವಿಧಿಸಲಾಗಿದೆ.
ಅದೇ ರೀತಿ ಘನತ್ಯಾಜ್ಯ ನಿರ್ವಹಣೆಗೆ ವಸತಿ ಪ್ರದೇಶದಲ್ಲಿ ಕನಿಷ್ಠ ₹600ರಿಂದ ಗರಿಷ್ಠ ₹2,400 ಮತ್ತು ವಸತಿ ರಹಿತ, ವಾಣಿಜ್ಯ ಪ್ರದೇಶಕ್ಕೆ ಕನಿಷ್ಠ ₹1800 ರಿಂದ ಗರಿಷ್ಠ ₹12 ಸಾವಿರವರೆಗೆ ಶುಲ್ಕ ನಿಗದಿಪಡಿಸಲಾಗಿದೆ.
‘ಪಾಲಿಕೆಯು ಅವೈಜ್ಞಾನಿಕವಾಗಿ ಆಸ್ತಿ ತೆರಿಗೆ ಹೆಚ್ಚಿಸಿದೆ. ಈ ಮೊದಲು ₹3 ಸಾವಿರ ಆಸ್ತಿ ತೆರಿಗೆ ಪಾವತಿಸುತ್ತಿದ್ದೆ. ಈ ಬಾರಿ ₹5,500 ಆಸ್ತಿ ತೆರಿಗೆ ಪಾವತಿಸಬೇಕಿದೆ. ನಮ್ಮ ನಿವೇಶನ 1,400 ಚದರ ಅಡಿ ಇದ್ದು, ಒಳಚರಂಡಿ ಬಳಕೆಗೆ ₹600 ಮತ್ತು ಘನತ್ಯಾಜ್ಯ ನಿರ್ವಹಣೆಗೆ ₹1,200 ಶುಲ್ಕ ಭರಿಸಬೇಕಿದೆ. ಇದರಿಂದ ತುಂಬಾ ಹೊರೆಯಾಗುತ್ತದೆ’ ಎಂದು ಸರಸ್ವತಿಪುರದ ನಿವಾಸಿ ಜಗದೀಶ ಹೊಂಬಳ ತಿಳಿಸಿದರು.
‘ತೆರಿಗೆ ಹೆಚ್ಚಳ ಮಾಡುವ ಮುನ್ನ ಮಹಾನಗರ ಪಾಲಿಕೆಯು ಜನರಿಂದ ಆಕ್ಷೇಪಣೆ ಆಹ್ವಾನಿಸಬೇಕಿತ್ತು. ಜನರ ಅಭಿಪ್ರಾಯ ಆಧರಿಸಿ ಹೊರೆಯಾಗದ ರೀತಿ ತೆರಿಗೆ ಹೆಚ್ಚಿಸಬೇಕಿತ್ತು. ಏಕಾಏಕಿ ತೆರಿಗೆ ಹೆಚ್ಛಳ ಮಾಡಿರುವುದು ನ್ಯಾಯಸಮ್ಮತವಲ್ಲ. ಹೆಚ್ಚಳ ಮಾಡಿದ್ದು ಕೂಡಲೇ ಹಿಂಪಡೆಯಬೇಕು’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ವಸಂತ ಲದವಾ ಆಗ್ರಹಿಸಿದರು.
‘ಕಾನೂನು ಪ್ರಕಾರ ತೆರಿಗೆ ಹೆಚ್ಚಳ’
‘2019ರ ಮಾರ್ಗಸೂಚಿ ದರದ ಅನ್ವಯ ಈವರೆಗೆ ತೆರಿಗೆ ಸಂಗ್ರಹಿಲಾಗುತ್ತಿತ್ತು. 2023ರ ಹೊಸ ಮಾರ್ಗಸೂಚಿ ದರವನ್ನು ಈ ವರ್ಷ ಅನುಷ್ಠಾನಗೊಳಿಸಲಾಗಿದೆ. ಅದರ ಜತೆಗೆ ಶೇ 3ರಷ್ಟು ತೆರಿಗೆ ಹೆಚ್ಚಳ ಮಾಡಿರುವುದರಿಂದ ಆಸ್ತಿ ತೆರಿಗೆ ಶೇ 25ರಿಂದ 30ರಷ್ಟು ಹೆಚ್ಚಾಗಿದೆ. ಕಾನೂನು ಪ್ರಕಾರ ಮಾರ್ಗಸೂಚಿ ದರದ ಅನ್ವಯ ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದರು. ‘ಪಾಲಿಕೆಯ ಬೈಲಾ ಪ್ರಕಾರ ಒಳಚರಂಡಿ ಘನತ್ಯಾಜ್ಯ ನಿರ್ವಹಣೆಗೆ ಶುಲ್ಕ ವಿಧಿಸಲಾಗುತ್ತಿದೆ’ ಎಂದರು.
ಸೇವೆ ನೀಡುವಲ್ಲಿ ಮಹಾನಗರ ಪಾಲಿಕೆ ಹಿಂದೆ ಇದೆ. ಆಸ್ತಿ ತೆರಿಗೆ ಹೆಚ್ಚಳದಲ್ಲಿ ಮುಂದೆ ಇದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ.ಅಶೋಕ ಕುನ್ನೂರ, ಉಪಾಧ್ಯಕ್ಷ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.