ADVERTISEMENT

ಹುಬಳ್ಳಿ | ಉದ್ಯಾನಗಳಿಗೆ ಬೇಕಿದೆ ಕಾಯಕಲ್ಪ

ನಿರ್ವಹಣೆ ಕೊರತೆ: ಬಿಡುಗಡೆಯಾದ ಅನುದಾನ ಸಾಲದು, ಕಳೆಗುಂದಿದ ಉದ್ಯಾನಗಳು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 6:23 IST
Last Updated 3 ನವೆಂಬರ್ 2025, 6:23 IST

ಹುಬ್ಬಳ್ಳಿಯ ತಿಮ್ಮಸಾಗರ ಗುಡಿ ರಸ್ತೆಯಲ್ಲಿರುವ ಜವಳಿ ಶೆಟ್ಟರ್‌ ಉದ್ಯಾನದ ದುಸ್ಥಿತಿಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿಯ ತಿಮ್ಮಸಾಗರ ಗುಡಿ ರಸ್ತೆಯಲ್ಲಿರುವ ಜವಳಿ ಶೆಟ್ಟರ್‌ ಉದ್ಯಾನದ ದುಸ್ಥಿತಿಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬಳ್ಳಿ: ಒಂದು ಊರಿನ ಜನಸಂಖ್ಯೆಗೆ ಅನುಗುಣವಾಗಿ ಹಸಿರಿನ ಉದ್ಯಾನಗಳೂ ಬೇಕು. ಶುದ್ಧ ಗಾಳಿ, ವಾಯು ವಿಹಾರಕ್ಕೆ ಉದ್ಯಾನಗಳಿಲ್ಲದೇ ಇದ್ದರೆ ಬದುಕು ಅಸಹನೀಯವಾಗುವುದು ನಿಶ್ಚಿತ. ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳಲ್ಲಿ ಉದ್ಯಾನಗಳು ಹೆಸರಿಗಷ್ಟೇ ಇವೆ. ಇರುವ ಉದ್ಯಾನಗಳಿಗೆ ಕಾಯಕಲ್ಪ ನೀಡಬೇಕಿದೆ.

ADVERTISEMENT

ಜಿಲ್ಲೆ ವ್ಯಾಪ್ತಿಯಲ್ಲಿ 700 ಉದ್ಯಾನಗಳಿವೆ. 202.3 ಚದರ ಕಿಲೊಮೀಟರ್ ವಿಸ್ತೀರ್ಣದ ಅವಳಿ ನಗರದ ಜನಸಂಖ್ಯೆ ಅಂದಾಜು 13 ಲಕ್ಷ. ಬಹುತೇಕ ಉದ್ಯಾನಗಳು ಕಡತಗಳಿಗಷ್ಟೇ ಸೀಮಿತವಾಗಿದೆ. ಭೌತಿಕವಾಗಿ ಹೆಚ್ಚಿನವು ಉದ್ಯಾನಗಳಾಗಿ ಉಳಿದಿಲ್ಲ. ಒಂದಷ್ಟು ಒತ್ತುವರಿಯಾಗಿದ್ದರೆ, ಇನ್ನೊಂದಿಷ್ಟು ಅಭಿವೃದ್ಧಿಯಿಂದ ವಂಚಿತವಾಗಿವೆ.

ಹು–ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳೇ ನೀಡುವ ಮಾಹಿತಿಯಂತೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕಂಡು, ಉತ್ತಮ ನಿರ್ವಹಣೆಯ ಹಂತದಲ್ಲಿರುವ ಉದ್ಯಾನಗಳು ಕೇವಲ 53.

ಉದ್ಯಾನಗಳಿಗೆ ಅಗತ್ಯವಾದ ಸಸಿ ಹಾಗೂ ಹೂವಿನ ಗಿಡಗಳನ್ನು ಪೂರೈಸಲು ಹುಬ್ಬಳ್ಳಿ, ಧಾರವಾಡ ಹಾಗೂ ಕೆ.ಸಿ. ಪಾರ್ಕ್‌ನಲ್ಲಿ ಸಸ್ಯಪಾಲನಾಲಯಗಳಿವೆ. ಆದರೆ, ಅಲ್ಲಿಂದ ಬಂದ ಗಿಡಗಳು ಇಲ್ಲಿ ನಿರ್ವಹಣೆ ಇಲ್ಲದೇ ಸೊರಗಿವೆ. ಕಾಲಿಟ್ಟಲ್ಲೆಲ್ಲ ಕಸ, ಮುರಿದು ಬಿದ್ದಿರುವ ಬೆಂಚ್‌, ಕೊಂಡಿ ಕಳಚಿದ ಜೋಕಾಲಿ, ಮುರಿದ ಆಟಿಕೆಗಳು, ತುಕ್ಕು ಹಿಡಿದ ಗ್ರಿಲ್‌, ಕೆಸರುಮಯ ಆವರಣ ಹೀಗೆ ಒಂದೊಂದು ಅವತಾರದಲ್ಲಿ ಒಂದೊಂದು ಉದ್ಯಾನ ಕಾಣುವುದು ಸಾಮಾನ್ಯವಾಗಿದೆ.

ಉದ್ಯಾನಗಳು ಕಸ ಚೆಲ್ಲುವ ಜಾಗಗಳಾಗಿ ಮಾರ್ಪಟ್ಟಿವೆ. ಕೆಲವೆಡೆ ಪುಂಡ– ಪೋಕರಿಗಳ ಅಡ್ಡೆಯಾಗಿ, ಅನೈತಿಕ ಚಟುವಟಿಕೆಗಳ ತಾಣಗಳಾಗಿ ಬದಲಾಗಿವೆ. ಪಾಲಿಕೆಯ ಬೆರಳೆಣಿಕೆ ಸದಸ್ಯರು, ತಮ್ಮ ಆಸಕ್ತಿಯ ಫಲವಾಗಿ ವಾರ್ಡ್‌ನ ಕೆಲ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಸಿಬ್ಬಂದಿ ಕೊರತೆ: ಪಾಲಿಕೆಯಲ್ಲಿ ಉದ್ಯಾನಗಳ ನಿರ್ವಹಣೆಗೆ ಅಗತ್ಯವಿರುವ ಸಿಬ್ಬಂದಿ ಸಂಖ್ಯೆ 48. ಸದ್ಯ ಇರುವುದು ಕೇವಲ 22. ಇಷ್ಟು ಕಡಿಮೆ ಸಂಖ್ಯೆಯ ಸಿಬ್ಬಂದಿಯಿಂದ ಉದ್ಯಾನಗಳ ನಿರ್ವಹಣೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡುತ್ತದೆ. ಬಹುತೇಕ ಉದ್ಯಾನಗಳಲ್ಲಿ ಪೌರಕಾ ರ್ಮಿಕರೇ ಪಾಲಕ ರಾಗಿದ್ದಾರೆ. ಬೆಳಿಗ್ಗೆ ಪೌರ ಸೇವೆ ಮಾಡಿ ನಂತರ ಉದ್ಯಾನ ನಿರ್ವಹಣೆ ಮಾಡುತ್ತಾರೆ. ಮತ್ತೆ ಕೆಲವೆಡೆ  ಗುತ್ತಿಗೆದಾರರಿಗೇ ನಿರ್ವಹಣೆಯ ಹೊಣೆ ವಹಿಸಲಾಗಿದೆ.

ಒತ್ತುವರಿ ಕಿರಿಕಿರಿ: ಉದ್ಯಾನಕ್ಕಾಗಿ ಮೀಸಲಿಟ್ಟ ಜಾಗಗಳಲ್ಲಿ ಕೆಲವೆಡೆ ಅನಧಿಕೃತವಾಗಿ ಅಂಗಡಿ, ಶೆಲ್ಟರ್‌ಗಳು ತಲೆ ಎತ್ತಿವೆ. ಇದನ್ನು ಪರಿಹರಿಸುವ ಕಾರ್ಯ ಆಗುತ್ತಿಲ್ಲ. ಒತ್ತುವರಿ ಹಿಂದೆ ಪ್ರಭಾವಿಗಳಿರುವುದು ಇದಕ್ಕೆ ಕಾರಣ.

‘ಸರ್ಕಾರಿ ಜಾಗ ಒತ್ತುವರಿದಾರರಿಂದ ಮುಕ್ತವಾಗಬೇಕಾದರೆ, ಉದ್ಯಾನಕ್ಕಾಗಿ ಈಗಾಗಲೇ ಗುರುತಿಸಿರುವ ಜಾಗವನ್ನು ಬಂದೋಬಸ್ತ್ ಮಾಡಿ, ಬೇಲಿ ಹಾಕಬೇಕು. ಅಭಿವೃದ್ಧಿಪಡಿಸುವುದು ತಡವಾದರೂ, ಮೊದಲು ಬೇಲಿ ಹಾಕಬೇಕು’ ಎನ್ನುತ್ತಾರೆ ಉಣಕಲ್‌ ಕೆರೆ ಉದ್ಯಾನದಲ್ಲಿ ನಿತ್ಯ ವಾಯುವಿಹಾರ ನಡೆಸುವ ಸದಾನಂದ ಗೌಡ.

ಹಳೇಹುಬ್ಬಳ್ಳಿಯ ಅರವಿಂದ ನಗರದ 1ನೇ ಮುಖ್ಯರಸ್ತೆ ಬಳಿಯಿರುವ ಶ್ರೀಜ್ಞಾನಿ ಚನ್ನಬಸವೇಶ್ವರ ನಗರ ಉದ್ಯಾನ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಬಳಿ ಇರುವ ಚಿಟಗುಪ್ಪಿ ಉದ್ಯಾನ, ಗಾಂಧಿ ನಗರದ ಸಿಲ್ವರ್ ಟೌನ್ ಬಳಿಯ ಉದ್ಯಾನ ಸೇರಿ ಹಲವು ಉದ್ಯಾನಗಳು ತ್ಯಾಜ್ಯದ ತಾಣಗಳಾಗಿವೆ. ವಿದ್ಯಾನಗರದ ತಿಮ್ಮಸಾಗರ ಗುಡಿ ರಸ್ತೆಯಲ್ಲಿರುವ ಜವಳಿ ಗಾರ್ಡನ್ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ಶ್ರೀಜ್ಞಾನಿ ಚನ್ನಬಸವೇಶ್ವರ ನಗರ ಉದ್ಯಾನದ ಸುತ್ತ ಹಾಕಿದ ಗ್ರಿಲ್‌ಗಳು ತುಕ್ಕು ಹಿಡಿದಿವೆ. ಮುರಿದು ಬಿದ್ದಿರುವ ಗೇಟ್ ಮೂಲಕವೇ ಒಳಗೆ ಹೋಗಬೇಕು, ಆಟಿಕೆಗಳು ಉಪಯೋಗಿಸುವಂತಿಲ್ಲ. ಕಾಂಪೌಂಡ್ ಬಳಿಯೇ ಜನ ಕಸ ಎಸೆಯುತ್ತಾರೆ. ಹೊಸೂರು ಬಳಿಯ ಹೊಸ ಕೋರ್ಟ್, ಕಲ್ಲೂರ್‌ ಲೇಔಟ್‌, ಮುಕುಂದ ನಗರದ, ಡಾಲರ್ಸ್‌ ಕಾಲೊನಿ, ಗುಡಿಪ್ಲಾಟ್, ಶಿರೂರು ಪಾರ್ಕ್ ಬಳಿಯ ಉದ್ಯಾನಗಳು ತಕ್ಕಮಟ್ಟಿಗೆ ಚೆನ್ನಾಗಿವೆ. ಇಲ್ಲಿ ಜನ ವಾಯುವಿಹಾರ ಮಾಡುತ್ತಾರೆ. ಆದರೆ ಮಕ್ಕಳ ಆಟಿಕೆಗಳು ಇಲ್ಲ.

ವಿದ್ಯಾನಗರದ ಪೊಲೀಸ್‌ ಠಾಣೆ ಬಳಿ ಇರುವ, ವಾರ್ಡ್‌ ಸಂ.47ರ ವ್ಯಾಪ್ತಿಯ ಉದ್ಯಾನದಲ್ಲಿ ಹಸಿರು ಕಂಗೊಳಿಸುತ್ತದೆ. ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ಆದರೆ, ಇಲ್ಲಿರುವ ಕಲಾಕೃತಿಗಳು ಮುರಿದಿದ್ದು, ಉದ್ಯಾನದ ಅಂದಗೆಡಿಸಿವೆ.

ಅಳ್ನಾವರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಉದ್ಯಾನಗಳಿವೆ. ಆದರೆ ನಿರ್ಹಹಣೆ ಕೊರತೆಯಿಂದ ಮನಸ್ಸಿಗೆ ಮುದ ನೀಡಬೇಕಾದ ಇವು ಕಸದ ಕೊಂಪೆಯಾಗಿವೆ. ಪಟ್ಟಣದ ಹೊರ ವಲಯದ ಎಂ.ಸಿ. ಪ್ಲಾಟ್ ಬಡಾವಣೆಯ ವಿಶಾಲವಾದ ಉದ್ಯಾನದ ಆಟಿಕೆಗಳು ಕಿತ್ತು ಹೋಗಿವೆ. ಕೂರಲು ಹಾಕಿದ ಆಸನಗಳು ತುಕ್ಕು ಹಿಡಿದು, ಇದ್ದೂ ಇಲ್ಲದಂತಾಗಿವೆ. ನೈರ್ಮಲ್ಯ ಮರೀಚಿಕೆ ಆಗಿದೆ.

ಅಳ್ನಾವರ ಪಟ್ಟಣದ ಹೊರವಲಯದ ಡೌಗಿ ನಾಲಾ ದಡದ ಪ್ರಕೃತಿ ಮಡಿಲಲ್ಲಿರುವ ಅರಣ್ಯ ಇಲಾಖೆಯ ಸಾಲು ಮರದ ತಿಮ್ಮಕ್ಕ ಉದ್ಯಾನ ಸೌಲಭ್ಯ ಹೊಂದಿದ್ದು, ಇಲ್ಲಿಯ ಜನರ ನೆಮ್ಮದಿಯ ತಾಣವಾಗಿದೆ. ಇಲ್ಲಿ ಮಕ್ಕಳ ಆಟಿಕೆ ಜೊತೆಗೆ, ವಿಶಿಷ್ಟ ಚಿಟ್ಟೆ ಪಾರ್ಕ್‌ ಇದೆ. ಔಷಧೀಯ ಸಸ್ಯ ಸಂಕುಲದ, ಜೊತೆಗೆ ವಾಯು ವಿಹಾರಕ್ಕೆ ಸೂಕ್ತ ಪರಿಸರ ಇದೆ.

ಇದು ಹೊರತುಪಡಿಸಿ ಪಟ್ಟಣ ಪಂಚಾಯಿತಿ ನಿರ್ವಹಿಸುವ ಎರಡು ಉದ್ಯಾನಗಳು, ಎಂ.ಸಿ. ಪ್ಲಾಟ್‌ ಹಾಗೂ ವಿದ್ಯಾನಗರ ಬಡಾವಣೆಯಲ್ಲಿವೆ. ಲಭ್ಯ ಅನುದಾನದಲ್ಲಿ ಉದ್ಯಾನ ನಿರ್ವಹಣೆ ನಡೆದಿದೆ. ಮಕ್ಕಳ ಆಟಿಕೆ ಇವೆ. ಪಟ್ಟಣದಲ್ಲಿ ಹಿರಿಯರು, ಮಹಿಳೆಯರು ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರ ಮಾಡಲು ಪಾದಚಾರಿ ಪಥ ಬೇಕು ಎಂಬ ಬೇಡಿಕೆ ಇದೆ.

ಕುಂದಗೋಳ ತಾಲ್ಲೂಕಿನ ಹಳೇ ಪಟ್ಟಣದಲ್ಲಿ ಯಾವುದೇ ಉದ್ಯಾನ ಇಲ್ಲ. ಹೊಸ 20 ಲೇಔಟ್‌ಗಳಲ್ಲಿ ಉದ್ಯಾನಕ್ಕೆ ಜಾಗ ಮೀಸಲಿದ್ದು, ಬಹುತೇಕ ಅಭಿವೃದ್ಧಿ ಹೊಂದಬೇಕಿವೆ. 22 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣವು ಕಟ್ಟಡಗಳಿಂದ ಬೆಳೆದಿದೆ. ಆದರೆ, ಉದ್ಯಾನಗಳ ಕೊರತೆ ಇದೆ. ಎರಡು ಸಾರ್ವಜನಿಕ ಉದ್ಯಾನಗಳು ಹಾಗೂ ಹೊಸ ಬಡಾವಣೆಗಳಲ್ಲಿ 12 ಉದ್ಯಾನಗಳಿದ್ದರೂ ಸ್ಥಳೀಯ ಆಡಳಿತದ ಇಚ್ಛಾಶಕ್ತಿ ಕೊರತೆಯಿಂದ ಜನತೆಗೆ ಉದ್ಯಾನದ ಖುಷಿ ಸವಿಯಲು ಸಾಧ್ಯವಾಗಿಲ್ಲ.

ಪಟ್ಟಣದ ವಾರ್ಡ್‌ ನಂ.5 ರಲ್ಲಿ 2012ರಲ್ಲಿ ₹3 ಲಕ್ಷ ವೆಚ್ಚದಲ್ಲಿ ಸಣ್ಣ ಉದ್ಯಾನ ನಿರ್ಮಾಣಗೊಂಡಿತ್ತು. ಈಗ ಅದು ನಿರ್ವಹಣೆಯಿಲ್ಲದೆ ಕಳೆಗುಂದಿದೆ. ಹುಬ್ಬಳ್ಳಿ– ಲಕ್ಷ್ಮೇಶ್ವರ ರಸ್ತೆಗೆ ಹೊಂದಿಕೊಂಡಿರುವ ಗಾಳಿ ಮಾರೆಮ್ಮ ದೇವಸ್ಥಾನ ಹತ್ತಿರದ ಇನ್ನೊಂದು ಉದ್ಯಾನ ನಿರ್ವಹಣೆಯಿಲ್ಲದೆ ಸೊರಗಿದೆ.

‘ದೊಡ್ಡ ಉದ್ಯಾನಗಳ ಕೊರತೆಯಿದೆ. ಬಡಾವಣೆಗಳಲ್ಲಿರುವ ಉದ್ಯಾನಗಳನ್ನು ಅಭಿವೃದ್ಧಿ ಮಾಡಬೇಕಿದೆ’ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ.

ನವಲಗುಂದ ವ್ಯಾಪ್ತಿಯಲ್ಲಿ ಲಾಲಾಗುಡಿ, ಜೋಶಿ ಪ್ಲಾಟ್, ಮುದಿಗೌಡ್ರ ಪ್ಲಾಟ್ ಸೇರಿ ವಿವಿಧೆಡೆ ಆರು ಉದ್ಯಾನಗಳಿವೆ. ಪುರಸಭೆಯ ನಿರ್ಲಕ್ಷ್ಯದಿಂದ ಅವು ಅಂದ ಕಳೆದುಕೊಂಡಿವೆ. ಪಟ್ಟಣದ ಜೋಶಿ ಪ್ಲಾಟ್‌ನಲ್ಲಿರುವ ಉದ್ಯಾನದ ಆಟಿಕೆಗಳು ಬಳಸದ ಸ್ಥಿತಿಯಲ್ಲಿದ್ದು, ಕಸದೊಂದಿಗೆ ಮುಳ್ಳಿನ ಕಂಟಿಗಳು ಬೆಳೆದಿವೆ. ಲಾಲಗುಡಿ ದೇವಸ್ಥಾನ ಆವರಣದಲ್ಲಿರುವ ಉದ್ಯಾನ ನಿರ್ಮಿಸಿ ಒಂದೂವರೆ ವರ್ಷವಾದರೂ ನಿರ್ವಹಣೆ ಇಲ್ಲದೆ ಸಂಪೂರ್ಣ ಕಸೆ ಬೆಳೆದಿದೆ.

ಅವಳಿ ನಗರದಲ್ಲಿವೆ 579 ಉದ್ಯಾನ

‘ಹುಬ್ಬಳ್ಳಿ– ಧಾರವಾಡಲ್ಲಿ 327 ಎಕರೆ ಜಾಗದಲ್ಲಿ ಒಟ್ಟು 579 ಉದ್ಯಾನಗಳಿವೆ. ಅವುಗಳಲ್ಲಿ 111 ಅಭಿವೃದ್ಧಿಯಾಗಿವೆ. ಇನ್ನು 9 ಉದ್ಯಾನಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಉಳಿದ ಉದ್ಯಾನಗಳಲ್ಲಿ ಕಾಂಪೌಂಡ್ ನಿರ್ಮಾಣ, ಫೇವರ್ಸ್ ಅಳವಡಿಕೆ, ಗ್ರಿಲ್ ಅಳವಡಿಕೆ ಕೆಲಸ ನಡೆದಿದೆ’ ಎಂದು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ತೋಟಗಾರಿಕೆ ವಿಭಾಗದ ಅಧಿಕಾರಿ ತಿಳಿಸಿದರು. ‘ಒಟ್ಟು 63 ಖುಲ್ಲಾ ಜಾಗಗಳಿವೆ. 249 ಉದ್ಯಾನಗಳಲ್ಲಿ ಫಲಕ, ಬೆಂಚ್‌ಗಳಿವೆ. ಮಹಾನಗರ ಪಾಲಿಕೆ ಅನುದಾನ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಬಳಸಿಕೊಂಡು ಹಂತ ಹಂತವಾಗಿ ಉದ್ಯಾನಗಳನ್ನು ಅಭಿವೃದ್ಧಿ ಮಾಡಲಾಗುವುದು’ ಎಂದರು.

ಬೇಕಿದೆ ಉದ್ಯಾನ ದತ್ತು ಯೋಜನೆ

ಪಾಲಿಕೆಯ ವ್ಯಾಪ್ತಿಯಲ್ಲಿ ಇಷ್ಟು ಉದ್ಯಾನಗಳಿದ್ದರೂ ಈವರೆಗೂ ದತ್ತು ಯೋಜನೆ ಜಾರಿಯಾಗಿಲ್ಲ. ರೋಟರಿ, ಲಯನ್ಸ್‌ ಸೇರಿದಂತೆ ಹತ್ತಾರು ಸಂಸ್ಥೆಗಳಿವೆ. ಆರ್ಥಿಕವಾಗಿ ಪ್ರಬಲವಾಗಿ ಬೆಳೆದ ಕೈಗಾರಿಕಾ ಸಂಸ್ಥೆಗಳಿವೆ. ಕೇಂದ್ರ ಸಚಿವರು, ಶಾಸಕರ, ಪಾಲಿಕೆಯ ಸದಸ್ಯರ ದಂಡೇ ಇದೆ. ಆದರೆ, ಒಂದೇ ಒಂದು ಉದ್ಯಾನವನ್ನು ದತ್ತು ತೆಗೆದುಕೊಂಡ ಉದಾಹರಣೆ ಇಲ್ಲ. ಈ ಯೋಜನೆ ಜಾರಿ ಮಾಡಬೇಕಾದ ಇಚ್ಛಾಶಕ್ತಿಯೂ ಪಾಲಿಕೆಗಿಲ್ಲ.

‘ವರ್ಷಕ್ಕೆ ವಾರ್ಡ್‌ಗೆ ಒಂದು ಉದ್ಯಾನ ದತ್ತು ನೀಡಿದರೂ 100 ಉದ್ಯಾನಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಸಾಧ್ಯವಾಗುತ್ತಿತ್ತು. ಆದರೆ, ಈ ಯೋಜನೆ ಇಲ್ಲಿ ಅನುಷ್ಠಾನ ಆಗಿಲ್ಲ. ಇದು ಆಗಬೇಕು’ ಎನ್ನುತ್ತಾರೆ ವಿದ್ಯಾನಗರದ ವಿನಾಯಕ ಕಾಲೊನಿಯ ರಮಾನಂದ ಪಾಟೀಲ್‌.

ಪೂರಕ ಮಾಹಿತಿ:

ರಾಜಶೇಖರ ಸುಣಗಾರ,

ಬಸವರಾಜ ಗುಡ್ಡದಕೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.