
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳು ವೈದ್ಯರ ತೀವ್ರ ಕೊರತೆ ಎದುರಿಸುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಅಲ್ಲಿಯ ಸಾರ್ವಜನಿಕರು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿಆರ್‌ಐ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಹುಡುಕಿಕೊಂಡು ಧಾವಿಸುವ ಸ್ಥಿತಿ ಇದೆ.
ಬಹುತೇಕ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಅಗತ್ಯವಾದ ಔಷಧ, ಚುಚ್ಚುಮದ್ದುಗಳ ಕೊರತೆ ಇನ್ನೂ ಇದೆ. ಸ್ವಚ್ಛತೆಯ ಕೊರತೆಯೂ ಇದೆ ಎಂಬುದು ಸಾರ್ವಜನಿಕರ ದೂರು.
‘ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಆದರೂ ರಾತ್ರಿ ಸಮಯದಲ್ಲಿ ಹೆರಿಗೆಗೆ ಬಂದ ಕೆಲವರನ್ನು ಅಲ್ಲಿಂದ ಕೆಎಂಸಿಆರ್‌ಐಗೆ ಕಳುಹಿಸಿದ ಘಟನೆಗಳು ನಡೆದಿವೆ. ಬಡಜನರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಸ್ಥಿತಿ ತಪ್ಪಿಸಬೇಕಿದೆ. ರಾತ್ರಿ ಸಂದರ್ಭಗಳಲ್ಲಿ ಚಿಕಿತ್ಸೆಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಹುಬ್ಬಳ್ಳಿಯ ಸಮಾಜ ಸೇವಾ ಕಾರ್ಯಕರ್ತ ಪ್ರಕಾಶ ಬುರಬುರೆ ತಿಳಿಸಿದರು.
‘ಹುಬ್ಬಳ್ಳಿಯ ಹೊಸಮ್ಯಾದರ ಓಣಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿದ್ದ ಆಸ್ಪತ್ರೆಯ ಕಟ್ಟಡ ಹಲವು ದಿನಗಳಿಂದ ಪಾಳು ಬಿದ್ದಿತ್ತು. ಈಗ ಅಲ್ಲಿ ‘ನಮ್ಮ ಕ್ಲಿನಿಕ್’ ಆರಂಭಿಸಲಾಗಿದ್ದು, ಸ್ಥಳೀಯರಿಗೆ ಅನುಕೂಲವಾಗಿದೆ’ ಎಂದರು.
‘ಹಳೇಹುಬ್ಬಳ್ಳಿಯಲ್ಲಿ 100 ಹಾಸಿಗೆ ಸಾಮರ್ಥ್ಯದ ಹೈಟೆಕ್ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಆರೋಗ್ಯ ಇಲಾಖೆ ವ್ಯಾಪ್ತಿಗೆ ತಂದು ತಾಲ್ಲೂಕು ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಲು ಪ್ರಯತ್ನಗಳು ನಡೆದಿವೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಮಾಹಿತಿ ನೀಡಿದರು.
‘ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಲೂ ಸರಿಯಾಗಿ ಚಿಕಿತ್ಸೆ, ಔಷಧ, ಮಾತ್ರೆ, ಚುಚ್ಚುಮದ್ದು ಕೊಡುವುದಿಲ್ಲ. ಹೊರಗೆ ತೆಗೆದುಕೊಳ್ಳುವಂತೆ ಬರೆದುಕೊಡುತ್ತಾರೆ. ಕೆಲವು ವೈದ್ಯರಿಗೆ ಏಜೆಂಟ್‌ಗಳೂ ಇದ್ದಾರೆ. ಅವರು ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಹೋಗುವಂತೆ ಪುಸಲಾಯಿಸುತ್ತಾರೆ. ಈಚೆಗೆ ಕೆಎಂಸಿಆರ್‌ಐನಲ್ಲಿ ರೋಗಿಯೊಬ್ಬರಿಗೆ ಬೇಕಾದ ಇಂಜೆಕ್ಷನ್ ಸಿಗದೇ ಅವರ ಸಂಬಂಧಿಕರು ಹೈರಾಣಾದ ಘಟನೆ ನಡೆದಿದೆ’ ಎಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಎಂ. ಗುಂಟ್ರಾಳ ತಿಳಿಸಿದರು.
‘ಅನುದಾನದ ಕೊರತೆಯಿಂದ ಹಳೇ ಹುಬ್ಬಳ್ಳಿಯ ಹೈಟೆಕ್ ಆಸ್ಪತ್ರೆಯ ನಿರ್ಮಾಣ ಕಾರ್ಯ ವಿಳಂಬಗೊಂಡಿತು. ಅದನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮಾಡುವಂತೆ ಶಿಫಾರಸು ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಚಿಟಗುಪ್ಪಿ ಆಸ್ಪತ್ರೆ ಸುಸಜ್ಜಿತಗೊಂಡಿದೆ. ಎಲ್ಲ ರೀತಿಯ ಚಿಕಿತ್ಸೆಗಳೂ ಲಭ್ಯವಿವೆ’ ಎಂದು ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹೇಳಿದರು.
‘ಕಲಘಟಗಿ ತಾಲ್ಲೂಕು ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಇಲ್ಲ. ನವಲಗುಂದ ತಾಲ್ಲೂಕು ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್, ಮಕ್ಕಳತಜ್ಞರು ಹಾಗೂ ಶಸ್ತ್ರಚಿಕಿತ್ಸಕರು ಇಲ್ಲ. ಕುಂದಗೋಳ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ತ್ರೀರೋಗತಜ್ಞರು ಹಾಗೂ ರೇಡಿಯಾಲಜಿಸ್ಟ್ ಇಲ್ಲ. ಕುಂದಗೋಳ ತಾಲ್ಲೂಕಿನ ಇಂಗಳಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಯಲಿವಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕಲಘಟಗಿ ತಾಲ್ಲೂಕಿನ ಸಂಗಮೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಹುದ್ದೆ ಖಾಲಿ ಇವೆ. ಶುಶ್ರೂಷಕರ ಕೊರತೆ ಅಲ್ಪ ಇದ್ದರೂ, ಅದನ್ನು ಎನ್ಎಚ್ಎಂ (ರಾಷ್ಟ್ರೀಯ ಆರೋಗ್ಯ ಮಿಷನ್) ಅಡಿ ಭರ್ತಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದಿಂದಲೂ ನೇಮಕಾತಿ ನಡೆಯುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ತಿಳಿಸಿದರು.
‘ಧಾರವಾಡ ಜಿಲ್ಲೆಯಲ್ಲಿ 1 ಜಿಲ್ಲಾ ಆಸ್ಪತ್ರೆ, 3 ತಾಲ್ಲೂಕು ಆಸ್ಪತ್ರೆಗಳಿವೆ. 32 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಅಮ್ಮಿನಭಾವಿಯಲ್ಲಿ ಒಂದು ಸಮುದಾಯ ಆರೋಗ್ಯ ಕೇಂದ್ರವಿದೆ. ಅಳ್ನಾವರ ಹಾಗೂ ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೂ ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಅದರ ಕಾಮಗಾರಿಗಳು ಇನ್ನೂ ನಡೆಯುತ್ತಿವೆ. 19 ‘ನಮ್ಮ ಕ್ಲಿನಿಕ್’ಗಳನ್ನು ತೆರೆಯಲಾಗಿದ್ದು, ಇನ್ನೂ ಎರಡು ಕೇಂದ್ರಗಳು ಶೀಘ್ರದಲ್ಲೇ ಆರಂಭವಾಗಲಿವೆ. ಹುಬ್ಬಳ್ಳಿಯಲ್ಲಿ ಕೆಎಂಸಿಆರ್‌ಐ ಹಾಗೂ ಧಾರವಾಡದಲ್ಲಿ ಜಿಲ್ಲಾ ಆಸ್ಪತ್ರೆ ಇರುವುದರಿಂದ ತಾಲ್ಲೂಕು ಆಸ್ಪತ್ರೆ ನೀಡಿಲ್ಲ’ ಎಂದೂ ಹೇಳಿದರು.
‘ಜಿಲ್ಲೆಯ ಎಲ್ಲ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲೂ ಅಗತ್ಯ ಔಷಧ ದಾಸ್ತಾನು, ನಾಯಿಕಡಿತ, ಹಾವು ಕಡಿತಕ್ಕೆ ಔಷಧಗಳು, ಎಆರ್‌ವಿ, ಇಮ್ಯುನೋಗ್ಲೊಬ್ಯುಲಿನ್ ಲಭ್ಯವಿವೆ’ ಎಂದೂ ಅವರು ಸ್ಪಷ್ಟನೆ ನೀಡಿದರು. ‘ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳನ್ನು ಹೊರಗೆ ಬರೆದುಕೊಡುವಂತಿಲ್ಲ’ ಎಂದೂ ತಿಳಿಸಿದರು.
‘ಕೆಎಂಸಿಆರ್‌ಐ ಆಸ್ಪತ್ರೆ ಉತ್ತರ ಕರ್ನಾಟಕದ ಪ್ರಮುಖ ಆಸ್ಪತ್ರೆ. ಇಲ್ಲಿಯ ರೋಗಿಗಳ ಸಂಖ್ಯೆ ನೋಡಿದರೆ ಸರ್ಕಾರದ ಅನುದಾನ ಯಾತಕ್ಕೂ ಸಾಲುತ್ತಿಲ್ಲ. ಸರ್ಕಾರ ಮೈಸೂರು, ಬೆಂಗಳೂರು ನಗರಗಳ ಆಸ್ಪತ್ರೆಗಳಿಗೆ ನೀಡುವಷ್ಟು ಅನುದಾನವನ್ನು ಇಲ್ಲಿಗೆ ನೀಡುತ್ತಿಲ್ಲ. ಕ್ಯಾನ್ಸರ್ ವಿಶೇಷ ಆರೈಕೆ ಕೇಂದ್ರ ಇಲ್ಲಿ ಅವಶ್ಯವಾಗಿ ಬೇಕಿದೆ. ಉತ್ತರ ಕರ್ನಾಟಕದ ಬಹುತೇಕ ಕ್ಯಾನ್ಸರ್ ಪ್ರಕರಣಗಳನ್ನು ಇಲ್ಲಿಗೇ ಶಿಫಾರಸು ಮಾಡಲಾಗುತ್ತಿದೆ. ಹೀಗಾಗಿ ಈಗಾಗಲೇ ಇದರ ಅಗತ್ಯದ ಬಗ್ಗೆ 6 ಬಾರಿ ಅಧಿವೇಶನಗಳಲ್ಲಿ ಮಾತನಾಡಿದ್ದೇನೆ. ಸಚಿವರಿಗೂ ಮನವಿ ಮಾಡಿದ್ದೇನೆ. ಆದರೆ ಇಲ್ಲಿಯವರೆಗೂ ಏನೂ ಕ್ರಮ ಆಗಿಲ್ಲ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಕುಂದಗೋಳ: ಇಲ್ಲಿಯ ತಾಲ್ಲೂಕು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 100 ಹಾಸಿಗೆಯ ಆಸ್ಪತ್ರೆ ಉದ್ಘಾಟನೆಯಾಗಿದ್ದರೂ, ಇದುವರೆಗೂ ಸುವ್ಯವಸ್ಥಿತವಾಗಿಲ್ಲ.
‘ಆಸ್ಪತ್ರೆಯಲ್ಲಿ ಒಟ್ಟು 9 ವೈದ್ಯರು ಇರಬೇಕಿತ್ತು. ಈಗ 6 ವೈದ್ಯರು ಮಾತ್ರ ಹಗಲು, ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರು ವೈದ್ಯರೂ ಸೇರಿ 6 ಸಿಬ್ಬಂದಿಯ ಕೊರತೆ ಇದೆ’ ಎಂದು ತಾಲ್ಲೂಕು ಆಸ್ಪತ್ರೆ ಮುಖ್ಯಾಧಿಕಾರಿ ಶಂಕರ ತುಕ್ಜಣ್ಣವರ ಮಾಹಿತಿ ನೀಡಿದರು.
ವೈದ್ಯರು, ಸಿಬ್ಬಂದಿ ಕೊರತೆ ನಿವಾರಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆಗಳು ಆರೋಗ್ಯ ಸಚಿವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸುವ್ಯಸ್ಥಿತ 100 ಹಾಸಿಗೆ ಆಸ್ಪತ್ರೆ ಕಟ್ಟಡ ಇದ್ದರೂ ಬಡ ಜನತೆಗೆ ಆರೋಗ್ಯ ಭಾಗ್ಯ ಸಿಗದಂತಾಗಿದೆ.
ಉಪ್ಪಿನಬೆಟಗೇರಿ: ಇಲ್ಲಿಯ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರ 8 ಉಪಕೇಂದ್ರ ಹೊಂದಿದೆ. ಇದರಲ್ಲಿ 6 ಕೇಂದ್ರದಲ್ಲಿ ಅರೋಗ್ಯಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ಎರಡು ಕಡೆ ಹುದ್ದೆ ಖಾಲಿ ಇವೆ. ಖಾಲಿ ಇದ್ದ ಕೇಂದ್ರದಲ್ಲಿ ಅಧಿಕಾರಿಗಳು ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಬೇಕಿದೆ.
ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ತುರ್ತು ಸೇವೆಗಾಗಿ ಸಾಮಾನ್ಯ ಆಂಬುಲೆನ್ಸ್ ಇದೆ. ಆದರೆ ಸೌಲಭ್ಯ ಕಡಿಮೆ ಮತ್ತು ಕಿರಿದಾಗಿ ಇದೆ. ಸದ್ಯ ಬಿಎಲ್‌ಎಸ್ ಆಂಬುಲೆನ್ಸ್‌ಗಾಗಿ ಗಂಟೆಗಟ್ಟಲೆ ಕಾಯಬೇಕಿದೆ.
‘ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಘಟಕವಿದ್ದು, ಸಿಬ್ಬಂದಿಯಿಂದ ಸ್ವಚ್ಛತೆ ಮಾಡಿಸಲಾಗುತ್ತದೆ. ಆವರಣದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕಿದೆ. ಅರೋಗ್ಯ ಕೇಂದ್ರದಿಂದ ಕೆಲ ದೂರದವರೆಗಷ್ಟೇ ಸಿಸಿ ರಸ್ತೆ ಕಾಮಗಾರಿ ಮಾಡಲಾಗಿದ್ದು, ಇನ್ನರ್ಧ ಹಾಗೆಯೇ ಬಿಡಲಾಗಿದೆ. ಇದನ್ನು ಪೂರ್ಣಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ತಿಳಿಸಲಾಗಿದೆ’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ವೈದ್ಯೆ ಬಿ.ಎಸ್. ಖಂಡುನಾಯ್ಕ್ ಮಾಹಿತಿ ನೀಡಿದರು.
ಅಮ್ಮಿನಭಾವಿ ಗ್ರಾಮದಲ್ಲಿ ಸದ್ಯ ಪ್ರಾಥಮಿಕ ಅರೋಗ್ಯ ಕೇಂದ್ರವಿದ್ದು, ಸಮುದಾಯ ಅರೋಗ್ಯ ಕೇಂದ್ರ ಮಂಜೂರಾಗಿದೆ. ಕಾಮಗಾರಿ ಆರಂಭವಾಗಿ ಹಲವು ವರ್ಷಗಳೇ ಗತಿಸಿದೆ. ಇನ್ನೂ ಜನರ ಸೇವೆಗೆ ಲಭ್ಯವಾಗಿಲ್ಲ ಎಂದು ಅಮ್ಮಿನಭಾವಿ ಗ್ರಾಮದ ನಿವಾಸಿಯೊಬ್ಬರು ದೂರಿದರು.
ವರದಿ: ಸ್ಮಿತಾ ಶಿರೂರ, ಧನ್ಯಪ್ರಸಾದ್ ಬಿ.ಜೆ., ಬಸವರಾಜ ಗುಡ್ಡದಕೇರಿ, ರಾಜಶೇಖರ ಸುಣಗಾರ, ರಮೇಶ ಎಸ್. ಓರಣಕರ
‘ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಎಲ್ಲ ವಿಭಾಗಗಳೂ ಸೇರಿ 2404 ಹಾಸಿಗೆಗಳಿದ್ದು ಶೇ 60– ಶೇ 70ರಷ್ಟು ಭರ್ತಿಯಾಗಿರುತ್ತದೆ. ಐಸಿಯುನಲ್ಲಿ 300 ಹಾಸಿಗೆಗಳಿದ್ದು ಯಾವಾಗಲೂ ಪೂರ್ಣ ಭರ್ತಿಯಾಗಿರುತ್ತವೆ. ವೈದ್ಯರು ಸಿಬ್ಬಂದಿ ಹಾಗೂ ಔಷಧಗಳ ಕೊರತೆ ಇಲ್ಲ. ಔಷಧ ಕೊರತೆಯಾದಾಗ ಸ್ಥಳೀಯವಾಗಿ ಖರೀದಿ ಮಾಡಿ ವ್ಯವಸ್ಥೆ ಮಾಡಲಾಗುತ್ತದೆ. ಕ್ಯಾನ್ಸರ್ ಅಧ್ಯಯನ ಸಂಸ್ಥೆ ಹಾಗೂ ಮಕ್ಕಳ ಆಸ್ಪತ್ರೆ ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕೆಎಂಸಿಆರ್‌ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ತಿಳಿಸಿದರು. ಶೀಘ್ರದಲ್ಲಿ ಬ್ಲಡ್‌ಬ್ಯಾಂಕ್ ಆರಂಭ ‘ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಅಡಿ ಕಾರ್ಯನಿರ್ವಹಿಸುವ ಚಿಟಗುಪ್ಪಿ ಆಸ್ಪತ್ರೆಯಲ್ಲಿ ನಿತ್ಯ ಸರಾಸರಿ 500ರಷ್ಟು ಹೊರರೋಗಿಗಳು ಇರುತ್ತಾರೆ. ತಿಂಗಳಿಗೆ 110 ರಿಂದ 150 ರಷ್ಟು ಹೆರಿಗೆಗಳು ಆಗುತ್ತಿವೆ. ಪ್ರತಿ ವಿಭಾಗದಲ್ಲೂ ಇಬ್ಬರು ವೈದ್ಯರು ಇದ್ದು ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಇಲ್ಲ. ರಾತ್ರಿ ವೇಳೆ ಗರಿಷ್ಠ ಹೆರಿಗೆಗಳೂ ಇಲ್ಲಿಯೇ ಆಗುತ್ತವೆ. ಯಾವ ಪ್ರಕರಣಗಳನ್ನೂ ನಾವು ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡುವುದಿಲ್ಲ. ಕೆಲವರು ಅವರೇ ಹೋಗುತ್ತಾರೆ’ ಎಂದು ಚಿಟಗುಪ್ಪಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ತಿಳಿಸಿದರು. ‘3 ಆ್ಯಂಬುಲೆನ್ಸ್‌ಗಳು ಇವೆ. ಸದ್ಯದಲ್ಲೇ ರಕ್ತನಿಧಿ ಕೇಂದ್ರವನ್ನೂ ಆರಂಭಿಸುವ ಯೋಜನೆಯಿದೆ. ಲಯನ್ಸ್ ಕ್ಲಬ್ ಸಹಯೋಗದಲ್ಲಿ ಇದನ್ನು ಜಾರಿಗೊಳಿಸಲಾಗುವುದು’ ಎಂದು ಹೇಳಿದರು.
ಅಳ್ನಾವರ: ಹೊಸ ತಾಲ್ಲೂಕು ಕೇಂದ್ರವಾದ ಪಟ್ಟಣದಲ್ಲಿ ಸದ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಇದನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ ಬದಲಾವಣೆ ಏನೂ ಆಗಿಲ್ಲ. ಅಳ್ನಾವರ ಪಟ್ಟಣ ಧಾರವಾಡ ಬೆಳಗಾವಿ ಉತ್ತರ ಕನ್ನಡ ಜಿಲ್ಲಾ ಗಡಿಗೆ ಹೊಂದಿಕೊಂಡು ಮಲೆನಾಡಿನ ಸೆರಗಿನ ಕಾಡಂಚಿನ ಪ್ರದೇಶವಾಗಿದೆ. ಆ ಜಿಲ್ಲೆಗಳಿಂದಲೂ ಇಲ್ಲಿಗೆ ರೋಗಿಗಳು ಬರುತ್ತಾರೆ. ಕೇವಲ ಧಾರವಾಡ ಜಿಲ್ಲೆಯ ಜನಸಂಖ್ಯೆ ಮಾನದಂಡವಾಗಿ ಇರಿಸಿಕೊಂಡರೆ ತಾಲ್ಲೂಕು ಆಸ್ಪತ್ರೆ ಮಾಡಲು ಬರುವುದಿಲ್ಲ. ಜನಸಂಖ್ಯೆ ಪರಿಗಣಿಸದೇ ಇದನ್ನು ಗಡಿಜಿಲ್ಲೆಯ ಪಡಮೂಲೆ ಸ್ಥಳ ಎಂದು ಪರಿಗಣಿಸಿ ತಾಲ್ಲೂಕು ಆಸ್ಪತ್ರೆ ಎಂದು ಘೋಷಣೆ ಮಾಡಿದರೆ ಈ ಭಾಗದ ಜನರಿಗೆ ತುಂಬಾ ಅನುಕೂಲ ಆಗಲಿದೆ ಎಂಬುದು ಜನರ ಒತ್ತಾಯ. ತಾಲ್ಲೂಕು ಆಸ್ಪತ್ರೆ ಆದರೆ ಹೆಚ್ಚಿನ ಸಂಖ್ಯೆ ವೈದ್ಯರು ಚಿಕಿತ್ಸಾ ಉಪಕರಣಗಳು ಬಂದು ಮೂರು ಜಿಲ್ಲೆಗಳ ಪಡಮೂಲೆ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲು ಸಾಧ್ಯ ಎಂಬುದು ಜನರ ಅನಿಸಿಕೆ.
‘ಜಿಲ್ಲೆಯಲ್ಲಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆ ಭರ್ತಿಗೆ ಪದೇ ಪದೇ ಅರ್ಜಿ ಕರೆಯುತ್ತಲೇ ಇದ್ದೇವೆ. ಯಾರೂ ಬರುತ್ತಿಲ್ಲ. ಹುಬ್ಬಳ್ಳಿ– ಧಾರವಾಡ ತಾಲ್ಲೂಕಿಗೆ ಬರುತ್ತಾರೆ. ಆದರೆ ಉಳಿದ ತಾಲ್ಲೂಕುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದು ಇಲ್ಲಿಯದಷ್ಟೇ ಸಮಸ್ಯೆಯಲ್ಲ. ಇಡೀ ರಾಜ್ಯದಲ್ಲೇ ತಾಲ್ಲೂಕು ಆಸ್ಪತ್ರೆ ಹಾಗೂ ಗ್ರಾಮೀಣ ಆಸ್ಪತ್ರೆಗಳಲ್ಲಿ ಇದೇ ಸ್ಥಿತಿ ಇದೆ. ರಾಜ್ಯ ಸರ್ಕಾರದ ಮಟ್ಟದಲ್ಲೂ ನೇಮಕಾತಿ ಪ್ರಯತ್ನಗಳು ನಡೆಯುತ್ತಲೇ ಇವೆ. ಸ್ಥಳೀಯವಾಗಿ ಸಮಸ್ಯೆ ಪರಿಹಾರಕ್ಕೆ ನಾವು ಬೇರೆಡೆಯ ವೈದ್ಯರನ್ನು ಹೆಚ್ಚುವರಿಯಾಗಿ ನಿಯೋಜನೆ ಮಾಡುತ್ತಿದ್ದೇವೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು. ‘ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಹೊರಗೆ ಬರೆದುಕೊಟ್ಟಿರುವ ನಿರ್ದಿಷ್ಟ ದೂರು ಬಂದರೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಯಮಿತವಾಗಿ ಪರಿಶೀಲನೆ ನಡೆಸುತ್ತಿದ್ದು ಔಷಧ ಕೊರತೆ ಇಲ್ಲ’ ಎಂದು ಅವರು ಸ್ಪಷ್ಟನೆ ನೀಡಿದರು.
ಧಾರವಾಡ: ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿಳು ನೋಂದಣಿಗೆ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಚೀಟಿ ಮಾಡಿಸಲು ಕೌಂಟರ್ ಬಳಿ ಸಾಲುಗಟ್ಟಿ ನಿಲ್ಲಬೇಕು. ಚೀಟಿ ಮಾಡಿಸಿ ವೈದ್ಯರು ಸಿಗದಿದ್ದರೆ ಮರುದಿನ ಬರಬೇಕು. ಹೊರರೋಗಿಗಳ ವಿಭಾಗದಲ್ಲಿ ನಿತ್ಯ ಸುಮಾರು 1500 ಮಂದಿ ಭೇಟಿ ನೀಡುತ್ತಾರೆ. ನೋಂದಣಿ ಘಟಕದಲ್ಲಿ ಕೌಂಟರ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಒತ್ತಾಯ ಇದೆ. ‘ಲ್ಯಾಪ‍್ರೊಸ್ಕೊಪಿ’ ಯಂತ್ರ ‘ಎಕ್ಸ್‌ರೇ’ ಯಂತ್ರ ಸಹಿತ ಕೆಲವು ಯಂತ್ರಗಳನ್ನು ಆಸ್ಪತ್ರೆಗೆ ಹೆಚ್ಚುವರಿಯಾಗಿ ಒದಗಿಸಬೇಕು ಎಂಬ ಬೇಡಿಕೆಗಳು ಇವೆ. ಈಗಿರುವ ಕಟ್ಟಡದಲ್ಲಿ ಕೆಲವೆಡೆ ಕಿಟಕಿ ಗಾಜುಗಳು (ಔಷಧ ವಿತರಣೆ ವಿಭಾಗ...) ಒಡೆದಿವೆ. ಜಿಲ್ಲಾಸ್ಪತ್ರೆ ಕಟ್ಟಡವು ಪುರಾತತ್ವ ಇಲಾಖೆ ವ್ಯಾಪ್ತಿಯ ಪ್ರದೇಶದಲ್ಲಿ ಇದೆ. 500 ಹಾಸಿಗೆ ಸಾಮರ್ಥ್ಯದ ಕಟ್ಟಡ ನಿರ್ಮಿಸಬೇಕು ಎಂಬ ಬೇಡಿಕೆ ಇದೆ.
ಜಿಲ್ಲಾಸ್ಪತ್ರೆ ಆವರಣದಲ್ಲಿ ಅಡ್ಡಾದಿಡ್ಡಿಯಾಗಿ ಎಲ್ಲೆಂದರದಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಿರುತ್ತಾರೆ. ಮುಖ್ಯ ಕಟ್ಟಡ ಎದುರು ನೋಂದಣಿ ಘಟಕದ ಪಕ್ಕ ವಾರ್ಡ್ ಬ್ಲಾಕ್ ಮುಂಭಾಗದಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ‘ಅಡ್ಡಾದಿಡ್ಡಿ ವಾಹನ ನಿಲಗಡೆಗೆ ಕಡಿವಾಣ ಹಾಕಬೇಕು. ರೋಗಿಗಳು ಜನರಿಗೆ ಓಡಾಟಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಬೇಕು’ ಎಂದು ಆಟೋ ಚಾಲಕ ದಸ್ತಗೀರ್ ಸಾಬ್ ಒತ್ತಾಯಿಸಿದರು. ಹೊಸ ಕಟ್ಟಡ ನಿರ್ಮಾಣಕ್ಕೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ ‘ಪ್ರಜಾವಾಣಿ’ಗೆ ತಿಳಿಸಿದರು.
ವರದಿ: ಸ್ಮಿತಾ ಶಿರೂರ,ಬಿ.ಜೆ.ಧನ್ಯಪ್ರಸಾದ್, ಬಸವರಾಜ ಗುಡ್ಡದಕೇರಿ, ರಾಜಶೇಖರ ಸುಣಗಾರ, ರಮೇಶ ಎಸ್. ಓರಣಕರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.