ADVERTISEMENT

ಹುಬ್ಬಳ್ಳಿ | ಮೇಲ್ಸೇತುವೆ ಕಾಮಗಾರಿ: ಬಂದ್‌ ಮಾಡಿದ್ದ ರಸ್ತೆ ಭಾಗಶಃ ಮುಕ್ತ

ಮೇಲ್ಸೇತುವೆ: ಸೆ. 3ರಿಂದ ಕೇಂದ್ರ ಬಸ್‌ ನಿಲ್ದಾಣ ಪುನರಾರಂಭ, ಲಘು ವಾಹನಗಳ ಸಂಚಾರಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 3:26 IST
Last Updated 27 ಆಗಸ್ಟ್ 2025, 3:26 IST
ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಯನ್ನು ಮಂಗಳವಾರ ಶಾಸಕ ಮಹೇಶ ಟೆಂಗಿನಕಾಯಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಉಪಸ್ಥಿತರಿದ್ದರು
ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಯನ್ನು ಮಂಗಳವಾರ ಶಾಸಕ ಮಹೇಶ ಟೆಂಗಿನಕಾಯಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಉಪಸ್ಥಿತರಿದ್ದರು   

ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆಯ ತ್ವರಿತ ಕಾಮಗಾರಿಗೆ ನಾಲ್ಕುವರೆ ತಿಂಗಳು ಬಂದ್‌ ಆಗಿದ್ದ ನಗರದ ಕೇಂದ್ರ ಬಸ್‌ (ಹಳೇ) ನಿಲ್ದಾಣ ಹಾಗೂ ಚನ್ನಮ್ಮ ವೃತ್ತದಿಂದ ಬಸವವನದವರೆಗಿನ ರಸ್ತೆಯನ್ನು ಸೆ.3ರಂದು ಸಾರ್ವಜನಿಕರಿಗೆ ಭಾಗಶಃ ಮುಕ್ತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಏಪ್ರಿಲ್‌ 20ರಿಂದ ಆಗಸ್ಟ್‌ 19ರವರೆಗೆ ಬಸವವನದಿಂದ ಚನ್ನಮ್ಮ ವೃತ್ತ, ಹಾಗೂ ಚನ್ನಮ್ಮ ವೃತ್ತದಿಂದ ಹಳೇಕೋರ್ಟ್‌ ವೃತ್ತದವರೆಗಿನ ಮೇಲ್ಸೇತುವೆ ಹಾಗೂ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ರಸ್ತೆ ಮತ್ತು ಗಟಾರು ಕಾಮಗಾರಿ ಹೊರತು ಪಡಿಸಿ ಉಳಿದೆಲ್ಲವೂ ಭಾಗಶಃ ಮುಕ್ತಾಯವಾದ ಹಿನ್ನೆಲೆಯಲ್ಲಿ, ಬಂದ್‌ ಮಾಡಿರುವ ರಸ್ತೆಯನ್ನು ಭಾಗಶಃ ಹಾಗೂ ಸ್ಥಗಿತಗೊಳಿಸಲಾಗಿರುವ ಬಸ್‌ ನಿಲ್ದಾಣವನ್ನು ಪುನರಾರಂಭಿಸಲು ತೀರ್ಮಾನಿಸಲಾಗಿದೆ.

‘ಆ.27ರಿಂದಲೇ ಪ್ರಾಯೋಗಿಕವಾಗಿ ಲಘು ವಾಹನಗಳ ಸಂಚಾರ ನಡೆಸಿ, ಸಾಧ್ಯತಾ ವರದಿ ಸಿದ್ಧಪಡಿಸಲಾಗುವುದು. ಯಾವ್ಯಾವ ವಾಹನಗಳನ್ನು ಓಡಿಸಬಹುದು ಎನ್ನುವ ಮಾಹಿತಿ ಮೇರೆಗೆ, ಸೆ.3ರಂದು ಭಾಗಶಃ ರಸ್ತೆ ಮುಕ್ತಗೊಳಿಸಲಾಗುವುದು. ಬಸ್‌ ನಿಲ್ದಾಣದಿಂದಲೂ ಬಸ್‌ಗಳ ಓಡಾಟ ಪುನರಾರಂಭವಾಗಲಿದೆ’ ಎಂದು ಮಂಗಳವಾರ ಮಾಧ್ಯಮದವರಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ADVERTISEMENT

‘ಚನ್ನಮ್ಮ ವೃತ್ತದಿಂದ ಬಸವವನದ ಪೂರ್ವ ವಿಆರ್‌ಎಲ್‌ ಕಚೇರಿವರೆಗೆ ಏಕಮುಖವಾಗಿ ಮಾತ್ರ ರಸ್ತೆ ಮುಕ್ತಗೊಳಿಸಲಾಗುವುದು. ಮತ್ತೊಂದು ಭಾಗದಲ್ಲಿ ಕಾಮಗಾರಿ ನಡೆಯಲಿದೆ. ಕಾಮಗಾರಿ ನಡೆಯುವ ಭಾಗದಲ್ಲೆಲ್ಲ ಮುಂಜಾಗ್ರತಾ ಕ್ರಮವಾಗಿ ನೆಟ್‌ ಮತ್ತು ಬ್ಯಾರಿಕೇಡ್‌ ಅಳವಡಿಸುವಂಥ ಸುರಕ್ಷಾ ಕ್ರಮಗಳನ್ನು ಕೈಗೊಂಡು, ಸಾರ್ವಜನಿಕರ ಸಂಚಾರಕ್ಕೆ ನಿಷೇಧಿಸಲಾಗುವುದು. ಪೊಲೀಸ್‌ ಇಲಾಖೆ ಜೊತೆ ಇತರ ಇಲಾಖೆಗಳು ಸಹ ಒಪ್ಪಿಗೆ ನೀಡಿದ್ದು, ಎಲ್ಲರ ಒಮ್ಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದರು.

ಕಾಮಗಾರಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ‘ಬಂದ್‌ ಮಾಡಿರುವ ರಸ್ತೆಯನ್ನು ಭಾಗಶಃ ಆರಂಭಿಸಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ಕುರಿತು ಪೊಲೀಸ್‌ ಮತ್ತು ಲೋಕೋಪಯೋಗಿ ಇಲಾಖೆ ಜೊತೆ ಚರ್ಚಿಸಲಾಗಿದೆ. ಸೆಪ್ಟೆಂಬರ್‌ ಅಂತ್ಯದೊಳಗೆ ಬಂದ್‌ ಮಾಡಿರುವ ಎಲ್ಲ ರಸ್ತೆಯನ್ನು ಮುಕ್ತಗೊಳಿಸಲಾಗುವುದು’ ಎಂದರು.

ಪೊಲೀಸ್‌ ಕಮಿಷನರ್‌ ಎನ್‌.‌ಶಶಿಕುಮಾರ್‌, ರಾಷ್ಟ್ರೀಯ ಹೆದ್ದಾರಿ ಪಿಡಬ್ಲ್ಯೂಡಿ ಎಇ ಪ್ರದೀಪ, ಡಿಸಿಪಿ ಸಿ.ಆರ್‌.ರವೀಶ್‌, ಎಸಿಪಿಗಳಾದ ಶಿವಪ್ರಕಾಶ ನಾಯ್ಕ, ವೀರೇಶ, ತಹಶೀಲ್ದಾರ್‌ ಮಹೇಶ ಗಸ್ತಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ನಾಲ್ಕು ತಿಂಗಳು ನಗರದ ಜನತೆ ಹಾಗೂ ವ್ಯಾಪಾರಸ್ಥರು ಸಹಕರಿಸಿದ್ದು ಅಭಿನಂದನಾರ್ಹ. ಎರಡನೇ ಹಂತದ ಕಾಮಗಾರಿ ಶೀಘ್ರ ಆರಂಭವಾಗಲಿದ್ದು ಅದೇ ಸಹಕಾರ ಕೋರುತ್ತೇವೆ
ದಿವ್ಯಪ್ರಭು ಜಿಲ್ಲಾಧಿಕಾರಿ
ಭಾಗಶಃ ಮುಕ್ತವಾಗುವ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕಷ್ಟೇ ಅನುಮತಿ ನೀಡಲಾಗುವುದು. ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಗೆ ಅವಕಾಶವಿಲ್ಲ
ಮಹೇಶ ಟೆಂಗಿನಕಾಯಿ ಶಾಸಕ
ಸಿದ್ದಪ್ಪ ಕಂಬಳಿ ಮಾರ್ಗದಲ್ಲಿನ ಮೇಲ್ಸೇತುವೆಗೆ 93 ಗರ್ಡರ್‌ ಬೇಕಾಗುತ್ತದೆ. ಯೋಜನೆಯ ವಿಸ್ತ್ರತ ವರದಿ ನೀಡಲು ಹೇಳಿದ್ದು ಈಗಿನಿಂದಲೇ ಗರ್ಡರ್‌ ನಿರ್ಮಾಣ ಮಾಡಲು ಸೂಚಿಸಿದ್ದೇನೆ
ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ಕಾರ್ಮಿಕರ ಕೊರತೆ ವಿಳಂಬ: ಡಿ.ಸಿ

‘ಗಡುವಿನ ಒಳಗೆ ಕಾಮಗಾರಿ ಮುಕ್ತಾಯವಾಗದ ಕಾರಣ ಗುತ್ತಿಗೆ ಕಂಪನಿಗೆ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಕಾರ್ಮಿಕರ ಕೊರತೆ ಹಾಗೂ ಮಳೆಯಿಂದಾಗಿ ವಿಳಂಬವಾಗಿದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು. ‘ಚನ್ನಮ್ಮ ವೃತ್ತದಿಂದ ಬಸವವನದವರೆಗಿನ ಕಾಮಗಾರಿ ಸೆ. 20ರ ಒಳಗೆ ಹಾಗೂ ಚನ್ನಮ್ಮ ವೃತ್ತದಿಂದ ಕೋರ್ಟ್‌ ವೃತ್ತದವರೆಗಿನ ಕಾಮಗಾರಿ ಸೆ.30ರ ಒಳಗೆ ಪೂರ್ಣಗೊಳ್ಳಲಿದೆ. ಅಕ್ಟೋಬರ್‌ ತಿಂಗಳಲ್ಲಿ ಸಿದ್ದಪ್ಪ ಕಂಬಳಿ ಮಾರ್ಗದ ಎರಡನೇ ಹಂತದ ಕಾಮಗಾರಿ ಆರಂಭಿಸಲಾಗುವುದು. 2026ರ ಮಾರ್ಚ್‌ ಒಳಗೆ ಮೇಲ್ಸೇತುವೆಯ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂದು ಗುತ್ತಿಗೆ ಪಡೆದ ಕಂಪನಿ ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.