ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಗೆ ಸಿದ್ದಪ್ಪ ಕಂಬಳಿ ರಸ್ತೆಯ ಪಕ್ಕದಲ್ಲಿರುವ ಉಪನಗರ ಪೊಲೀಸ್ ಠಾಣೆ ಕಟ್ಟಡ ಭಾಗಶಃ ತೆರವು ಆಗಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ಕಚೇರಿಗಳನ್ನು ಜುಲೈ 31ರ ಒಳಗೆ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪೊಲೀಸ್ ಇಲಾಖೆಗೆ ಲೋಕೋಪಯೋಗಿ ಇಲಾಖೆ ಸೂಚಿಸಿದೆ.
ಮೂರು ಮಹಡಿ ಕಟ್ಟಡ ಇದಾಗಿದ್ದು, ಉಪನಗರ ಠಾಣೆ, ಮಹಿಳಾ ಪೊಲೀಸ್ ಠಾಣೆ, ಕಮಿಷನರ್, ಡಿಸಿಪಿ (ಕಾನೂನು) ಮತ್ತು ಎಸಿಪಿ ಕಚೇರಿ, ಸಂಚಾರ ನಿಯಂತ್ರಣ ಕೊಠಡಿ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಟ್ಟಡದ ಶೇ 30ರಷ್ಟು ಭಾಗ ತೆರವು ಆಗುವುದರಿಂದ, ತೆರವು ಕಾರ್ಯಾಚರಣೆ ವೇಳೆ ಸುರಕ್ಷತೆ ದೃಷ್ಟಿಯಿಂದ ಸಿಬ್ಬಂದಿ ಅಲ್ಲಿ ಕಾರ್ಯನಿರ್ವಹಿಸುವುದು ಅಪಾಯವೆಂದು, ಸ್ಥಳಾಂತರಕ್ಕೆ ಸೂಚಿಸಿದೆ. ಠಾಣೆಗಳಿಗೆ ಸ್ಥಳದ ಹುಡುಕಾಟ ನಡೆದಿದೆ. ಆದರೆ, ನಿಯಂತ್ರಣ ಕೊಠಡಿ ಎಲ್ಲಿಗೆ ಸ್ಥಳಾಂತರಿಸುವುದು ಎನ್ನುವ ಸವಾಲು ಇಲಾಖೆಗೆ ಎದುರಾಗಿದೆ.
ಉಪನಗರ ಠಾಣೆ ಸ್ಥಳಾಂತರಕ್ಕೆ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಜಾಗ ಹುಡುಕಾಟ ನಡೆದಿದೆ. ಚನ್ನಮ್ಮ ವೃತ್ತ ಮತ್ತು ಈದ್ಗಾ ಮೈದಾನದ ಸುತ್ತಮುತ್ತ ಮೊದಲು ಆದ್ಯತೆ ನೀಡಿದ್ದು, ಸರ್ಕಾರಿ ಅಥವಾ ಖಾಸಗಿ ಕಟ್ಟಡಗಳ ಪರಿಶೀಲನೆ ನಡೆದಿದೆ. ನ್ಯೂ ಕಾಟನ್ ಮಾರ್ಕೆಟ್, ಪ್ರವಾಸಿ ಮಂದಿರ ಅಥವಾ ಪಾಲಿಕೆ ಸುತ್ತಮುತ್ತಲೂ ಯಾವುದಾದರೂ ಸೂಕ್ತ ಕಟ್ಟಡವಿದೆಯೇ ಎಂದು ಹುಡುಕುತ್ತಿದ್ದೇವೆ. ಕಾರವಾರ ರಸ್ತೆಯ ಸಿಎಆರ್ ಮೈದಾನ ಠಾಣಾ ವ್ಯಾಪ್ತಿಯ ಕೊನೆಯಲ್ಲಿ ಇರುವುದರಿಂದ, ಅಲ್ಲಿ ಜಾಗವಿದ್ದರೂ ಸ್ಥಳಾಂತರ ಅಸಾಧ್ಯ. ಮಹಾನಗರ ಪಾಲಿಕೆ ಆವರಣದಲ್ಲಿಯೂ ಕಟ್ಟಡ ಖಾಲಿಯಿದೆಯೇ ಎಂದು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಕೆಲ ದಿನಗಳ ಹಿಂದೆ ಈಗಿರುವ ಉತ್ತರ ಸಂಚಾರ ಠಾಣೆಯ ಕಟ್ಟಡಕ್ಕೆ, ಉಪನಗರ ಠಾಣೆ ಸ್ಥಳಾಂತರ ಮಾಡುವ ಕುರಿತು ಚರ್ಚೆ ನಡೆದಿತ್ತು. ಉತ್ತರ ಸಂಚಾರ ಠಾಣೆಯನ್ನು ಎಲ್ಲಿಗೆ ಸ್ಥಳಾಂತರಿಸಬೇಕೆನ್ನುವ ವಿಷಯ ಬಂದಾಗ, ವಿಷಯ ಕೈ ಬಿಡಲಾಗಿದೆ. ಉಪನಗರ ಠಾಣೆಗೆ ಸೂಕ್ತ ಜಾಗ ಸಿಗದಿದ್ದರೆ ಸಂಚಾರ ಠಾಣೆಗೆ ಸ್ಥಳಾಂತರವಾಗುವ ಸಾಧ್ಯತೆಯೂ ಇದೆ. ಆಗ, ಸಂಚಾರ ಠಾಣೆಗೆ ಬೇರೆ ಜಾಗ ಹುಡುಕಬೇಕಾಗಬಹುದು’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.
ಮೇಲ್ಸೇತುವೆ ಕಾಮಗಾರಿಗೆ ಉಪನಗರ ಪೊಲೀಸ್ ಠಾಣೆಯ 3.6 ಮೀಟರ್ ಕಟ್ಟಡ ತೆರವು ಆಗುವುದರಿಂದ ಜುಲೈ 31ರ ಒಳಗೆ ಸ್ಥಳಾಂತರವಾಗುವಂತೆ ಲೋಕೋಪಯೋಗಿ ಇಲಾಖೆ ಸೂಚನೆ ನೀಡಿದೆದಿವ್ಯಪ್ರಭು ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.