ADVERTISEMENT

ಮರ್ಯಾದೆಗೇಡು ಹತ್ಯೆ ಪ್ರಕರಣ: ಡಿಸಿಆರ್‌ಇ ಠಾಣೆಗೆ ಪ್ರಕರಣ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 4:41 IST
Last Updated 27 ಡಿಸೆಂಬರ್ 2025, 4:41 IST
<div class="paragraphs"><p>ಮರ್ಯಾದೆಗೇಡು ಹತ್ಯೆ&nbsp; </p></div>

ಮರ್ಯಾದೆಗೇಡು ಹತ್ಯೆ 

   

ಕಲೆ: ಸಂತೋಷ್ ಸಸಿಹಿತ್ಲು

ಹುಬ್ಬಳ್ಳಿ: ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಳಗಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಾಗರಾಜ ಗಿರಿಯಪ್ಪನವರ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ ತಿಳಿಸಿದ್ದಾರೆ.

ADVERTISEMENT

ಅಮಾನತು ಆದೇಶ ಪ್ರತಿಯಲ್ಲಿ ಏನಿದೆ: ಬೆಳಗಲಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾಜಿಕ ಸ್ಥಾಯಿ ಸಮಿತಿ ಸದಸ್ಯರ ಸಭೆ ನಡೆಸಿ, ಠರಾವು ಪಾಸು ಮಾಡದೆ ನಿರ್ಲಕ್ಷ್ಯವಹಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮತ್ತು ರಾಜಕೀಯ ಧುರೀಣರಿಂದ ಆರೋಪಗಳು ವ್ಯಕ್ತವಾಗುತ್ತಿವೆ. ಕೃತ್ಯ ನಡೆದ ಸಂದರ್ಭ ಪೊಲೀಸರು ಬಂದೋಬಸ್ತ್‌ಗೆ ಗ್ರಾಮಕ್ಕೆ ಬಂದಾಗ ಪಂಚಾಯಿತಿ ಸಿಬ್ಬಂದಿ ಸಹಾಯ ನೀಡಲು ಮೇಲಧಿಕಾರಿಗಳ ಅನುಮತಿ ಮೇರೆಗೆ ತಿಳಿಸುವುದಾಗಿ ಹೇಳಿದ್ದರು.

ಮರ್ಯಾದೆಗೇಡು ಹತ್ಯೆಯಾದ ಗರ್ಭಿಣಿಯ ಶವ ಅಂತ್ಯಕ್ರಿಯೆ ಸಂದರ್ಭದಲ್ಲಿ ಶಿಷ್ಟಾಚಾರ ಉಲ್ಲಂಘನೆ ಹಾಗೂ ಕರ್ತವ್ಯದಲ್ಲಿ ಪಿಡಿಒ ಬೇಜವಾಬ್ದಾರಿತನ ತೋರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ.

ಶಾಸಕ ಕೋನರಡ್ಡಿ ಭೇಟಿ: ನಗರದ ವಿವೇಕಾನಂದ ಆಸ್ಪತ್ರೆಯಲ್ಲಿ ದಾಖಲಾಗಿರುವ ಇನಾಂ ವೀರಾಪುರ ಗ್ರಾಮದ ಗಾಯಾಳುಗಳನ್ನು ಭೇಟಿಯಾದ ಶಾಸಕ ಎನ್‌.ಎಚ್. ಕೋನರಡ್ಡಿ, ‘ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ಗ್ರಾಮದಲ್ಲಿ ರಕ್ಷಣೆ ಹಾಗೂ ಸೌಲಭ್ಯಗಳನ್ನು ಒದಗಿಸಲು ಮುಖ್ಯಮಂತ್ರಿಯವರ ಜೊತೆ ಮಾತನಾಡುವೆ’ ಎಂದರು.

ಆರೋಗ್ಯದಲ್ಲಿ ಚೇತರಿಕೆ: ತೀವ್ರ ಗಾಯಗೊಂಡಿದ್ದ ರೇಣುಕವ್ವ(ಮಾನ್ಯಾ ಅತ್ತೆ) ಅವರ ಆರೋಗ್ಯ ಸುಧಾರಿಸುತ್ತಿದ್ದು, ಶೀಘ್ರ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದು ವಿವೇಕಾನಂದ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಪಿಡಿಒ ಅಮಾನತು ಆಗಿದ್ದು ಆರಂಭಿಕ ನ್ಯಾಯ. ಆರೋಪಿಗಳನ್ನು ಶೀಘ್ರ ಬಂಧಿಸಬೇಕು, ಕುಟುಂಬಕ್ಕೆ ರಕ್ಷಣೆ ಮತ್ತು ಸೂಕ್ತ ಪರಿಹಾರ ನೀಡಬೇಕು
ಶ್ರೀಧರ ಕಂದಗಲ್‌,ಮುಖಂಡ, ದಲಿತ ವಿಮೋಚನಾ ಸಮಿತಿ

ಡಿಎಸ್‌ಪಿ ದರ್ಜೆ ಅಧಿಕಾರಿ ನೇಮಕಕ್ಕೆ ವಿನಂತಿ

‘ಇನಾಂ ವೀರಾಪುರದಲ್ಲಿ ನಡೆದ ಕೊಲೆ ಪ್ರಕರಣ ಗ್ರಾಮೀಣ ಪೊಲೀಸ್‌ ಠಾಣೆಯಿಂದ ಡಿಸಿಆರ್‌ಇ ಠಾಣೆಗೆ ವರ್ಗವಾಗಿದ್ದು, ಶೀಘ್ರ ತನಿಖೆಗೆ ಡಿಎಸ್‌ಪಿ, ಎಸಿಪಿ ದರ್ಜೆಯ ಅಧಿಕಾರಿಯನ್ನು ನೇಮಕ ಮಾಡಬೇಕು’ ಎಂದು ಸಮತಾ ಸೇನೆಯ ಗುರುನಾಥ ಉಳ್ಳಿಕಾಶಿ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷ ಎಲ್‌. ಮೂರ್ತಿ ಅವರನ್ನು ಕೋರಿದ್ದಾರೆ.

‘ಆರೋಪಿಗಳ ರಕ್ಷಣೆ ಆಗದಂತೆ ಕ್ರಮ ವಹಿಸಲು ಮೇಲ್ಮಟ್ಟದ ಅಧಿಕಾರಿಗಳನ್ನು ನೇಮಿಸಬೇಕು. ಕೊಲೆ ಪ್ರಕರಣದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆ. ಡಿಸಿಆರ್‌ಇ ಠಾಣೆ ಆರಂಭಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಅಲ್ಲಿ ಮೂಲಸೌಲಭ್ಯ ಸೇರಿ ಇತರೆ ಸಿಬ್ಬಂದಿ ನೇಮಕಕ್ಕೆ ಮುಂದಾಗಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಆರೋಪಿಗಳ ಪತ್ತೆಗೆ ಶೋಧ

ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಠಾಣೆ(ಡಿಸಿಆರ್‌ಇ)ಗೆ ವರ್ಗಾಯಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಗ್ರಾಮೀಣ ಠಾಣೆ ಪೊಲೀಸರು ಈವರೆಗೆ ಪ್ರಮುಖ ಆರೋಪಿ ಸೇರಿ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ಮೊಬೈಲ್‌ ನಂಬರ್‌ ಜಾಡು ಹಿಡಿದಿದ್ದಾರೆ. ‘ತನಿಖೆ ಮುಂದುವರಿದಿದ್ದು, ಅಗತ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.