ಹುಬ್ಬಳ್ಳಿ: ‘ನಗರದ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿನ ಸಮಸ್ಯೆಗಳನ್ನು ಪರಿಹರಿಸಿ, ಅಗತ್ಯ ಸೌಕರ್ಯ ಕಲ್ಪಿಸಲು ಬದ್ಧ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಭರವಸೆ ನೀಡಿದರು.
ನಗರದ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಭಾಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ₹37 ಕೋಟಿ ವೆಚ್ಚದಲ್ಲಿ ಹೆಸ್ಕಾಂ ವತಿಯಿಂದ ಯೋಜನೆ ರೂಪಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಎರಡು–ಮೂರು ತಿಂಗಳಲ್ಲಿ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು’ ಎಂದು ಹೇಳಿದರು.
‘ಪ್ರತಿದಿನ ಇಲ್ಲಿನ ಕಸ ವಿಲೇವಾರಿ ಮಾಡಲು ಪಾಲಿಕೆಯಿಂದ ಆಟೊ ಟಿಪ್ಪರ್ ನೀಡಲಾಗಿದೆ. ತೆರಿಗೆ ಪಾವತಿಯಲ್ಲಿನ ಸಮಸ್ಯೆ ನಿವಾರಣೆಗೆ ಪಾಲಿಕೆ ಆಯುಕ್ತರೊಂದಿಗೆ ಮಾತನಾಡುತ್ತೇನೆ. ಸ್ಮಾರ್ಟ್‌ಸಿಟಿ ಯೋಜನೆಯ ₹18 ಕೋಟಿ ಅನುದಾನದಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಅಗತ್ಯ ಇರುವೆಡೆ ಪೇವರ್ಸ್ ಅಳವಡಿಸಲಾಗುತ್ತದೆ’ ಎಂದರು.
‘ನೀರಿನ ಸಮಸ್ಯೆ ಪರಿಹರಿಸಲು ಎಲ್ ಆ್ಯಂಡ್ ಟಿ ಮತ್ತು ಕೆಯುಐಡಿಎಫ್‌ಸಿ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಬೀದಿ ದೀಪಗಳ ನಿರ್ವಹಣೆಗೂ ಕ್ರಮ ವಹಿಸಲಾಗುತ್ತದೆ. ವಿವಿಧ ಸಮಸ್ಯೆಗಳ ಬಗ್ಗೆ ಆಯಾ ಇಲಾಖೆಗಳ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.
ಹು–ಧಾ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ‘ಹಂತ ಹಂತವಾಗಿ ಇಲ್ಲಿನ ತೊಂದರೆಗಳನ್ನು ನಿವಾರಿಸಲಾಗುವುದು’ ಎಂದು ಹೇಳಿದರು.
ಉದ್ದಿಮೆದಾರರಾದ ಅಶೋಕ ಕುನ್ನೂರ್, ವಿಶ್ವನಾಥ ಅಂಗಡಕಿ, ವಿರೂಪಾಕ್ಷಪ್ಪ ತೊಂಪಲ್, ಸಂದೀಪ ಬಿಡಸಾರಿಯಾ, ವಿಜಯ್ ಸೈಗಲ್, ನಾಗೇಶ್ ರಿತ್ತಿ, ಪ್ರಶಾಂತ್ ಆಡೂರ್ಕರ್, ಶ್ರೀಪತಿ ಭಟ್, ಮಹಾಂತೇಶ್ ಬತ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.