ADVERTISEMENT

ಧಾರವಾಡ: ಮೊಬೈಲ್ ಬಳಸದೆ ಓದಿಕೊಳ್ಳುವಂತೆ ಬುದ್ದಿಮಾತು ಹೇಳಿದ್ದಕ್ಕೆ ತಾಯಿಗೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:36 IST
Last Updated 30 ಆಗಸ್ಟ್ 2025, 7:36 IST
   

ಹುಬ್ಬಳ್ಳಿ: ಮೊಬೈಲ್ ಬಳಸದೆ ಓದಿಕೋ ಎಂದು ಬುದ್ಧಿಮಾತು ಹೇಳಿದ್ದಕ್ಕೆ ಯುವಕನೊಬ್ಬ ತಾಯಿಗೆ ಹರಿತವಾದ ವಸ್ತುವಿನಿಂದ ಚುಚ್ಚಿ ಗಾಯಗೊಳಿಸಿರುವ ಘಟನೆ ನಗರದ ಶಿರೂರು ಪಾರ್ಕ್‌ನಲ್ಲಿ ಗುರುವಾರ ನಡೆದಿದೆ.

ರೋಷನ್ ವಡೆಕರ್ (19) ಆರೋಪಿ. ವೈಶಾಲಿ ವಡೇಕರ್ (47) ತೀವ್ರ ಗಾಯಗೊಂಡು, ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಪಿಯುಸಿ, ನೀಟ್ ಪರೀಕ್ಷೆ ಮುಗಿದ ಬಳಿಕ ಮೊಬೈಲ್‌ನಲ್ಲಿ ಗೇಮ್ ಆಡುವುದರಲ್ಲೇ ಹೆಚ್ಚಿನ ಸಮಯ ಕಳೆದು ಸರಿಯಾಗಿ ಊಟ, ತಿಂಡಿ ಮಾಡದ ಮಗ ರೋಷನ್‌ಗೆ, ತಾಯಿ  ವೈಶಾಲಿ ಮೊಬೈಲ್ ಬಳಕೆ ಕಡಿಮೆ ಮಾಡಿ, ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡುವಂತೆ ಬುದ್ಧಿವಾದ ಹೇಳಿದ್ದಾರೆ. ತಾಯಿ ಪದೇ ಪದೇ ಹೀಗೆ ಹೇಳುತ್ತಿದ್ದರಿಂದ ಸಿಟ್ಟಾದ ರೋಷನ್, ವೈಶಾಲಿ ಮಲಗಿದ್ದಾಗ ಹರಿತವಾದ ಆಯುಧದಿಂದ ಮೊಣಕಾಲಿಗೆ ಎರಡ್ಮೂರು ಬಾರಿ ಚುಚ್ಚಿ ತೀವ್ರ ಗಾಯಗೊಳಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬಸ್ ಚಾಲಕನ ಮೇಲೆ ಹಲ್ಲೆ: ಮೊಬೈಲ್‌ನಲ್ಲಿ ಮಾತನಾಡುತ್ತಾ ರಸ್ತೆ ಮೇಲೆ ನಿಂತಿದ್ದ ವ್ಯಕ್ತಿಗೆ ಪಕ್ಕಕ್ಕೆ ಸರಿಯುವಂತೆ ಹಾರ್ನ್ ಹಾಕಿದ್ದಕ್ಕೆ ಸಾರಿಗೆ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಗರದ ಹೊಸೂರಿನ ವಾಣಿವಿಲಾಸ್ ಕ್ರಾಸ್ ಬಳಿ ರಸ್ತೆಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ವ್ಯಕ್ತಿಗೆ ದಾರಿಬಿಡುವಂತೆ ಬಸ್ ಚಾಲಕ ಹಾರ್ನ್ ಹಾಕಿದ್ದಾನೆ. ಇದರಿಂದ ಕೋಪಗೊಂಡ ವ್ಯಕ್ತಿ, ಚಾಲಕನನ್ನು ಬಸ್ಸಿನಿಂದ ಕೆಳಗಿಳಿಸಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.