ADVERTISEMENT

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ: ಉತ್ತಮ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಳ್ಳಿ

ವಿದ್ಯಾರ್ಥಿಗಳಿಗೆ ಉದ್ಯಮಿ ಜಗದೀಶ ಹಿರೇಮಠ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 3:21 IST
Last Updated 10 ಆಗಸ್ಟ್ 2025, 3:21 IST
ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉದ್ಯಮಿ ಜಗದೀಶ ಹಿರೇಮಠ ಮಾತನಾಡಿದರು
ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉದ್ಯಮಿ ಜಗದೀಶ ಹಿರೇಮಠ ಮಾತನಾಡಿದರು   

ಹುಬ್ಬಳ್ಳಿ: ‘ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದೊಂದೇ  ಮುಖ್ಯವಲ್ಲ. ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ, ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಉದ್ಯಮಿ ಜಗದೀಶ ಹಿರೇಮಠ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ಹುಬ್ಬಳ್ಳಿ ಜಂಗಮ ಅಭಿವೃದ್ಧಿ ಸಂಘ, ದೀಕ್ಷಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಾವುದೇ ಕೆಲಸಕ್ಕೆ ಮುಂದಾದಾಗ ಸೋಲು ಎದುರಾಗುವುದು ಸಹಜ. ಸೋಲಿಗೆ ಎದೆಗುಂದದೆ ಸಾಧನೆಯತ್ತ ಮುನ್ನುಗ್ಗಬೇಕು. ಜೀವನದಲ್ಲಿ ಪ್ರಾಮಾಣಿಕತೆ, ಸಮಯಪಾಲನೆ, ವಿಶ್ವಾಸಾರ್ಹತೆ, ಸತತ ಪರಿಶ್ರಮ, ಶ್ರದ್ಧೆ ಮುಖ್ಯ. ಇವುಗಳಿದ್ದರೆ ಯಶಸ್ಸು, ಹಣ ತಾನಾಗಿಯೇ ಹುಡುಕಿಕೊಂಡು ಬರುತ್ತದೆ’ ಎಂದು ತಿಳಿಸಿದರು.

ADVERTISEMENT

‘ದೇಶದಲ್ಲಿ ಕುಟುಂಬ ವ್ಯವಸ್ಥೆ ಕ್ರಮೇಣ ಹಾಳಾಗುತ್ತಿದೆ. ಸಂಸ್ಕೃತಿ, ಸಂಪ್ರದಾಯ ಉಳಿಸಿಕೊಂಡು ಹೋಗುವುದು ಇಂದಿನ ಅನಿವಾರ್ಯತೆ ಆಗಿದ್ದು, ಈ ದಿಕ್ಕಿನಲ್ಲಿ ಯುವಜನತೆ ಕಾರ್ಯಪ್ರವೃತ್ತರಾಗಬೇಕಿದೆ’ ಎಂದು ಹೇಳಿದರು.

ಪ್ರೊ. ಜಿ.ಎಂ. ಹಿರೇಮಠ ಮಾತನಾಡಿ, ‘ಪೋಷಕರು ತಮ್ಮ ಆಸಕ್ತಿಗಳನ್ನು ಮಕ್ಕಳ ಮೇಲೆ ಹೇರಬೇಡಿ. ಮಕ್ಕಳ ಅಭಿರುಚಿ, ಆಸಕ್ತಿ, ಪರಿಣತಿ ಗುರುತಿಸಿ ಆ ಕ್ಷೇತ್ರದಲ್ಲಿ ಅವರು ಸಾಧನೆ ಮಾಡಲು ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

ಸೂಡಿಯ ಜುಕ್ತಿ ಹಿರೇಮಠದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಂಗಮ ಅಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಜಗದೀಶ ಕೂಡಲಮಠ, ದೀಕ್ಷಾ ಚಾರಿಟೇಬಲ್ ಫೌಂಡೇಷನ್ ಗೌರವಾಧ್ಯಕ್ಷ ಎನ್‌.ಎ. ಚರಂತಿಮಠ, ಮಹಾಂತೇಶ ಗಿರಿಮಠ, ಬಸವರಾಜ ಕಲ್ಯಾಣಮಠ, ಉದಯಕುಮಾರ ಇದ್ದರು.

ಸಮಾಜದಲ್ಲಿ ಜಂಗಮರು ವಿಶಿಷ್ಟ ಸ್ಥಾನಮಾನ ಗಳಿಸಿದ್ದಾರೆ. ಈ ಸಮಾಜದ ಅನೇಕರು ಉನ್ನತ ಸ್ಥಾನದಲ್ಲಿದ್ದಾರೆ. ಮಕ್ಕಳು ಇವರನ್ನು ಸ್ಫೂರ್ತಿಯಾಗಿಸಿಕೊಳ್ಳಬೇಕು.
– ಆರ್.ಎಂ. ಹಿರೇಮಠ, ಜಂಗಮ ಅಭಿವೃದ್ದಿ ಸಂಘದ ಗೌರವಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.