ಹುಬ್ಬಳ್ಳಿ: ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ 79ನೇ ವಾರ್ಡ್ ಚಿಕ್ಕದು. ಆದರೆ, ಹಂತಹಂತವಾಗಿ ಅಭಿವೃದ್ಧಿ ಆಗುತ್ತಿದ್ದು, ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ.
ಪುಣೆ–ಬೆಂಗಳೂರು ರಾಷ್ಟ್ರಿಯ ಹೆದ್ದಾರಿಯಿಂದ ಸ್ವಲ್ಪ ದೂರದಲ್ಲಿರುವ ಎಸ್.ಎಂ. ಕೃಷ್ಣನಗರ, ಈಶ್ವರನಗರ ಹಾಗೂ ಅಲ್ತಾಫ್ ಪ್ಲಾಟ್‌ಗಳ ಅರ್ಧದಷ್ಟು ಭಾಗವನ್ನು ಈ ವಾರ್ಡ್ ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಇಲ್ಲಿ ಮಸೀದಿ ಮತ್ತು ದೇವಾಲಯಗಳಿದ್ದು, ಸೌಹಾರ್ದ ವಾತಾವರಣವಿದೆ.
ವಾರ್ಡ್‌ನಲ್ಲಿರುವ ಮಸೀದಿಗಳು ಹಾಗೂ ಹುಲಿಗೆಮ್ಮ ದೇವಸ್ಥಾನ, ಬನ್ನಿ ಗಿಡದ ದೇಗುಲಗಳ ಸುತ್ತ ಪೇವರ್ಸ್ ಅಳವಡಿಸಿ, ಭಕ್ತರಿಗೆ ಅನುಕೂಲ ಕಲ್ಪಿಸಲಾಗಿದೆ. ಇಲ್ಲಿ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೆಲವರು ವಿವಿಧ ವ್ಯಾಪಾರದಲ್ಲಿ ತೊಡಗಿದ್ದಾರೆ.
ಈ ಮೊದಲು 65ನೇ ವಾರ್ಡ್‌ಗೆ ಸೇರಿದ್ದ ಈ ಮೂರೂ ಬಡಾವಣೆಗಳು, ಹೊಸ ವಾರ್ಡ್ ರಚನೆಯಾದಾಗ 79ನೇ ವಾರ್ಡ್‌ಗೆ ಸೇರ್ಪಡೆಯಾಗಿವೆ. ಹೊಸ ವಾರ್ಡ್ ಆಗಿರುವುದರಿಂದ ಹಲವು ಕೊರತೆ ಪರಿಹರಿಸಿಕೊಂಡು, ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕಾದ ಸವಾಲು ಕೂಡ ಇದೆ.
‘ವಾರ್ಡ್‌ನಲ್ಲಿ ಒಟ್ಟು ಆರು ಅಂಗನವಾಡಿ ಕೇಂದ್ರಗಳಿವೆ. ಇನ್ನೂ ನಾಲ್ಕು ಅಂಗನವಾಡಿ ಕೇಂದ್ರಗಳು ನಿರ್ಮಾಣ ಹಂತದಲ್ಲಿವೆ. ಒಂದು ಪ್ರೌಢಶಾಲೆ, ಮೂರು ಪ್ರಾಥಮಿಕ ಶಾಲೆಗಳಿವೆ. ನಮ್ಮ ಕ್ಲಿನಿಕ್ ಮೂಲಕ ಸ್ಥಳೀಯರಿಗೆ ಅಗತ್ಯ ಚಿಕಿತ್ಸೆ ದೊರೆಯುತ್ತಿದೆ. ಬೃಹತ್ ಗಾತ್ರದ ಟ್ಯಾಂಕ್ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂದು 79ನೇ ವಾರ್ಡ್ ಸದಸ್ಯೆ ಫಮೀದಾ ಬಾಬಾಜಾನ್ ಕಾರಡಗಿ ತಿಳಿಸಿದರು.
‘ಬಹುತೇಕ ಕಡೆ ಸಿ.ಸಿ ರಸ್ತೆಗಳಿದ್ದು, ಈಚೆಗೆ ಏಳು ಕಡೆ ಹೊಸ ರಸ್ತೆ ನಿರ್ಮಿಸಲಾಗಿದೆ. ₹6 ಕೋಟಿ ವೆಚ್ಚದಲ್ಲಿ ವಿದ್ಯುತ್ ಕಂಬ, ಒಳಚರಂಡಿ ಕಾಮಗಾರಿ ನಡೆದಿದೆ. ಆಶ್ರಯ ಮನೆಗಳೇ ಹೆಚ್ಚಿನ ಪ್ರಮಾಣದಲ್ಲಿದ್ದು, ಮೊದಲ ಹಂತದಲ್ಲಿ ಹಕ್ಕುಪತ್ರ ವಿತರಿಸಲಾಗಿದೆ. ಎರಡನೇ ಹಂತದ ವಿತರಣೆ ಬಾಕಿ ಇದೆ’ ಎಂದು ಮಾಹಿತಿ ನೀಡಿದರು.
ಹೊಸ ಅಂಗನವಾಡಿ ಕಟ್ಟಡ ಪೊಲೀಸ್ ಹೊರ ಠಾಣೆ ನಿರ್ಮಾಣ ಕಾರ್ಯ ಆರಂಭವಾಗಬೇಕಿದೆ. ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ.ಫಮೀದಾ ಬಾಬಾಜಾನ್ ಕಾರಡಗಿ ಸದಸ್ಯೆ ವಾರ್ಡ್ ಸಂಖ್ಯೆ 79
ವಾರ್ಡ್‌ನಲ್ಲಿ ಇನ್ನಷ್ಟು ಸೌಕರ್ಯ ಕಲ್ಪಿಸಬೇಕಿದ್ದು ಮಹಾನಗರ ಪಾಲಿಕೆಯು ಶೀಘ್ರ ಕ್ರಮವಹಿಸಿದರೆ ಅನುಕೂಲ. ವಾರ್ಡ್ ಅಭಿವೃದ್ಧಿಗೆ ಆದ್ಯತೆ ನೀಡಬೇಕು.ಹುಸೇನ್ ಕೊಪ್ಪದ ಸ್ಥಳೀಯ ನಿವಾಸಿ
‘ಸಿಸಿ ರಸ್ತೆ ದುರಸ್ತಿ ಮಾಡಿ:
‘ವಾರ್ಡ್ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ಸಿಸಿ ರಸ್ತೆಗಳನ್ನು ದುರಸ್ತಿ ಮಾಡಬೇಕು. 24X7 ನೀರು ಪೂರೈಕೆಯಾದರೆ ಎಲ್ಲರಿಗೂ ಅನುಕೂಲ. ಖಾಲಿ ನಿವೇಶನಗಳ ಸ್ವಚ್ಛತೆ ಕಸ ಸಮರ್ಪಕ ವಿಲೇವಾರಿ ನಾಲಾ ಸ್ವಚ್ಛತೆಗೆ ಪಾಲಿಕೆ ಕ್ರಮ ವಹಿಸಬೇಕು’ ಎಂಬುದು ಸ್ಥಳೀಯರ ಆಗ್ರಹ. ‘ವಾರ್ಡ್ ವ್ಯಾಪಿಯಲ್ಲಿ ವಿದ್ಯುತ್ ಕಂಬಗಳಿಗೆ ಎಬಿಸಿ ಕೇಬಲ್ ಅಳವಡಿಸಿದ್ದರಿಂದ ಅನುಕೂಲವಾಗಿದೆ. 42 ಕಡೆಗಳಲ್ಲಿ ಸಿ.ಸಿ ಟಿ.ವಿ. ಕ್ಯಾಮೆರಾ ಅಳವಡಿಸಿದ್ದು ಭದ್ರತೆಯ ವಾತಾವರಣವಿದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.