
ಹುಬ್ಬಳ್ಳಿ: ಇಲ್ಲಿನ ಮರಾಠಗಲ್ಲಿಯ ಸುಖಸಾಗರ್ ಮೆಟ್ರೊ ವಾಣಿಜ್ಯ ಮಳಿಗೆಯಲ್ಲಿ ಗುರುವಾರ ತಡರಾತ್ರಿ ಬೆಂಕಿ ಅವಘಡದ ಸಂಭವಿಸಿದ ಪರಿಣಾಮ, ನಾಲ್ಕು ಅಂತಸ್ತಿನ ಮಳಿಗೆ ಸಂಪೂರ್ಣ ಸುಟ್ಟು ಹೋಗಿದೆ.
ಮಳಿಗೆಯ ಮೇಲ್ಮಹಡಿಯಲ್ಲಿ ರಾತ್ರಿ 12ರ ವೇಳೆ ಶಾರ್ಟ್‌ಸರ್ಕಿಟ್ ಉಂಟಾಗಿ ಕಾಣಿಸಿಕೊಂಡ ಬೆಂಕಿ, ಕೆಲ ಹೊತ್ತಿನಲ್ಲಿಯೇ ಉಳಿದ ಮಹಡಿಗಳಿಗೂ ಆವರಿಸಿತ್ತು. ಅದರ ಕೆನ್ನಾಲಿಗೆ ನಾಲ್ಕು ಅಂತಸ್ತಿನಲ್ಲಿದ್ದ 50ಕ್ಕೂ ಹೆಚ್ಚು ಮಳಿಗೆಗಳಲ್ಲಿನ ಬಟ್ಟೆ, ಆಲಂಕಾರಿಕ ಹಾಗೂ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತ, ಕೆಳ ಮಹಡಿಯಲ್ಲಿ ವಾಸಿಸುತ್ತಿದ್ದ ಅಣ್ಣಿಗೇರಿಯ ಸೋಮಶೇಖರ ಮತ್ತು ವೀರೂಬಾಯಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ ವೇಳೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳೀಯರ ಸಹಕಾರದಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಶುಕ್ರವಾರ ಬೆಳಗಿನ ಜಾವದವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಕಲಘಟಗಿ, ಕುಂದಗೋಳ, ಧಾರವಾಡ, ಅಮರಗೋಳ, ಹುಬ್ಬಳ್ಳಿ ಶಹರದಿಂದ ವಾಟರ್ ಬೂಷರ್, ವಾಟರ್ ಟ್ಯಾಂಕರ್ ಸೇರಿ ಆರು ವಾಹನಗಳ ಮೂಲಕ ಕಾರ್ಯಾಚರಣೆ ನಡೆಸಿ, ಬೆಂಕಿ ಹತೋಟಿಗೆ ತರಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮೇಲ್ಮಹಡಿಯಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಒಮ್ಮೆಲೆ ಹೊತ್ತಿ ಉರಿದಿದೆ. ಕಿಟಕಿಯ ಗಾಜುಗಳು ಪಟಪಟನೆ ಒಡೆದು ಬೀಳುತ್ತಿದ್ದವು. ಅರ್ಧ ಗಂಟೆಯಲ್ಲಿ ಬೆಂಕಿ ಸಂಪೂರ್ಣ ಕಟ್ಟಡವನ್ನೇ ಆವರಿಸಿತ್ತು. ಹಿಂದಿನ ದಾರಿಯಿಂದ ನಾವು ತಪ್ಪಿಸಿಕೊಮಡೆವು ಎಂದು ಭದ್ರತಾ ಸಿಬ್ಬಂದಿ ಸೋಮಶೇಖರ ಹೇಳಿದರು.
‘ಬೆಂಕಿ ಅವಘಡದಿಂದ ಲಕ್ಷಾಂತರ ಮೌಲ್ಯದ ಬಟ್ಟೆಗಳು ಹಾಗೂ ಸಾಮಗ್ರಿಗಳು ಹಾನಿಯಾಗಿವೆ. ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆ ಎನ್ನುವ ಕುರಿತು, ದೂರು ಆಧರಿಸಿ ತನಿಖೆ ನಡೆಸಲಾಗುವುದು’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.