ADVERTISEMENT

ಹುಬ್ಬಳ್ಳಿ: ನಿರಂತರ ಮಳೆಗೆ ನಲುಗಿದ ಜನಜೀವನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:00 IST
Last Updated 26 ಜುಲೈ 2025, 6:00 IST
ಹುಬ್ಬಳ್ಳಿಗೆ ಗ್ರಾಮೀಣ ಭಾಗದಿಂದ ಬಂದಿದ್ದ ಜನರು ಮಳೆಯಲ್ಲಿ ನೆನೆದುಕೊಂಡು ಸಂಚರಿಸುವುದು ಲ್ಯಾಮಿಂಗ್ಟನ್‌ ಶಾಲೆ ಎದುರಿನ ರಸ್ತೆಯಲ್ಲಿ ಶುಕ್ರವಾರ ಕಂಡುಬಂತು 
ಹುಬ್ಬಳ್ಳಿಗೆ ಗ್ರಾಮೀಣ ಭಾಗದಿಂದ ಬಂದಿದ್ದ ಜನರು ಮಳೆಯಲ್ಲಿ ನೆನೆದುಕೊಂಡು ಸಂಚರಿಸುವುದು ಲ್ಯಾಮಿಂಗ್ಟನ್‌ ಶಾಲೆ ಎದುರಿನ ರಸ್ತೆಯಲ್ಲಿ ಶುಕ್ರವಾರ ಕಂಡುಬಂತು    

ಹುಬ್ಬಳ್ಳಿ: ಇದ್ದಕ್ಕಿದ್ದಂತೆ ಸುರಿಯುವ ಮಳೆಯು ಕೆಲಹೊತ್ತು ನಿಲ್ಲುತ್ತದೆ. ಗುಡುಗು, ಸಿಡಿಲಿನ ಅಬ್ಬರವಿಲ್ಲದೆ ಮತ್ತೆ ಮಳೆ ಶುರುವಾಗುತ್ತದೆ. ಕಳೆದ ನಾಲ್ಕು ದಿನಗಳಿಂದ ಈ ರೀತಿ ಮಳೆಯ ಕಣ್ಣುಮುಚ್ಚಾಲೆಗೆ ನಿತ್ಯ ಜನಜೀವನ ನಲುಗಿದೆ.

ಇನ್ನೇನು ಮಳೆ ಬರುವುದಿಲ್ಲ ಎನ್ನುವ ನಿರೀಕ್ಷೆಯಿಂದ ಮನೆಯಿಂದ ಹೊರಬರುವ ಜನರು ಒದ್ದೆಯಾಗಿ ಮತ್ತೆ ಮನೆ ಸೇರಿಕೊಳ್ಳುವ ಪರಿಸ್ಥಿತಿ. ವಿವಿಧ ಕೆಲಸ ಕಾರ್ಯಕ್ಕೆ ಸರ್ಕಾರಿ ಕಚೇರಿಗಳಿಗೆ ಹಾಗೂ ಸಂತೆಗೆ ಹೋಗಬೇಕೆನ್ನುವವರು ಮಳೆ ಉಪಟಳದಿಂದ ಬೇಸತ್ತು ಮನೆಯಲ್ಲೇ ಉಳಿಯುವಂತಾಗಿದೆ. 

ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುವುದು ತಪ್ಪುತ್ತಿಲ್ಲ. ಇನ್ನೇನು ಮಳೆ ಮುಗಿದುಹೋಯಿತು ಎಂದು ಮೈಮರೆಯುವಂತಿಲ್ಲ. ನಿರಂತರ ಮಳೆಯಿಂದಾಗಿ ಹುಬ್ಬಳ್ಳಿ ನಗರದಾದ್ಯಂತ ರಸ್ತೆಗಳಲ್ಲಿ ಕೆಸರು ತುಂಬಿಕೊಂಡಿದೆ. ತಗ್ಗು ಗುಂಡಿಗಳಲ್ಲಿ ಮಳೆನೀರು ಸಂಗ್ರಹವಾಗಿ ವಾಹನ ಹಾಗೂ ಜನಸಂಚರಿಸುವುದು ಸಂಕಷ್ಟಮಯವಾಗಿದೆ.

ADVERTISEMENT

ವಾಹನ ಸಂಚಾರ ದಟ್ಟಣೆ: ನಿರಂತರ ಸುರಿಯುವ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ. ರಾಣಿ ಚನ್ನಮ್ಮ ವೃತ್ತ, ಮಹಾನಗರ ಪಾಲಿಕೆ ಎದುರು, ಸಿಬಿಟಿ ಸುತ್ತಮುತ್ತ, ಹೊಸುರ ಕ್ರಾಸ್‌, ವಿದ್ಯಾನಗರ ರಸ್ತೆ, ಇಂಡಿಪಂಪ್‌, ಬನ್ನಿಗಿಡ, ರೈಲ್ವೆ ನಿಲ್ದಾಣದ ಎದುರು ಸೇರಿದಂತೆ ವಿವಿಧೆಡೆ ಮಳೆಯಿಂದಾಗಿ ಸಂಚಾರ ದಟ್ಟಣೆ ಸಮಸ್ಯೆ ನಿರ್ಮಾಣವಾಗಿತ್ತು.

ಮಳೆಯನ್ನು ಲೆಕ್ಕಸದೆ ಛತ್ರಿ, ಜರ್ಕಿನ್‌, ರೇನ್‌ಕೋಟ್‌ ಹಾಕಿಕೊಂಡು ಜನರು ಸಂಚರಿಸುವುದು ಸಾಮಾನ್ಯ ನೋಟವಾಗಿದೆ. ವಿವಿಧ ಕೆಲಸಕ್ಕಾಗಿ ಗ್ರಾಮೀಣ ಭಾಗದಿಂದ ಬರುವ ಜನರು ಮಳೆಯಲ್ಲೇ ನೆನೆದುಕೊಂಡು ಓಡಾಡುವುದು ಕಂಡುಬಂತು. ಎಲ್ಲಿ ನೋಡಿದರೂ ಮಳೆನೀರು ಕಾಣಿಸುತ್ತಿದೆ.

ವ್ಯಾಪಾರಕ್ಕೆ ಹೊಡೆತ: ಶ್ರಾವಣದ ಮೊದಲ ಶುಕ್ರವಾರ ಮನೆಗಳಲ್ಲಿ ಲಕ್ಷ್ಮೀ ಪೂಜೆ ನಡೆಯುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಕಾಯಿ ಮಾರಾಟ ಪ್ರತಿವರ್ಷ ಜೋರಾಗಿ ನಡೆಯುತ್ತಿತ್ತು. ಮಳೆ ಕಾರಣದಿಂದ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ.

ಮುಖ್ಯವಾಗಿ ಪೂಜಾ ಸಾಮಗ್ರಿಗಳ ಖರೀದಿಗಾಗಿ ಗ್ರಾಮೀಣ ಭಾಗದಿಂದ ಜನರು ಬರುವುದಕ್ಕೆ ಈ ಸಲ ಮಳೆ ಅಡ್ಡಿಪಡಿಸಿತು. ಜನತಾ ಮಾರ್ಕೆಟ್‌ ಹಾಗೂ ವಿವಿಧ ಬಡಾವಣೆಗಳಲ್ಲಿ ಬೆರಳೆಣಿಕೆ ವ್ಯಾಪಾರಿಗಳು ಮಾತ್ರ ಛತ್ರಿ ಆಸರೆಯಲ್ಲಿ ಹೂವು, ಹಣ್ಣು ಮಾರಾಟದಲ್ಲಿ ತೊಡಗಿರುವುದು ಕಂಡುಬಂತು.

ಹುಬ್ಬಳ್ಳಿಯ ಮಹಾನಗರ ಪಾಲಿಕೆ ಕಚೇರಿ ಎದುರು ಮಹಿಳೆಯರು ಶುಕ್ರವಾರ ಸುರಿಯುತ್ತಿದ್ದ ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದು ರಸ್ತೆ ದಾಟುವುದು ಗಮನ ಸೆಳೆಯಿತು ಪ್ರಜಾವಾಣಿ ಚಿತ್ರ/ ಗುರು ಹಬೀಬ
ಕೃಷಿ ಕಾರ್ಯಕ್ಕೆ ಅಡ್ಡಿ‌
ತುಂತುರು ಸುರಿಯುತ್ತಿರುವ ಮಳೆಯಿಂದಾಗಿ ರೈತರು ಕೃಷಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ‘ಮೋಡ ಕವಿದ ವಾತಾವರಣ ತುಂತುರು ಮಳೆ ಹಾಗೂ ಬಿಸಿಲಿನ ಅಭಾವದಿಂದ ಹೆಸರು ಸೋಯಾಬಿನ್‌ ಹತ್ತಿ ಬೆಳೆಗಳಲ್ಲಿ ಕೀಟಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಗೋವಿನಜೋಳ ಕಬ್ಬು ಇಂತಹ ಬೆಳೆಗಳಿಗೆ ಮಳೆಯಿಂದ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹವಾಮಾನ ತಜ್ಞ ರವಿ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.