
ಹುಬ್ಬಳ್ಳಿ: ಒಂದೇ ರೀತಿಯ ಕೃಷಿ ಪದ್ಧತಿಯನ್ನು ನೆಚ್ಚಿಕೊಂಡರೇ ನಷ್ಟ ಸಾಧ್ಯತೆ ಹೆಚ್ಚು ಎನ್ನುವುದನ್ನು ಅರಿತ ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲ್ಲೂಕಿನ ಸಾಸ್ವಿಹಳ್ಳಿ ಗ್ರಾಮದ ರೈತ ಮಹಿಳೆ ಶಿವಲೀಲಾ ಶಿವಬಸಯ್ಯ ಹಿತ್ತಲಮನಿ ಅವರು ಸಮಗ್ರ ಕೃಷಿಯ ಮೂಲಕ ನೆಮ್ಮದಿ ಹಾಗೂ ಉತ್ತಮ ಆದಾಯ ಕಂಡುಕೊಂಡಿದ್ದಾರೆ.
43 ವರ್ಷದ ಇವರು ಓದಿದ್ದು 9ನೇ ತರಗತಿ. ತಮ್ಮ 7 ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿ, ಅರಣ್ಯ ಕೃಷಿ ಅಲ್ಲದೇ ಒಣ ಬೇಸಾಯವನ್ನೂ ಮಾಡುತ್ತ ಬಂದಿದ್ದಾರೆ.
‘ಸತತ ಐದು ವರ್ಷಗಳಿಂದ ಬಿಳಿ ರೇಷ್ಮೆಗೂಡುಗಳನ್ನು ಬೆಳೆಯುತ್ತಿದ್ದೇವೆ. ಇದಕ್ಕಾಗಿ 60 ಅಡಿ ಉದ್ದ ಮತ್ತು 25 ಅಡಿ ಅಗಲದ ಆಧುನಿಕ ಶೆಡ್ ನಿರ್ಮಿಸಿಕೊಂಡಿದ್ದು, ₹3.37 ಲಕ್ಷ ಸಹಾಯಧನವನ್ನೂ ಪಡೆದಿದ್ದೇವೆ. ರಾಯಾಪುರದಲ್ಲಿರುವ ರೇಷ್ಮೆ ತರಬೇತಿ ಸಂಸ್ಥೆಯಲ್ಲಿ ಹಿಪ್ಪುನೇರಳೆ ಬೇಸಾಯ ಮತ್ತು ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆ ತರಬೇತಿಯನ್ನೂ ಪಡೆದಿದ್ದೇನೆ’ ಎಂದು ಶಿವಲೀಲಾ ಶಿವಬಸಯ್ಯ ಹಿತ್ತಲಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶಿರಹಟ್ಟಿ, ರಾಮದುರ್ಗ, ಗಜೇಂದ್ರಗಡ ಭಾಗಗಳಿಂದ ರೇಷ್ಮೆ ಹುಳುಗಳನ್ನು ತರುತ್ತೇವೆ. ಹುಳುಗಳನ್ನು ಲಿಂಕ್ಸ್‌ನಂತೆ ಖರೀದಿ ಮಾಡಬೇಕಾಗುತ್ತದೆ. 5 ಸಾವಿರ ಹುಳುಗಳಿರುವ 10 ಲಿಂಕ್ಸ್‌ಗೆ ₹420ರಂತೆ, 140 ಲಿಂಕ್ಸ್ ಖರೀದಿ ಮಾಡಿದ್ದೇವೆ. ಹಿಪ್ಪುನೇರಳೆ ಸೊಪ್ಪು ಹುಳುಗಳ ಆಹಾರ. 25 ದಿನಗಳ ಕಾಲ ಸೊಪ್ಪು ತಿಂದು ಚೆನ್ನಾಗಿ ಬೆಳೆದು, ಗೂಡು ಕಟ್ಟುತ್ತವೆ. ಒಂದು ಕೆ.ಜಿ ಗೂಡಿಗೆ ಅಂದಾಜು ₹600 ರಿಂದ ₹800ರ ವರೆಗೂ ಬೆಲೆ ಸಿಗುತ್ತದೆ. ರಾಮನಗರ ಜಿಲ್ಲೆಯ ಮಾರುಕಟ್ಟೆಗೆ ಮಾರಾಟ ಮಾಡುತ್ತೇವೆ’ ಎಂದು ಹೇಳಿದರು.
‘ಹಿಪ್ಪುನೇರಳೆ ಬೆಳೆಯಲು ಸಗಣಿಗೊಬ್ಬರ ಬಳಸುತ್ತೇವೆ. ಚಳಿಗಾಲದಲ್ಲಿ ಸೊಪ್ಪಿನ ಬೆಳವಣಿಗೆಯೂ ಉತ್ತಮವಾಗಿರುತ್ತದೆ. ಹುಳುಗಳು ಹೆಚ್ಚೆಚ್ಚು ಸೊಪ್ಪು ತಿನ್ನುವುದರಿಂದ ಗೂಡು ಸಹ ಗುಣಮಟ್ಟದ್ದಾಗಿ ಬರುತ್ತವೆ. ರೇಷ್ಮೆ ಕೃಷಿಯಿಂದ ವರ್ಷಕ್ಕೆ ಅಂದಾಜು ಐದಾರು ಲಕ್ಷ ರೂಪಾಯಿ ಆದಾಯ ಪಡೆಯಬಹುದು’ ಎಂದು ವಿವರಿಸಿದರು.
‘ಒಣಬೇಸಾಯದ ಜಮೀನಿನಲ್ಲಿ ಜೋಳ, ಗೋಧಿ, ಶೇಂಗಾ ಬೆಳೆದಿದ್ದೇವೆ. 2 ಆಕಳುಗಳಿದ್ದು, ಜಮೀನಿಗೆ ಗೋಕೃಪಾಮೃತ, ಜೀವಾಮೃತ, ತಿಪ್ಪೆಗೊಬ್ಬರ ಬಳಸುತ್ತೇವೆ. ಜೊತೆಗೆ ಅತೀ ಕಡಿಮೆ ರಾಸಾಯನಿಕ ಬಳಸುತ್ತಿದ್ದೇವೆ’ ಎಂದರು.
ಅರಣ್ಯ ಕೃಷಿಗೂ ಒತ್ತು: ಕಳೆದ 2 ವರ್ಷಗಳಂದ ಅರಣ್ಯ ಕೃಷಿ ಮಾಡುತ್ತಿರುವ ಇವರು, ತಮ್ಮ 3 ಎಕರೆ ಜಮೀನಿನಲ್ಲಿ ಹಿಪ್ಪು ನೆರಳೆ ಜೊತೆಗೆ 150 ಮಹಾಗನಿ, 50 ಬೇವು, ತಲಾ 10 ತೆಂಗು, ಸಾಗವಾನಿ, ದಾಳಿಂಬೆ, ಬಾಳೆ ( ಏಲಕ್ಕಿ), 20 ಸೀತಾಫಲ, 5 ಕೆಂಪು ಪೇರಲ ಗಿಡಗಳನ್ನು ಬೆಳೆಸಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಗಂಧ, ರೋಜ್‌ವುಡ್ ಗಿಡಗಳನ್ನು ಬೆಳೆಸುವ ಇಚ್ಛೆ ಹೊಂದಿದ್ದು, ಅರಣ್ಯ ಕೃಷಿಗೆ ಹೆಚ್ಚಿನ ಒತ್ತು ನೀಡಲಿದ್ದಾರೆ.
ಸಹಾಯಧನ: ಕೃಷಿ ಇಲಾಖೆ ಸಹಾಯಧನದ ಅಡಿ 100 ಅಡಿ ಉದ್ದ, 100 ಅಡಿ ಅಗಲ ಮತ್ತು 10 ಅಡಿ ಆಳದ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, 20 ಸ್ಪ್ರಿಂಕ್ಲರ್‌ಗಳನ್ನು ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ.
ಕೃಷಿಯಲ್ಲಿ ಯಶ ಕಾಣಲು ನಿರಂತರ ಶ್ರಮ ಆಸಕ್ತಿ ಹಾಗೂ ಕುಟುಂಬದ ಬೆಂಬಲ ಸಹಕಾರವೂ ಅಗತ್ಯ. ಯುವಜನತೆ ಕೃಷಿಯತ್ತ ಹೆಚ್ಚೆಚ್ಚು ಬಂದಷ್ಟು ಭವಿಷ್ಯದ ದಿನಗಳು ಉಜ್ವಲವಾಗಲಿವೆಶಿವಲೀಲಾ ಶಿವಬಸಯ್ಯ ಹಿತ್ತಲಮನಿ ಕೃಷಿಕ ಮಹಿಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.