ADVERTISEMENT

ಹುಬ್ಬಳ್ಳಿ | ಮಹಾನಗರ: ಟ್ರಾಫಿಕ್ ಸಾಗರ

ಹುಬ್ಬಳ್ಳಿಯಲ್ಲಿ ಸಂಚಾರ ದಟ್ಟಣೆ ಕಿರಿಕಿರಿ: ಸಾರ್ವಜನಿಕರಿಗೆ ಸಹನೆ ಪ‍ರೀಕ್ಷೆ

ಗಣೇಶ ವೈದ್ಯ
Published 19 ಜುಲೈ 2025, 7:44 IST
Last Updated 19 ಜುಲೈ 2025, 7:44 IST
ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದಾಗಿ ವಾಹನ ಸವಾರರು ಪರದಾಡಿದರು
–ಪ್ರಜಾವಾಣಿ ಚಿತ್ರ: ಗೋವಿಂದಾರಾಜ ಜವಳಿ
ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದಾಗಿ ವಾಹನ ಸವಾರರು ಪರದಾಡಿದರು –ಪ್ರಜಾವಾಣಿ ಚಿತ್ರ: ಗೋವಿಂದಾರಾಜ ಜವಳಿ   

ಹುಬ್ಬಳ್ಳಿ: ವೇಗವಾಗಿ ಬೆಳೆಯುತ್ತಿರುವ, ರಾಜ್ಯದ ವಾಣಿಜ್ಯ ರಾಜಧಾನಿ ಎಂದೂ ಕರೆಸಿಕೊಳ್ಳುವ ಹುಬ್ಬಳ್ಳಿ ಮಹಾನಗರದಲ್ಲಿ ವಿವಿಧ ಕಾರಣಗಳಿಗೆ ಸಂಚಾರ ದಟ್ಟಣೆಯೂ ದಿನೇದಿನೆ ಹೆಚ್ಚುತ್ತಲೇ ಇದೆ. ನಗರದ ನಿವಾಸಿಗಳಿಗೆ ಇದು ಸಹನೆ ಪರೀಕ್ಷೆಯಾಗಿ ಮಾರ್ಪಟ್ಟಿದೆ.

ನಗರದಲ್ಲಿ ನಿತ್ಯ ಅಪಾರ ಸಂಖ್ಯೆಯಲ್ಲಿ ಬಸ್‌ಗಳು ಹಾಗೂ ಇತರೆ ವಾಹನಗಳು ಸಂಚರಿಸುತ್ತವೆ. ಹೊರ ಜಿಲ್ಲೆಗಳಿಂದಲೂ ವಾಹನಗಳು ಬರುತ್ತವೆ. ಎಲ್ಲ ಸೇರಿ ಮಹಾನಗರವು ಸಂಚಾರ ಸಾಗರವಾಗಿ ಪರಿಣಮಿಸಿದೆ.

ಕಚೇರಿ, ಶಾಲೆ ಆರಂಭವಾಗುವ ಬೆಳಗಿನ ಹೊತ್ತು ಮತ್ತು ಸಂಜೆ ವೇಳೆ (ಪೀಕ್ ಅವರ್) ಸಂಚಾರ ದಟ್ಟಣೆ ಆಗುವುದು ಸಹಜ. ಆದರೆ, ನಗರದ ಹಲವು ರಸ್ತೆಗಳು ಬೆಳಗಿನಿಂದ ರಾತ್ರಿಯ ವರೆಗೂ ದಟ್ಟಣೆಯಿಂದಲೇ ಕೂಡಿರುತ್ತವೆ.

ADVERTISEMENT

ನಿರಂತರವಾಗಿ ಒಂದಿಲ್ಲೊಂದು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಲೇ ಇವೆ. ಬಹುತೇಕ ಕಾಮಗಾರಿ ನಿಗದಿತ ಸಮಯದೊಳಗೆ ಪೂರ್ಣಗೊಳ್ಳುತ್ತಿಲ್ಲ. ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಟ್ರಾಫಿಕ್ ಸಿಗ್ನಲ್ ದೀಪಗಳು, ಪಾಲನೆ ಆಗದ ಸಂಚಾರ ನಿಯಮ, ಕಿರಿದಾದ ರಸ್ತೆಗಳು– ಹೀಗೆ ಹಲವು ಅಂಶಗಳು ಹೆಚ್ಚಿನ ಸಂಚಾರ ದಟ್ಟಣೆಗೆ ಕಾರಣವಾಗಿವೆ. 

ಮೇಲ್ಸೇತುವೆ ಕಾಮಗಾರಿಗಾಗಿ ವಿವಿಧೆಡೆ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ. ಇದು ಕೂಡ ದಟ್ಟಣೆಗೆ ಪ್ರಮುಖ ಕಾರಣವಾಗಿದೆ.

ಸಂಚಾರ ಅಸಹನೀಯ: ಚನ್ನಮ್ಮ ವೃತ್ತವು ನಗರದ ಕೇಂದ್ರ ಭಾಗವಾಗಿದ್ದು, ಧಾರವಾಡ, ಕಾರವಾರ, ಬೆಂಗಳೂರು, ವಿಜಯಪುರ, ಗದಗ, ಹಳೇ ಹುಬ್ಬಳ್ಳಿ ಹೀಗೆ ವಿವಿಧ ಭಾಗಗಳನ್ನು ಸಂಪರ್ಕಿಸುತ್ತದೆ. ಇಲ್ಲಿಗೆ ಬರುವ ವಾಹನಗಳ ಸಂಖ್ಯೆಯೂ ಹೆಚ್ಚು. ಹೀಗಾಗಿ ಈ ಪ್ರದೇಶ ಅಕ್ಷರಶಃ ‘ಟ್ರಾಫಿಕ್ ಐಲ್ಯಾಂಡ್’ ಆಗಿ ಮಾರ್ಪಟ್ಟಿದೆ.

ಈ ವೃತ್ತವನ್ನು ದಾಟಿ ಅಂದುಕೊಂಡ ಸ್ಥಳಕ್ಕೆ ತಲುಪಲು ಮೊದಲಿಗಿಂತ ಕನಿಷ್ಠ ಮೂರು ಪಟ್ಟು ಹೆಚ್ಚು ಸಮಯ ಹಿಡಿಯುತ್ತಿದೆ. ಜೊತೆಗೆ ವಾಹನಗಳ ಹೊಗೆ, ಹಾರ್ನ್, ಬಿಸಿಲು ಬಂದರೆ ದೂಳು, ಮಳೆ ಆದರೆ ಕೆಸರು– ಇವೆಲ್ಲ ಕಾರಣಕ್ಕೆ ಸಂಚಾರ ಅಸಹನೀಯವಾಗಿದೆ.

‘ಪ್ರಯಾಣಿಕರು ತುರ್ತಾಗಿ ಎಲ್ಲೋ ಹೋಗಬೇಕು ಎಂದು ಆಟೊ ಹತ್ತುತ್ತಾರೆ. ಆದರೆ ಟ್ರಾಫಿಕ್ ಕಾರಣಕ್ಕೆ ಮುಂದೆ ಹೋಗಲೂ ಆಗದ ಸ್ಥಿತಿ ಉಂಟಾಗುತ್ತದೆ. ಆಗ ಅವ‌ರು ಬೇಗ ಹೋಗು ಎಂದು ಒತ್ತಡ ಹಾಕುತ್ತಾರೆ. ಆದರೆ ನಾವು ಅಸಹಾಯಕರು. ನಮ್ಮ ಸಮಸ್ಯೆಗೆ ಮುಕ್ತಿ ಯಾವಾಗ ಸಿಗುತ್ತದೋ ತಿಳಿದಿಲ್ಲ’ ಎಂದು ಆಟೊ ಚಾಲಕ ಇರ್ಫಾನ್ ಬಡೇಸಾಬ್ ಅವರು ಅಳಲು ತೋಡಿಕೊಂಡರು.

‘ಆಟೊದವರು ಎಲ್ಲಿ ಬೇಕೆಂದರಲ್ಲಿ, ಮನಬಂದ ಹಾಗೆ ತೂರಿಕೊಂಡು ಹೋಗುತ್ತಾರೆ. ಯಾವುದಾದರೂ ವಾಹನಕ್ಕೆ ತಗುಲುತ್ತದೆಯೇ ಎಂಬ ಆತಂಕದಲ್ಲೇ ನಾವು ಬಸ್ ಚಲಾಯಿಸುತ್ತೇವೆ’ ಎಂದು ಬಸ್ ಚಾಲಕರೊಬ್ಬರು ಹೇಳಿದರು.

‘ಬೇಕಾಬಿಟ್ಟಿ ವಾಹನ ಚಾಲನೆ, ಕಂಡಕಂಡಲ್ಲಿ ಗಾಡಿ ನಿಲ್ಲಿಸುವುದು, ನಿಯಮ ಪಾಲನೆ ಮಾಡದೇ ಇರುವುದು ಹೀಗೆ ಸಂಚಾರ ದಟ್ಟಣೆಗೆ ಅನೇಕ ಕಾರಣಗಳಿವೆ. ಅದೂ ಅಲ್ಲದೆ, ವರ್ಷಕ್ಕೆ ಸಾವಿರಾರು ಹೊಸ ವಾಹನಗಳು ನೋಂದಣಿಯಾಗುತ್ತವೆ. ಆದರೆ ರಸ್ತೆ ಮಾತ್ರ ಅಷ್ಟೇ ಇರುತ್ತದೆ. ರಸ್ತೆಯ ಸಾಮರ್ಥ್ಯಕ್ಕೆ ಮೀರಿ ವಾಹನಗಳು ರಸ್ತೆಗಿಳಿದಾಗ ದಟ್ಟಣೆ ಆಗುವುದು ಸಹಜ’ ಎಂದು ಸಂಚಾರ ವಿಭಾಗದ ಡಿಸಿಪಿ ರವೀಶ್ ಸಿ.ಆರ್. ಅವರು ಹೇಳುತ್ತಾರೆ.

ಹುಬ್ಬಳ್ಳಿಯ ದೇಶಪಾಂಡೆ ನಗರದ ರಸ್ತೆಯಲ್ಲಿ ಮಧ್ಯಾಹ್ನದ ವೇಳೆಯೂ ಸಂಚಾರ ದಟ್ಟಣೆ ಉಂಟಾಗಿತ್ತು –ಪ್ರಜಾವಾಣಿ ಚಿತ್ರ: ಗೋವಿಂದಾರಾಜ ಜವಳಿ
ಅನಂತರಾಜ ಮೇಲಾಂಟ
ರವೀಶ್‌ ಸಿ.ಆರ್‌.

ದಿನೇದಿನೆ ಹೆಚ್ಚುತ್ತಿದೆ ವಾಹನಗಳ ಸಂಖ್ಯೆ ಸಮರ್ಪಕವಾಗಿ ನಡೆಯದ ಟ್ರಾಫಿಕ್ ನಿರ್ವಹಣೆ ಸಂಚಾರ ವಿಭಾಗದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ

ಸಂಚಾರ ಸಮರ್ಪಕ ನಿರ್ವಹಣೆಗಾಗಿ ಸಾಕಷ್ಟು ಬಾರಿ ಅಧಿಕಾರಿಗಳನ್ನು ಭೇಟಿಯಾಗಿ ಗಮನ ಸೆಳೆದಿರುವೆ. ಆದರೆ ಯಾವೊಬ್ಬ ಅಧಿಕಾರಿಯೂ ಸಮಸ್ಯೆ ನಿವಾರಣೆಗೆ ಆಸಕ್ತಿ ತೋರುತ್ತಿಲ್ಲ
ಉಪ್ಪೂರು ಅನಂತರಾಜ ಮೇಲಾಂಟ ನಗರದ ನಿವಾಸಿ
ಸಂಚಾರ ನಿಯಮ ಪಾಲಿಸಬೇಕು ಎಂಬ ಅರಿವು ಜನರಲ್ಲಿ ಮೂಡದ ಹೊರತು ಎಂಥದ್ದೇ ನಿಯಮ ಜಾರಿಗೆ ತಂದರೂ ಸಂಚಾರ ದಟ್ಟಣೆ ಸಮಸ್ಯೆ ಎಂದಿಗೂ ಪರಿಹಾರವಾಗುವುದಿಲ್ಲ
ರವೀಶ್ ಸಿ.ಆರ್. ಡಿಸಿಪಿ ಸಂಚಾರ ವಿಭಾಗ

ವಿಪರೀತ ಟ್ರಾಫಿಕ್ ಎಲ್ಲೆಲ್ಲಿ? ನೀಲಿಜಿನ್ ರಸ್ತೆ ಬಂಕಾಪುರ ಚೌಕ ಕಾರವಾರ ರಸ್ತೆ ಭಾರತ್ ಮಿಲ್‌ನಿಂದ ಹೊಸೂರು ವೃತ್ತ ಸಂಪರ್ಕಿಸುವ ರಸ್ತೆ ಗಬ್ಬೂರು ರಸ್ತೆ ವಿಜಯಪುರ ರಸ್ತೆ ಗದಗ ರಸ್ತೆ ಇಂಡಿ ಪಂಪ್ ದೇಸಾಯಿ ವೃತ್ತ (ದೇಶಪಾಂಡೆ ನಗರ) ಧಾರವಾಡ ರಸ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.