ADVERTISEMENT

ಹುಬ್ಬಳ್ಳಿ– ಧಾರವಾಡ: ಭೌತಿಕ ತರಗತಿ ಸ್ಥಗಿತಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 12:43 IST
Last Updated 13 ಜನವರಿ 2022, 12:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಧಾರವಾಡ: ಶಾಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅವಳಿನಗರ ಹಾಗೂ ಗ್ರಾಮೀಣ ಭಾಗದ ಶಾಲೆಗಳಲ್ಲಿ 1ರಿಂದ 8ನೇ ವರ್ಗದವರೆಗಿನ ಭೌತಿಕ ತರಗತಿ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಬುಧವಾರ ಆದೇಶ ಹೊರಡಿಸಿದ್ದಾರೆ.

ಭೌತಿಕ ತರಗತಿಗಳು, ವಸತಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳ ಸಹಿತ ತರಗತಿಗಳನ್ನು ಗುರುವಾರದಿಂದ ಮುಂದಿನ ಆದೇಶದವರೆಗೆ ಮುಚ್ಚುವಂತೆ ಸೂಚಿಸಿದ್ದಾರೆ.9 ಹಾಗೂ 10ನೇ ತರಗತಿಗಳನ್ನು ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ತರಗತಿ ನಡೆಸಲು ಅನುಮತಿ ನೀಡಿದ್ದಾರೆ.

ಆದರೆ ಜಿಲ್ಲೆಯಅಳ್ನಾವರ, ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕುಗಳ ಶಾಲೆಗಳಲ್ಲಿ ಕೋವಿಡ್ ಪ್ರಕರಣಗಳು ಇಲ್ಲಿಯವರೆಗೆ ಕಂಡುಬಂದಿಲ್ಲ. ಶಾಲಾ ಮುಖ್ಯಸ್ಥರಿಗೆ ಮಕ್ಕಳ ಆರೋಗ್ಯ ಸುರಕ್ಷತೆ ಕುರಿತು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.

ADVERTISEMENT

ಧಾರವಾಡ ತಾಲ್ಲೂಕಿನಲ್ಲಿ ಸೋಂಕು ದೃಢಪಡುತ್ತಿರುವ ದರ ಶೇ 5.38 ಹಾಗೂ ಹುಬ್ಬಳ್ಳಿ ತಾಲ್ಲೂಕಿನಲ್ಲಿ ಶೇ 11.76ರಷ್ಟಿದೆ. ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ವಿವರವಾಗಿ ಚರ್ಚಿಸಿ, ಸೋಂಕು ನಿಯಂತ್ರಿಸಲು ಹಾಗೂ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಆದೇಶ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

‘ಶಾಲೆಗೆ ಬರುವ ವಿದ್ಯಾರ್ಥಿಗಳು ತಪ್ಪದೇ ಮಾಸ್ಕ್ ಧರಿಸಿ ಬರಬೇಕು ಹಾಗೂ ಅಂತರ ಕಾಪಾಡಿಕೊಳ್ಳಬೇಕು. ಒಂದೇ ವರ್ಗದಲ್ಲಿ 100ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ತಂಡಗಳಾಗಿ ವರ್ಗೀಕರಿಸಿ ತರಗತಿ ನಡೆಸುವಂತೆ ತಿಳಿಸಲಾಗಿದೆ. ಒಟ್ಟಾರೆಯಾಗಿ ಮಕ್ಕಳ ಹಾಗೂ ಶಿಕ್ಷಕರ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ‘ ಎಂದು ಕೆಳದಿಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.