ADVERTISEMENT

ಮೇಯರ್‌ ಮೀಸಲಾತಿ; ತಡೆಯಾಜ್ಞೆ ತೆರವು

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 14:32 IST
Last Updated 13 ಜೂನ್ 2025, 14:32 IST
ಹೈಕೋರ್ಟ್‌ನ ಧಾರವಾಡ ಪೀಠ
ಹೈಕೋರ್ಟ್‌ನ ಧಾರವಾಡ ಪೀಠ   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಯ ನೂತನ ಮೇಯರ್‌ ಸ್ಥಾನಕ್ಕೆ ನಿಗದಿ ಆಗಿದ್ದ ಮೀಸಲಾತಿ ವಿರುದ್ಧದ ತಡೆಯಾಜ್ಞೆ ಧಾರವಾಡ ಹೈಕೋರ್ಟ್‌ ಪೀಠದಲ್ಲಿ ತೆರವು ಆಗಿದೆ. ಅರ್ಜಿದಾರ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಸ್ವತಃ ಪ್ರಕರಣವನ್ನು ಹಿಂಪಡೆದಿದ್ದಾರೆ. 

‘ತಡೆಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಎಷ್ಟು ದಿನ ಪ್ರಕರಣ ನಡೆಯುತ್ತದೆ ಎಂಬ ಬಗ್ಗೆ ಅಂದಾಜಿಲ್ಲ. 5 ವರ್ಷದ ಆಡಳಿತದ ಅವಧಿಯಲ್ಲಿ ಈಗಾಗಲೇ ಮೂರು ವರ್ಷ ಮುಕ್ತಾಯವಾಗಿದೆ. ಎರಡು ವರ್ಷ ಮಾತ್ರ ಬಾಕಿಯಿದೆ. ಅನಗತ್ಯ ಕಾನೂನು ಸಂಘರ್ಷ ಬೇಡವೆಂದು ಪ್ರಕರಣ ಹಿಂಪಡೆದಿರುವೆ’ ಎಂದು ಶಿವು ಮೆಣಸಿನಕಾಯಿ ತಿಳಿಸಿದರು.

ಪ್ರಸ್ತುತ ಪಾಲಿಕೆಯ ಐದು ವರ್ಷದ ಆಡಳಿತ ಅವಧಿಯಲ್ಲಿ, ಮೇಯರ್‌ ಸ್ಥಾನವು ಸಾಮಾನ್ಯ ವರ್ಗಕ್ಕೆ ಒಂದೇ ಬಾರಿ ಮೀಸಲಾತಿ ನೀಡಿದ್ದನ್ನು ಪ್ರಶ್ನಿಸಿ, ಶಿವು ಮೆಣಸಿನಕಾಯಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಅದರಂತೆ ಹೈಕೋರ್ಟ್ ಮೀಸಲಾತಿ ವಿರುದ್ಧ ತಡೆಯಾಜ್ಞೆ ನೀಡಿತ್ತು.

ADVERTISEMENT

ಹಾಲಿ ಮೇಯರ್‌ ಅವಧಿ ಇದೇ 28ರಂದು ಮುಕ್ತಾಯವಾಗಲಿದೆ. ನಂತರ ಅವಧಿಗೆ ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪ ಮೇಯರ್‌ ಸ್ಥಾನ ಹಿಂದುಳಿದ ವರ್ಗ ‘ಬಿ’ಗೆ ಮೀಸಲಾಗಿದೆ. ಚುನಾವಣೆ ನಡೆಸುವ ಕುರಿತು ಪಾಲಿಕೆ ಆಯುಕ್ತರು ಈಗಾಗಲೇ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು, ಸೂಚಿಸಿದ್ದಾರೆ. ಜುಲೈ ಎರಡನೇ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.