ADVERTISEMENT

ಹುಬ್ಬಳ್ಳಿ: ರೈತರ ಪ್ರತಿಭಟನೆ– ವಾಹನಗಳ ಸಂಚಾರ ಸ್ಥಗಿತ

ಎರಡು ಬೇಡಿಕೆ ಈಡೇರಿಸುವ ಭರವಸೆ, ಸಾವಿರಾರು ರೈತರು ಭಾಗಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 15:55 IST
Last Updated 24 ಫೆಬ್ರುವರಿ 2025, 15:55 IST
ಹುಬ್ಬಳ್ಳಿಯ ನವನಗರದ ಹೆಸ್ಕಾಂ ಕಚೇರಿ ಎದುರು ರೈತರು ಹುಬ್ಬಳ್ಳಿ–ಧಾರವಾಡ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ನವನಗರದ ಹೆಸ್ಕಾಂ ಕಚೇರಿ ಎದುರು ರೈತರು ಹುಬ್ಬಳ್ಳಿ–ಧಾರವಾಡ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ ಲಿಂಕ್, ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧ, ತ್ರಿಫೇಸ್‌ ವಿದ್ಯುತ್‌, ಬಾಕಿ ಬಿಲ್‌ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾವಿರಾರು ರೈತರು ಸೋಮವಾರ ಇಲ್ಲಿನ ನವನಗರದ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸುಮಾರು ಎರಡು ತಾಸು ಹುಬ್ಬಳ್ಳಿ– ಧಾರವಾಡ ಮುಖ್ಯ ರಸ್ತೆ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ನವನಗರದಿಂದ ಹುಬ್ಬಳ್ಳಿ–ಧಾರವಾಡ ಮುಖ್ಯರಸ್ತೆಯ ಎರಡೂ ಕಡೆ, ಸುಮಾರು ಎರಡು ಕಿ.ಮೀ.ವರೆಗೆ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ಪ್ರಯಾಣಿಕರು ತೀವ್ರ ಪರದಾಡಿದರು.

ರೈತ ಭಾರತ ಪಕ್ಷ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ ಜಿಲ್ಲೆ ಸೇರಿದಂತೆ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಿಂದ ಬಂದ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರೈತರ ಹೆಸರು ಹೇಳಿ ಅಧಿಕಾರಕ್ಕೆ ಬಂದು, ರೈತರಿಗೆ ಸಮಸ್ಯೆ ಉಂಟು ಮಾಡುತ್ತಿರುವ ಜನಪ್ರತಿನಿಧಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ADVERTISEMENT

ಬೆಳಿಗ್ಗೆ 10ರಿಂದ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ಸಂಜೆ 4 ಗಂಟೆ ನಂತರ ಹುಬ್ಬಳ್ಳಿ–ಧಾರವಾಡ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಿದರು. ನಂತರ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಧರಣಿ ಕುಳಿತು ಚಿಗರಿ ಬಸ್‌ಗಳ ಸಂಚಾರ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆ ಈಡೇರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು, ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದರು.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್‌. ಅವರು, ರೈತ ಮುಖಂಡರ ಜೊತೆ ಮೂರು ಬಾರಿ ಸಂದಾನ ಸಭೆ ನಡೆಸಿದರು. ಒಮ್ಮತದ ನಿರ್ಧಾರಕ್ಕೆ ಬರಲಾಗದ ಕಾರಣ, ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಸಾಕಷ್ಟು ಬಾರಿ ವಿನಂತಿಸಿದರು. ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದ್ದು ಪ್ರತಿಭಟನೆ ಕೈಬಿಡಿ ಎಂದು ಪೊಲೀಸ್‌ ಕಮಿಷನರ್‌ ಎಚ್ಚರಿಕೆ ನೀಡಿದ ನಂತರ, ಪ್ರತಿಭಟನೆ ಹಿಂಪಡೆದರು.

ಪ್ರತಿಭಟನಾಕಾರರ ಜೊತೆ ಮಾತನಾಡಿದ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್‌., ‘ಅಥಣಿ ಮತ್ತು ಕಾಗವಾಡ ಭಾಗದ ರೈತರ ವಿದ್ಯುತ್‌ ಬಿಲ್‌ ಬಾಕಿ ₹30 ಕೋಟಿಯಷ್ಟಿದ್ದು, ಮನ್ನಾ ಮಾಡಲು ಅಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಪರೀಕ್ಷೆ ಸಮಯವಾಗಿರುವುದರಿಂದ ರಾತ್ರಿ ವೇಳೆ ವಿದ್ಯುತ್‌ ಕಡಿತ ಮಾಡಬಾರದು ಎನ್ನುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ರೈತ ಮುಖಂಡರಾದ ಪ್ರಕಾಶ ಪೂಜಾರಿ, ರಾಜು ಕನಾಳೆ, ದುರ್ಗಪ್ಪ ಬೆಳಗಾವಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.