ಹುಬ್ಬಳ್ಳಿ: ಕನ್‌ಸ್ಟ್ರಕ್ಷನ್ ಕಂಪೆನಿ ತೆರೆಯಲು ₹50 ಕೋಟಿ ಸಹಾಯ ಮಾಡುತ್ತೇನೆ ಎಂದು ಪುಣೆಯ ಅಶ್ವಿನಿ ಅವರಿಂದ ₹60 ಲಕ್ಷ ಪಡೆದು, ಅವರಿಗೆ ಪುಸ್ತಕ ಅಂಗಡಿಯಲ್ಲಿ ದೊರೆಯುವ ನಕಲಿ ನೋಟು ನೀಡಿ ವಂಚಿಸಿದ್ದ ಮೈಸೂರಿನ ಮಹ್ಮದ್ ಆಸೀಫ್‌ನನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಶ್ವಿನಿ ಅವರಿಗೆ ಆರೋಪಿ ಮಹ್ಮದ್ ಆಸೀಫ್‌ನು ಮೈಸೂರಿನಲ್ಲಿ ಸುಧೀರ ಮೆಹ್ತಾ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದ. ಅಶ್ವಿನಿ ಅವರು ಮಗಳ ಹೆಸರಲ್ಲಿ ಕನ್‌ಸ್ಟ್ರಕ್ಷನ್ ಕಂಪನಿ ತೆರೆಯುವ ಕುರಿತು, ಅವನಲ್ಲಿ ಹಣಕಾಸಿನ ನೆರವು ಕೇಳಿದ್ದರು. ಹಣ ನೀಡುವುದಾಗಿ ಹೇಳಿ ಹುಬ್ಬಳ್ಳಿಗೆ ಅವರನ್ನು ಕರೆಸಿಕೊಂಡು, ಇತರೆ ಶುಲ್ಕವೆಂದು ಮುಂಗಡವಾಗಿ ₹60 ಲಕ್ಷ ಪಡೆದು, ಎರಡು ಬ್ಯಾಗ್‌ನಲ್ಲಿ ₹5 ಸಾವಿರ ಅಸಲಿ ನೋಟು, ಉಳಿದದ್ದು ಮಕ್ಕಳಿಗೆ ನೋಟಿನ ಕುರಿತು ಅರಿವು ಮೂಡಿಸುವ ₹1.87 ಕೋಟಿ ಮುಖಬೆಲೆಯ ನಕಲಿ ನೋಟು ಇಟ್ಟು ವಂಚಿಸಿದ್ದ.
‘ಮಹಿಳೆಗೆ ನಕಲಿ ನೋಟು ಕೊಟ್ಟು ವಂಚಿಸಿರುವ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಜಯಂತ ಗೌಳಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿ ಮಹ್ಮದ್‌ನನ್ನು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಬಂಧಿಸಿ, ನ್ಯಾಯಾಲಯ ವಶಕ್ಕೆ ಒಪ್ಪಿಸಿದೆ. ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.
‘ಪುಸ್ತಕದ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವ, ಬ್ಯಾಂಕ್ ಆಫ್ ಇಂಡಿಯಾ ಎಂದು ಹೆಸರಿರುವ ನಕಲಿ ನೋಟಿನ ಕಂತೆಯನ್ನು ಆರೋಪಿ ಅಶ್ವಿನಿ ಅವರಿಗೆ ನೀಡಿದ್ದಾನೆ. ತಮಿಳುನಾಡಿನ ನಗರವೊಂದರ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಅವುಗಳನ್ನು ಪ್ರಿಂಟ್ ಹಾಕಿಸಿರುವುದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಮಹಿಳೆಯಿಂದ ಪಡೆದ ಹಣ ವಶಕ್ಕೆ ಪಡೆಯಬೇಕಿದೆ’ ಎಂದರು.
‘ಆರೋಪಿ ಶೂಟು, ಕೋಟು ಹಾಕಿಕೊಂಡು ಸಭ್ಯ ವ್ಯವಹಾರಸ್ಥನಂತೆ ಕಾಣುತ್ತಾನೆ. ಕನ್ನಡ, ಹಿಂದಿ ಭಾಷೆಯನ್ನು ಚೆನ್ನಾಗಿ ಬಲ್ಲವನಾಗಿದ್ದು, ಹೊಸಬರು ಪರಿಚಯವಾದಾಗ, ನಕಲಿ ಹೆಸರಿನಿಂದ ಪರಿಚಯಿಸಿಕೊಂಡು ಗುರುತು ಪತ್ರ ತೋರಿಸುತ್ತಿದ್ದ. ಎಲ್ಲಿಯೂ ಸಿಕ್ಕಿಹಾಕಿಕೊಳ್ಳಬಾರದೆಂದು, ಒಬ್ಬರ ಜೊತೆ ವ್ಯವಹಾರ ನಡೆಸಿದ ನಂತರ ಮೊಬೈಲ್ ಸಂಖ್ಯೆಯನ್ನು ಬಿಸಾಡುತ್ತಿದ್ದ. ಅದಕ್ಕಾಗಿಯೇ ಪ್ರತ್ಯೇಕ ಮೊಬೈಲ್ ಇಟ್ಟುಕೊಂಡಿದ್ದ’ ಎಂದು ಕಮಿಷನರ್ ವಿವರಿಸಿದರು.
ಪೊಲೀಸರಿಗೇ ಬೆದರಿಸುತ್ತಾನೆ: ಕಮಿಷನರ್
‘ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿಯೂ ಇಂತಹದ್ದೇ ಒಂದು ಪ್ರಕರಣ ನಡೆದಿತ್ತು. ಅದರ ಆರೋಪಿ ಸಹ ಮಹ್ಮದ್ ಆಸೀಫ್ ಆಗಿದ್ದು ಪೊಲೀಸರು ಬಂಧಿಸಿ ವಿಚಾರಣೆ ನಡೆಸುವಾಗ ಆತ್ಮಹತ್ಯೆಗೆ ಯತ್ನಿಸಿದ್ದ. ಆ ಕುರಿತು ಸಹ ಪ್ರಕರಣ ದಾಖಲಾಗಿದೆ. ವಿಚಾರಣೆ ಮಾಡುವಾಗ ತನ್ನ ಮೇಲೆ ಹಲ್ಲೆ ನಡೆಸಿದ್ದೀರಿ ಎಂದು ನ್ಯಾಯಾಧೀಶರಿಗೆ ಹೇಳುತ್ತೇನೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೊಲೀಸರಿಗೇ ಬೆದರಿಸಿದ್ದಾನೆ. ಇವನಿಂದ ಯಾರಾದರೂ ವಂಚನೆಗೆ ಒಳಗಾಗಿದ್ದರೆ ಪ್ರಕರಣ ದಾಖಲಿಸಬಹುದು’ ಎಂದು ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.