ADVERTISEMENT

ಹೊಸೂರು ಟರ್ಮಿನಲ್‌ ಮಾ.1ರಿಂದ ಕಾರ್ಯಾರಂಭ

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಂದ ಫೆ.2ರಂದು ಲೋಕಾರ್ಪಣೆ

ಬಸವರಾಜ ಸಂಪಳ್ಳಿ
Published 25 ಫೆಬ್ರುವರಿ 2020, 9:18 IST
Last Updated 25 ಫೆಬ್ರುವರಿ 2020, 9:18 IST
ಹುಬ್ಬಳ್ಳಿಯ ಹೊಸೂರು ಬಸ್‌ ಟರ್ಮಿನಲ್‌ನ ವಿಹಂಗಮ ನೋಟ –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಹೊಸೂರು ಬಸ್‌ ಟರ್ಮಿನಲ್‌ನ ವಿಹಂಗಮ ನೋಟ –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಹೊಸೂರು ಬಸ್‌ ಟರ್ಮಿನಲ್‌ ಕಾರ್ಯಾರಂಭಕ್ಕೆ ಇದ್ದ ತೊಡಕುಗಳು ಬಹುತೇಕ ನಿವಾರಣೆಯಾಗಿದ್ದು, ರಾಜ್ಯದ ವಿವಿಧ ನಗರಗಳಿಗೆ ತೆರಳುವ ಬಸ್‌ಗಳು ಮಾರ್ಚ್‌ 1ರಿಂದ ಹಳೇ ಬಸ್‌ ನಿಲ್ದಾಣದ ಬದಲು ಇಲ್ಲಿಂದ ಸಂಚರಿಸಲಿವೆ.

ಫೆ.2ರಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಈ ಬಸ್‌ ಟರ್ಮಿನಲ್‌ ಅನ್ನು ಉದ್ಘಾಟನೆ ಮಾಡಿದ್ದರು. ಆದರೆ, ಕಾರ್ಯಾರಂಭಿಸಿರಲಿಲ್ಲ. ಇದರಿಂದ ಸಾಕಷ್ಟು ಟೀಕೆಗಳಿಗೆ ಕಾರಣವಾಗಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ಮಾರ್ಚ್‌ 1ರಿಂದ ಹೊಸೂರು ಬಸ್‌ ನಿಲ್ದಾಣದಿಂದ 300 ಲಾಂಗ್‌ ರೂಟ್‌ (ದೂರದ ನಗರಗಳಿಗೆ ತೆರಳುವ) ಮತ್ತು ನಗರ ಸಾರಿಗೆ ಬಸ್‌ಗಳು ಹಾಗೂ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಿಂದ 150 ಬಸ್‌ಗಳು ಕಾರ್ಯಾಚರಣೆ ಆರಂಭಿಸಲಿವೆ ಎಂದು ಖಚಿತಪಡಿಸಿದರು.

ADVERTISEMENT

ಯಾವಾವ ರೂಟ್‌ ಬಸ್‌ಗಳು ಎಲ್ಲಿಂದ ಕಾರ್ಯಾರಂಭ ಮಾಡಲಿವೆ ಎಂಬುದರ ಕುರಿತು ಒಂದೆರಡು ದಿನಗಳಲ್ಲಿ ನೋಟಿಪಿಕೇಷನ್‌ ಹೊರಡಿಸಲಾಗುವುದು ಎಂದು ಹೇಳಿದರು.

ವಾಣಿ ವಿಲಾಸ ಸರ್ಕಲ್‌ನಿಂದ ಹೊಸೂರು ಟರ್ಮಿನಲ್‌ಗೆ ಬಸ್‌ಗಳು ಹೋಗಿ, ಬರಲು ವ್ಯವಸ್ಥೆ ಮಾಡಲಾಗಿದೆ. ಈ ರಸ್ತೆ ಬಹಳ ಕಿರಿದಾಗಿರುವುದರಿಂದ ಪಿ.ಬಿ.ರಸ್ತೆಯಿಂದಲೂ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಲಾಗಿದೆ ಎಂದರು.

ವಿಳಂಬಕ್ಕೆ ಕಾರಣ:ವಾಣಿ ವಿಲಾಸ ಸರ್ಕಲ್‌ನಿಂದ ಉಣಕಲ್‌ಗೆ ಸಂಪರ್ಕ ಕಲ್ಪಿಸುವ ಸಿಆರ್‌ಎಫ್‌ ರಸ್ತೆ ನಿರ್ಮಾಣ ಪೂರ್ಣವಾಗದ ಕಾರಣ ಹಾಗೂ ವಾಣಿವಿಲಾಸ ಸರ್ಕಲ್‌ನಲ್ಲಿರುವ ವಿದ್ಯುತ್‌ ಕಂಬಗಳ ತೆರವು ಆಗದೇ ಇದ್ದ ಕಾರಣ ಹೊಸೂರು ಟರ್ಮಿನಲ್‌ ಕಾರ್ಯಾರಂಭಕ್ಕೆ ತೊಡಕಾಗಿತ್ತು ಎಂದು ರಾಜೇಂದ್ರ ಚೋಳನ್‌ ಹೇಳಿದರು.

ಹೊಸೂರು ಟರ್ಮಿನಲ್‌ಗೆ ಸಿಟಿ ಬಸ್‌ಗಳು ಬಂದು ಹೋಗುವ ಪ್ರವೇಶ ದ್ವಾರದ ಬಳಿ(ಹೊಸ ಕೋರ್ಟ್‌ ಸಮೀಪ) ಸಿಆರ್‌ಎಫ್‌ ರಸ್ತೆ ಇನ್ನೂ ಪೂರ್ಣವಾಗಿಲ್ಲ. ಈ ವಾರದಲ್ಲಿ ಪೂರ್ಣವಾಗಲಿದೆ ಎಂದು ಸಂಬಂಧಿಸಿದವರು ಭರವಸೆ ನೀಡಿದ್ದಾರೆ ಎಂದರು.

ಸಂಚಾರ ಪೊಲೀಸರ ಜೊತೆ ಈಗಾಗಲೇ ಜಂಟಿ ಸಭೆ ನಡೆಸಲಾಗಿದ್ದು, ಅವರ ಸೂಚನೆ ಮೇರೆಗೆ ವಾಣಿವಿಲಾಸ ಸರ್ಕಲ್‌ನಿಂದ ಹೊಸ ಕೋರ್ಟ್‌ ವರೆಗೆ ವಾಹನಗಳ ಏಕಮುಖ ಸಂಚಾರ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.