ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿರುವ ಇನ್ಫೊಸಿಸ್ ಕ್ಯಾಂಪಸ್‌ನಲ್ಲಿ ಉದ್ಯೋಗಿಗಳ ಸಂಖ್ಯೆ ಒಂದು ಸಾವಿರ ತಲುಪಿದೆ. ಇದು ಹುಬ್ಬಳ್ಳಿ ಧಾರವಾಡ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಇನ್ನಷ್ಟು ಐಟಿ ಕಂಪನಿಗಳು ಆರಂಭವಾಗಲು ಪ್ರೇರಣೆ ನೀಡಿದಂತಾಗಿದೆ.
ಈ ಭಾಗದಲ್ಲಿ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ. ಟಿಸಿಎಸ್, ಸಿಸ್ಕೊದಂತಹ ವಿವಿಧ ಕಂಪನಿಗಳು ಇಲ್ಲಿ ಆರಂಭವಾದರೆ ಯುವಕರಿಗೆ ಇಲ್ಲಿಯೇ ಉದ್ಯೋಗ ಸಿಗಲಿದೆ. ಉದ್ಯೋಗಕ್ಕಾಗಿ ಬೇರೆ ಬೇರೆ ನಗರಳಿಗೆ ಹೋಗುವುದು ತಪ್ಪಲಿದೆ.
ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಮಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ಇನ್ಫೊಸಿಸ್ ಕ್ಯಾಂಪಸ್ ಇದೆ. 2022ರ ಆಗಸ್ಟ್ 1ರಂದು ಹುಬ್ಬಳ್ಳಿಯ ಕ್ಯಾಂಪಸ್ ಕಾರ್ಯಾರಂಭ ಮಾಡಿದೆ.
ಕ್ಯಾಂಪಸ್ ಆರಂಭವಾದಾಗ, 100 ರಿಂದ 150 ಉದ್ಯೋಗಿಗಳು ಮಾತ್ರ ಇದ್ದರು. ನಂತರ ಇಲ್ಲಿನ ಕ್ಯಾಂಪಸ್‌ಗೆ ವರ್ಗಾವಣೆ ಪಡೆಯುವ ಉದ್ಯೋಗಿಗಳಿಗೆ ವಿಶೇಷ ಪ್ಯಾಕೇಜ್ ಅನ್ನು ಕಂಪನಿ ಕಳೆದ ವರ್ಷ ಘೋಷಿಸಿತ್ತು. ಆ ಬಳಿಕ ಹೆಚ್ಚಿನ ಉದ್ಯೋಗಿಳು ಇಲ್ಲಿಗೆ ಬಂದರು. ಈಗ ಇರುವ ಸಾವಿರ ಉದ್ಯೋಗಿಗಳಲ್ಲಿ ಶೇ 90ರಷ್ಟು ಉತ್ತರ ಕರ್ನಾಟಕ ಭಾಗದವರೇ ಇದ್ದಾರೆ.
ಹೊಸದಾಗಿ ಈ ಭಾಗದ 500 ಜನರಿಗೆ ಕಂಪನಿಯು ಉದ್ಯೋಗ ನೇಮಕಾತಿ ಪತ್ರ ನೀಡಿದ್ದು, ಅವರು ಜುಲೈನಲ್ಲಿ ಕೆಲಸಕ್ಕೆ ಸೇರಲಿದ್ದಾರೆ ಎನ್ನುತ್ತವೆ ಕಂಪನಿಯ ಮೂಲಗಳು. ಕ್ಯಾಂಪಸ್‌ಗೆ ಜಾಗ ಪಡೆಯುವಾಗ 1,500 ಜನರಿಗೆ ಉದ್ಯೋಗ ಒದಗಿಸಲಾಗುವುದು ಎಂದು ಕಂಪನಿ ಒಪ್ಪಂದ ಮಾಡಿಕೊಂಡಿದೆ.
ಉದ್ಯೋಗಿಗಳ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ನಗರದ ಸಿಬಿಟಿಯಿಂದ ಕ್ಯಾಂಪಸ್‌ವರೆಗೆ ನಗರ ಸಾರಿಗೆ ಬಸ್ ಸೌಲಭ್ಯವನ್ನು ಸಹ ಕಲ್ಪಿಸಿದೆ.
‘ನಗರದ ವಿಮಾನ ನಿಲ್ದಾಣದ ಬಳಿ 2015ರಲ್ಲಿ ಆಗಿನ ಸರ್ಕಾರ ಕ್ಯಾಂಪಸ್ ನಿರ್ಮಾಣಕ್ಕೆ 50 ಎಕರೆ ಜಮೀನು ಮಂಜೂರು ಮಾಡಿತ್ತು. 2018ರಲ್ಲಿ ಕ್ಯಾಂಪಸ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೂ ಕಾರ್ಯಾರಂಭ ಆಗಿರಲಿಲ್ಲ. ಈ ನಡುವೆ ಕಂಪನಿಯು ರಾಜ್ಯವನ್ನು ಹೊರತುಪಡಿಸಿ ಬೇರೆ ರಾಜ್ಯಗಳ ಆರು ಕಡೆ ಕ್ಯಾಂಪಸ್ ಆರಂಭಿಸುವುದಾಗಿ ಘೋಷಿಸಿತ್ತು. ಇದನ್ನು ಖಂಡಿಸಿ ನಗರದ ಉದ್ಯಮಿಗಳು, ಟೆಕಿಗಳು, ವಿದ್ಯಾರ್ಥಿಗಳೊಂದಿಗೆ ಸ್ಟಾರ್ಟ್ ಇನ್ಫೊಸಿಸ್ ಅಭಿಯಾನ ನಡೆಸಿದ್ದೆವು’ ಎಂದು ಅಭಿಯಾನದ ರೂವಾರಿ, ಸಾಮಾಜಿಕ ಕಾರ್ಯಕರ್ತ ಸಂತೋಷ ನಗರಗುಂದ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇಲ್ಲಿನ ಆರ್ಯಭಟ ಪಾರ್ಕ್‌ನಲ್ಲಿರುವ ಎಚ್‌ಸಿಎಲ್ ಕಂಪನಿಯ ಕ್ಯಾಂಪಸ್‌ನಲ್ಲಿ 500ಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಾರೆ. ವಿವಿಧ ಕಂಪನಿಗಳು ಮತ್ತು ನವೋದ್ಯಮಗಳು ಇಲ್ಲಿ ಆರಂಭವಾದರೆ, ಹುಬ್ಬಳ್ಳಿ ಜತೆಗೆ ಈ ಭಾಗದ ಎಲ್ಲ ಜಿಲ್ಲೆಗಳ ಆರ್ಥಿಕ ಚಟುವಟಿಕೆಗೆ ಉತ್ತೇಜನ ಸಿಗಲಿದೆ’ ಎಂದರು.
‘ಯಾವುದೇ ಕಂಪನಿ ಇಲ್ಲಿ ಕ್ಯಾಂಪಸ್ ಆರಂಭಿಸಬೇಕಾದರೆ, ಸಾಕಷ್ಟು ಹೂಡಿಕೆ ಮಾಡಬೇಕು. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಸ್ಥಳೀಯವಾಗಿ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಈಗಿರುವ ಕಂಪನಿಗಳು ಸಹ ಬೇರೆ ಕಡೆ ಹೋಗುವ ಸಾಧ್ಯತೆ ಇದೆ’ ಎಂದು ಅವರು ವಿವರಿಸಿದರು.
‘ಇನ್ಫೊಸಿಸ್ ಇಲ್ಲಿನ ಕ್ಯಾಂಪಸ್‌ನಲ್ಲಿ ಹೊರ ಗುತ್ತಿಗೆ ನಿರ್ವಹಣೆ (ಬಿಪಿಒ) ಘಟಕ ಆರಂಭಿಸಿದರೆ ವಿವಿಧ ವಿದ್ಯಾರ್ಹತೆ ಇರುವ ಈ ಭಾಗದ ಇನ್ನೂ ಹೆಚ್ಚಿನ ಯುವಕರಿಗೆ ಉದ್ಯೋಗ ಸಿಗಲಿದೆ’ ಎಂದು ಅಭಿಪ್ರಾಯಪಟ್ಟರು.
‘ಕಂಪನಿಗೆ ಭೂಮಿ ನೀಡಿದ ಉದ್ದೇಶ ಈಡೇರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದು ಈಡೇರಿಲ್ಲ. ಇನ್ನಾದರೂ ಹೆಚ್ಚು ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ವಂಸತ ಲದವಾ ತಿಳಿಸಿದರು.
‘ಐಟಿ ಪಾರ್ಕ್ ಪುನಶ್ಚೇತನವಾಗಲಿ’
ನಗರದ ಮಾಹಿತಿ ತಂತ್ರಜ್ಞಾನ ಪಾರ್ಕ್‌ನಲ್ಲಿ (ಐಟಿ ಪಾರ್ಕ್) ಮಳಿಗೆಗಳು ಖಾಲಿ ಬಿದ್ದಿರುವುದು ಒಂದೆಡೆಯಾದರೆ, ಕೈಗಾರಿಕೆ ಪ್ರದೇಶದಲ್ಲಿ ಈ ಹಿಂದೆ ಜಾಗಕ್ಕಾಗಿ ಅರ್ಜಿ ಸಲ್ಲಿಸಿದ ಕಂಪನಿಗಳಿಗೂ ಭೂಮಿ ಹಂಚಿಕೆ ಮಾಡಿಲ್ಲ.
ಸಾಫ್ಟ್‌ವೇರ್ ಕಂಪನಿಗಳು, ಬಿಪಿಒ, ಕಾಲ್ ಸೆಂಟರ್‌ಗಳ ಮೂಲಕ ನಗರದಲ್ಲಿ ಐಟಿ ಪಾರ್ಕ್ ಸ್ಥಾಪಿಸಲಾಗಿದೆ. 200 ಮಳಿಗೆಗಳಿರುವ ಐಟಿ ಪಾರ್ಕ್‌ನಲ್ಲಿ ಬಹುತೇಕ ಮಳಿಗೆಗಳು ಖಾಲಿ ಇವೆ.
‘ಐಟಿ ಪಾರ್ಕ್‌ನಲ್ಲಿ ಸೌಲಭ್ಯ ಕೊರತೆ ಇರುವುದು ಒಂದೆಡೆಯಾದರೆ, ಕೆಲ ಮಳಿಗೆಯವರು ಸರಿಯಾಗಿ ಬಾಡಿಗೆ ಪಾವತಿಸಿಲ್ಲ. ₹4 ಕೋಟಿಗೂ ಅಧಿಕ ಬಾಡಿಗೆ ಬಾಕಿ ಇದೆ. ಈ ಬಗ್ಗೆ ನೋಟಿಸ್ ನೀಡಿದರೂ ಪಾವತಿಸಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.
‘ಇನ್ಫೊಸಿಸ್ ಸಂಸ್ಥೆಗೆ 58 ಎಕರೆ ಜಾಗ ನೀಡಲಾಗಿದೆ. ಕಂಪನಿಯವರು ಅಷ್ಟು ಪ್ರಮಾಣದ ಜಾಗ ಪಡೆದರೂ ಈವರೆಗೂ ಹೆಚ್ಚು ಉದ್ಯೋಗ ಸೃಷ್ಟಿಸಿಲ್ಲ. ಕಂಪನಿಗೆ ಅಗತ್ಯದಷ್ಟು ಜಾಗ ಬಿಟ್ಟು, ಅದರಲ್ಲಿ ಉಳಿದ ಕಂಪನಿಗಳಿಗೆ ಜಾಗ ಒದಗಿಸಬೇಕು’ ಎಂಬುದು ಉದ್ಯಮಿಗಳು ತಿಳಿಸಿದರು.
‘ಐಟಿ ಪಾರ್ಕ್ ಪುನಶ್ಚೇತನ ಮಾಡುವ ಕಾರ್ಯವೂ ನಡೆಯಬೇಕು. ಉತ್ತರ ಕರ್ನಾಟಕ ಭಾಗಕ್ಕೆ ಹೆಮ್ಮೆಯ ತಾಣವಾಗಿರುವ ಐಟಿ ಪಾರ್ಕ್‌ನ್ನು ಪುನಶ್ಚೇತನಗೊಳಿಸಿದರೆ, ಹೊಸ ಬೆಳವಣಿಗೆಗೆ ಕಾರಣವಾಗುತ್ತದೆ’ ಎಂದು ಅವರು ಹೇಳಿದರು.
ಆರ್ಥಿಕ ಚಟುವಟಿಕೆಗೆ ಉತ್ತೇಜನ
ಇನ್ಫೊಸಿಸ್ ಸಂಸ್ಥೆಯಂತೆಯೇ ಇನ್ನಿತರ ಸಂಸ್ಥೆಗಳು ಇಲ್ಲಿ ಆರಂಭವಾದರೆ, ಹುಬ್ಬಳ್ಳಿ–ಧಾರವಾಡ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ.
‘ಐಟಿ ಕಂಪನಿಗಳು ಸೇರಿ ಕೈಗಾರಿಕೆಗಳ ಆರಂಭಕ್ಕೆ ಪೂರಕವಾದ ರಾಷ್ಟ್ರೀಯ ಹೆದ್ದಾರಿಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ದಶದಿಕ್ಕುಗಳಿಗೂ ಬಸ್ ಸೇವೆಯಂತಹ ಸೌಲಭ್ಯಗಳನ್ನು ಹೊಂದಿರುವ ಹುಬ್ಬಳ್ಳಿ ಅಭಿವೃದ್ಧಿಗೆ ಹೊಸ ಸ್ವರೂಪ ಸಿಗಲಿದೆ. ಸರ್ಕಾರದ ಬಿಯಾಂಡ್ ಬೆಂಗಳೂರು ಆಶಯ ನಿಜವಾಗಿ ಈಡೇರಲಿದೆ’ ಎನ್ನುತ್ತಾರೆ ವಾಣಿಜ್ಯೋದ್ಯಮಿಗಳು.
‘ಈ ಭಾಗದಲ್ಲಿ ಎಂಜಿನಿಯರಿಂಗ್ ಮುಗಿಸಿದವರ ಜೊತೆಗೆ ಬಿಸಿಎ, ಇತರ ಪದವಿ ಕೋರ್ಸ್‌ಗಳನ್ನು ಮುಗಿಸಿದವರಿಗೆ ತಮ್ಮ ಭಾಗದಲ್ಲೇ ಉದ್ಯೋಗ ಸಿಗಲಿದೆ. ಜೊತೆಗೆ, ಇನ್ನಿತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಸ್ಥಳೀಯ ಆರ್ಥಿಕತೆಯು ಕನಿಷ್ಠ ₹100 ಕೋಟಿ ಹೆಚ್ಚಾಗಲಿದೆ’ ಎಂದು ಹೇಳಿದರು.
ಇನ್ಫೊಸಿಸ್ ಸಂಸ್ಥೆಗೆ ಸರ್ಕಾರ 58 ಎಕರೆ ಜಾಗ ನೀಡಿದ್ದು ಅದನ್ನು ಯಾವ ರೀತಿ ಬಳಸಲಾಗಿದೆ ಎಂಬುದನ್ನು ಪರಿಶೀಲಿಸಬೇಕು. ಮುಂದಿನ 5 ವರ್ಷಗಳಲ್ಲಿ 10 ಸಾವಿರ ಉದ್ಯೋಗಾವಕಾಶ ಕಲ್ಪಿಸುವ ಗುರಿ ನೀಡಬೇಕುಸಂತೋಷ ನರಗುಂದ , ಸಾಮಾಜಿಕ ಕಾರ್ಯಕರ್ತ
ಇನ್ಫೊಸಿಸ್ ಹುಬ್ಬಳ್ಳಿ ಕ್ಯಾಂಪಸ್‌ನಲ್ಲಿ ಉದ್ಯೋಗಿಗಳ ಸಂಖ್ಯೆ ಸಾವಿರ ದಾಟಿರುವುದು ಖುಷಿಯ ಸಂಗತಿ. ಇದಕ್ಕೆ ಜಮೀನು ನೀಡಿದ ರೈತರ ಮಕ್ಕಳಿಗೂ ಉದ್ಯೋಗ ಸಿಗಲಿಅರವಿಂದ ಬೆಲ್ಲದ , ವಿಧಾನಸಭೆ ವಿರೋಧ ಪಕ್ಷದ ಉಪನಾಯಕ
ಇನ್ಫೊಸಿಸ್ ಕ್ಯಾಂಪಸ್‌ಗೆ ರೈತರ ಅಮೂಲ್ಯವಾದ ಜಾಗವನ್ನು ನೀಡಲಾಗಿದೆ. ಅಷ್ಟು ಜಾಗ ಪಡೆದ ಕಂಪನಿ ನಿರೀಕ್ಷಿಸಿದಷ್ಟು ಉದ್ಯೋಗ ಸೃಷ್ಟಿ ಮಾಡಿಲ್ಲ.ದೀಪಾಲಿ ಗೋಟಡ್ಕೆ, ಸಂಸ್ಥಾಪಕಿ ,ವೆಬ್‌ಡ್ರೀಮ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.