ADVERTISEMENT

ಛೇ | ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಪೆಟ್ಟು ತಿಂದಿದ್ದ ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2019, 8:27 IST
Last Updated 27 ಅಕ್ಟೋಬರ್ 2019, 8:27 IST
ವಿಜಯ ಮೃತ್ಯುಂಜಯ ಹಿರೇಮಠ
ವಿಜಯ ಮೃತ್ಯುಂಜಯ ಹಿರೇಮಠ   

ಹುಬ್ಬಳ್ಳಿ: ಹಾಸ್ಟೆಲ್ ವಾರ್ಡನ್ ನಡೆಸಿದ್ದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು, ಒಂದೂವರೆ ತಿಂಗಳಿಂದ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ 4ನೇ ತರಗತಿ ವಿದ್ಯಾರ್ಥಿ ವಿಜಯ ಮೃತ್ಯುಂಜಯ ಹಿರೇಮಠ ಕಡೆಗೂ ಸಾವು ಗೆಲ್ಲಲಿಲ್ಲ.

ಶಸ್ತ್ರಚಿಕಿತ್ಸೆ ನಿಮಿತ್ತ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿದ್ದ ಬಾಲಕ, ಶಸ್ತ್ರಚಿಕಿತ್ಸೆಗೂ ಮುನ್ನವೇ ಸಾವಿನ ಕದ ತಟ್ಟಿದ್ದಾನೆ. ದೀಪಾವಳಿ ದಿನವಾದ ಭಾನುವಾರ ಮಧ್ಯಾಹ್ನ 12.30 ಹೊತ್ತಿಗೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ.

ಇಲ್ಲಿನ ನೇಕಾರನಗರದ ಮೃತ್ಯುಂಜಯ ಹಿರೇಮಠ ಅವರ ಮಗನಾದ ವಿಜಯನನ್ನು ಹಾವೇರಿ ಜಿಲ್ಲೆಯ ಹಾನಗಲ್‍ನಲ್ಲಿರುವ ಛಾತ್ರಾಲಯ ಖಾಸಗಿ ಹಾಸ್ಟೆಲ್‌ಗೆ3 ತಿಂಗಳ ಹಿಂದೆ ಸೇರಿಸಲಾಗಿತ್ತು.

ADVERTISEMENT

ಬಾಲಕ ಹಾಸಿಗೆ ಮೇಲೆ ಮೂತ್ರ ಮಾಡಿಕೊಂಡ ಎಂಬ ಕಾರಣಕ್ಕಾಗಿ, ಹಾಸ್ಟೆಲ್ ವಾರ್ಡನ್ ಶ್ರವಣಕುಮಾರ ಬಾಲಕನ ಹೊಟ್ಟೆಗೆ ಒದ್ದು, ಮನ ಬಂದಂತೆ ಹಲ್ಲೆ ನಡೆಸಿದ್ದ. ಇದರಿಂದಾಗಿ ಆತನ ಹೊಟ್ಟೆಯಲ್ಲಿ ಬಾವು ಕಾಣಿಸಿಕೊಂಡಿತ್ತಲ್ಲದೆ, ಜೀರ್ಣಾಂಗ ವ್ಯವಸ್ಥೆಯಲ್ಲಿ ಏರುಪೇರಾಗಿತ್ತು. ಆಹಾರವನ್ನೂ ಸೇವಿಸಲು ಆಗುತ್ತಿರಲಿಲ್ಲ.

ಕಿಮ್ಸ್ ಆಸ್ಪತ್ರೆಯಲ್ಲಿ ಒಂದು ತಿಂಗಳು ಇದ್ದ ಬಾಲಕನಿಗೆ ಪಾನ್‍ಕ್ರಿಯಾಸ್ಟಿಕ್ ಜೆಜಾಸ್ಟಮಿ ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ಹೇಳಿದ್ದರು. ಆದರೆ, ಆರೋಗ್ಯದಲ್ಲಿ ಚೇತರಿಕೆ ಕಾಣದಿದ್ದರಿಂದ, ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು ಎಂದು ವಿಜಯ ಅವರ ತಂದೆ ಮೃತ್ಯುಂಜಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಅಲ್ಲಿನ ವೈದ್ಯರು, ವಾಣಿ ವಿಲಾಸ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಎರಡು ವಾರದಿಂದ ಅಲ್ಲೇ ಚಿಕಿತ್ಸೆ ಕೊಡಿಸುತ್ತಿದ್ದೆವು. ಮೂರು ದಿನದ ಹಿಂದೆ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದ ವೈದ್ಯರು, ಆತನ ಸ್ಥಿತಿ ಗಂಭೀರವಾಗಿರುವುದರಿಂದ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದಿದ್ದರು. ಅಲ್ಲದೆ, ಹೆಚ್ಚೆಂದರೆ ಎರಡು ದಿನ ಬದುಕುಬಹುದು ಎಂದಿದ್ದರು' ಎಂದು ಹೇಳಿದರು.

ಊರಿನಲ್ಲಿ ಎಲ್ಲರೂ ದೀಪಾವಳಿ ಸಂಭ್ರಮದಲ್ಲಿದ್ದಾರೆ. ಈಗ ನನ್ನ ಮಗನ ಶವವನ್ನು ಊರಿಗೆ ತೆಗೆದುಕೊಂಡು ಹೋದರೆ, ಅವರ ಸಂಭ್ರಮಕ್ಕೆ ಭಂಗ ತಂದಂತಾಗುತ್ತದೆ. ಅದಕ್ಕಾಗಿ, ಇಲ್ಲಿಯೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದೇನೆ ಎಂದು ಕಣ್ಣೀರಿಟ್ಟರು. ಮೃತ್ಯುಂಜಯನ ತಾಯಿಗೆ ಅಂಧರು.

ಘಟನೆಗೆ ಸಂಬಂಧಿಸಿದಂತೆ ಹಾನಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈವರೆಗೆ ಮೃತ್ಯುಂಜಯನ ಮೇಲೆಹಲ್ಲೆ ನಡೆಸಿದವಾರ್ಡನ್‌ ಶ್ರವಣಕುಮಾರನವಿಚಾರಣೆಯನ್ನೂ ಪೊಲೀಸರು ನಡೆಸಿಲ್ಲ. ಹಾಸ್ಟೆಲ್‌ ಸಿಬ್ಬಂದಿಯೂ ಬಾಲಕನನ್ನು ಆಸ್ಪತ್ರೆಗೆ ಬಂದು ನೋಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.