ADVERTISEMENT

ನೀರು ಸಂರಕ್ಷಿಸದಿದ್ದರೆ ಭವಿಷ್ಯದಲ್ಲಿ ಆಪತ್ತು

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 4:25 IST
Last Updated 21 ಮಾರ್ಚ್ 2023, 4:25 IST
ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ‘ಸಿವಿಲ್ ಇಂಜಿನಿಯರಿಂಗ್‌’ ವಿಭಾಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ನೀರಾವರಿ ನಿರ್ವಹಣೆ ಮತ್ತು ಜಲಮೂಲಗಳ ಸಂರಕ್ಷಣೆ’ ಉಪನ್ಯಾಸ ಕಾರ್ಯಾಗಾರವನ್ನು ಸಸಿಗೆ ನೀರು ಹಾಕುವ ಮೂಲಕ ಗಣ್ಯರು ಉದ್ಘಾಟಿಸಿದರು
ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ‘ಸಿವಿಲ್ ಇಂಜಿನಿಯರಿಂಗ್‌’ ವಿಭಾಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ನೀರಾವರಿ ನಿರ್ವಹಣೆ ಮತ್ತು ಜಲಮೂಲಗಳ ಸಂರಕ್ಷಣೆ’ ಉಪನ್ಯಾಸ ಕಾರ್ಯಾಗಾರವನ್ನು ಸಸಿಗೆ ನೀರು ಹಾಕುವ ಮೂಲಕ ಗಣ್ಯರು ಉದ್ಘಾಟಿಸಿದರು   

ಹುಬ್ಬಳ್ಳಿ: ‘ಪ್ರತಿಯೊಂದು ಜೀವಿಗೂ ನೀರು ಅತ್ಯವಶ್ಯಕ. ಆದರೆ, ಸಂರಕ್ಷಣೆ ಕೊರತೆಯಿಂದ ಕುಡಿಯುವ ನೀರಿಗಾಗಿ ಎಲ್ಲೆಡೆ ಹಾಹಾಕಾರ ಶುರುವಾಗಿದೆ. ಮುಂದಿನ ದಿನಗಳಲ್ಲಿ ನೀರಿಗಾಗಿ ಸಂಘರ್ಷಗಳು ನಡೆದರೂ ಅಚ್ಚರಿಯಿಲ್ಲ’ ಎಂದು ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಹೇಳಿದರು.

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯ ಸಹಕಾರದಲ್ಲಿ ನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ‘ಸಿವಿಲ್ ಇಂಜಿನಿಯರಿಂಗ್‌’ ವಿಭಾಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ನೀರಾವರಿ ನಿರ್ವಹಣೆ ಮತ್ತು ಜಲಮೂಲಗಳ ಸಂರಕ್ಷಣೆ’ ಕುರಿತ ಉಪನ್ಯಾಸ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ನೀರಿಲ್ಲದೆ ಬದುಕಿಲ್ಲ. ಜನ ನೀರಿನ ಮಹತ್ವ ಅರಿಯದೆ ಪೋಲು ಮಾಡುತ್ತಿರುವುದೇ ಅಭಾವಕ್ಕೆ ಕಾರಣವಾಗುತ್ತಿದೆ. ನೈಸರ್ಗಿಕ ಸಂಪನ್ಮೂಲವಾದ ನೀರನ್ನು ಶಿಸ್ತಿನಿಂದ ಬಳಕೆ ಮಾಡಬೇಕು. ಜಲ ಸಾಕ್ಷರತೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಮನುಷ್ಯ ವೈಯಕ್ತಿಕ ಹಿತಾಸಕ್ತಿಗಾಗಿ ನದಿ, ಕೆರೆಗಳನ್ನು ಹಾಳು ಮಾಡುತ್ತಿದ್ದಾನೆ. ಹಣ ಕೊಟ್ಟು ನೀರು ಪಡೆಯುವ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಕೃಷಿ ಭೂಮಿಗೆ ನೀರಿಲ್ಲದೆ ನಷ್ಟ ಅನುಭವಿಸಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ನೀರನ್ನು ಮಿತವಾಗಿ ಬಳಸುವ ಮೂಲಕ ರಕ್ಷಿಸಬೇಕಿದೆ ಎಂದು ಹೇಳಿದರು.

’ಯುವಕರು ದೇಶದ ಭವಿಷ್ಯ. ಮೇರಾ ಭಾರತ್ ಮಹಾನ್ ಎಂಬುವುದರ ಜೊತೆಗೆ ದೇಶಕ್ಕಾಗಿ ನಾವು ಏನು ಮಾಡಬೇಕು? ಪರಿಸರಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಸಹ ಪ್ರಾಧ್ಯಾಪಕ ಹನುಮಂತಪ್ಪ ಎನ್‌. ಮಾತನಾಡಿ, ‘ದೇಶದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ನೀರಿನ ಕೊರತೆ ಎದುರಾಗಿದೆ. ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಜಲಮೂಲ ಸಂರಕ್ಷಣೆಗೆ ಮುಂದಾಗಬೇಕಿದೆ. ನೀರಿನ ಕುರಿತು ಆಯೋಜಿಸುವ ಜಾಗೃತಿ ಕಾರ್ಯಕ್ರಮಗಳು ಹೆಸರಿಗಷ್ಟೆ ಸೀಮಿತವಾಗದೆ, ಉದ್ದೇಶ ಈಡೇರಬೇಕು. ಈ ನಿಟ್ಟಿನಲ್ಲಿ ಯುವ ಸಮುದಾಯ ಹೆಚ್ಚು ಸಕ್ರಿಯರಾಗಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ಹನಿ ನೀರಿಗೂ ಪರದಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ವಾಲ್ಮಿಯ ಸಹ ಪ್ರಾಧ್ಯಾಪಕ ಬಸವರಾಜ ಪೂಜಾರ, ಸಮಾಲೋಚಕ ಡಿ.ಎಸ್. ಮದ್ಲಿ, ವಿಜ್ಞಾನಿ ಡಾ. ವೆಂಕಟೇಶ, ಸಹ ಪ್ರಾಧ್ಯಾಪಕರಾದ ಪ್ರೇಮಾ ಮಳಲಿ, ವಿನಾಯಕ ನಾಯ್ಕರ್ ಉಪನ್ಯಾಸ ನೀಡಿದರು. ಪ್ರಾಧ್ಯಾಪಕ ಭೀಮ ನಾಯ್ಕ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ನಿರ್ದೇಶಕ ಬಿ.ಎಸ್‌. ಅನಾಮಿ, ಸಿವಿಲ್‌ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಂ.ವಿ. ಚಿತವಾಡಗಿ ಇದ್ದರು.

ಕೋಟ್: ನೈಸರ್ಗಿಕ ಮೂಲಗಳಾದ ನದಿ, ಕೆರೆಗಳ ಸಂರಕ್ಷಣೆಯಾಗುತ್ತಿಲ್ಲ. ಇರುವ ನೀರು ಕೂಡ ಸದ್ಭಳಕೆಯಾಗುತ್ತಿಲ್ಲ. ನೀರಿನ ವ್ಯಾಪಾರೀಕರಣ ನಡೆಯುತ್ತಿದೆ
– ಡಾ. ರಾಜೇಂದ್ರ ಪೋದ್ದಾರ, ವಾಲ್ಮಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.