ADVERTISEMENT

ರೈತನ ಉಸ್ತು‌ವಾರಿಯಲ್ಲಿಯೇ ಗಂಗಾಕಲ್ಯಾಣ ಅನುಷ್ಠಾನ: ರಘು ಕೌಟಿಲ್ಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 8:34 IST
Last Updated 14 ಮಾರ್ಚ್ 2021, 8:34 IST
ಹುಬ್ಬಳ್ಳಿಯಲ್ಲಿ ಭಾನುವಾರ  ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ರಘು ಕೌಟಿಲ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಭಾನುವಾರ  ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ರಘು ಕೌಟಿಲ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಹುಬ್ಬಳ್ಳಿ: ಸಣ್ಣ ಹಿಡುವಳಿ ಹೊಂದಿರುವ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಗಂಗಾ‌ ಕಲ್ಯಾಣ ಯೋಜನೆ ಅನುಷ್ಠಾನಕ್ಕೆ ಒಬ್ಬನೇ ಗುತ್ತಿಗೆದಾರರನ್ನು ನೇಮಿಸುವ ಬದಲು, ನೋಂದಾಯಿತ ಹಲವು ಕಂಪನಿಗಳ ಹೆಸರನ್ನು ಸೂಚಿಸಲಾಗುವುದು. ರೈತರು ತಾವು ಆಯ್ಕೆ ಮಾಡಿಕೊಳ್ಳುವ ಕಂಪನಿಯಿಂದಲೇ ಕೊಳವೆ ಬಾವಿ ಹಾಕಿಸಿಕೊಳ್ಳಬಹುದು ಎಂದು ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ರಘು ಕೌಟಿಲ್ಯ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಗಂಗಾಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವ ಕಾರಣ ಸರ್ಕಾರ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ಕೊಳವೆ ಬಾವಿ, ಮೋಟಾರ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ವಿವಿಧ ಕಂಪನಿಗಳಿಗೆ ಟೆಂಡರ್ ನೀಡುವ ಬದಲು, ಒಂದೇ ಕಂಪನಿಗೆ ಈ ಮೂರು ಕಾರ್ಯ ನಿರ್ವಹಿಸುವ ಹೊಣೆ ನೀಡಲಾಗುವುದು. ಗುಣಮಟ್ಟ ಹಾಗೂ ಪಾರದರ್ಶಕತೆಯಿಂದ ಯೋಜನೆ ಅನುಷ್ಠಾನ ಮಾಡಲಾಗುವುದು’ ಎಂದು ತಿಳಿಸಿದರು.

‘ನಿಗಮದ ಯೋಜನೆಗಳ ಬಗ್ಗೆ ಬಹಳಷ್ಟು ಜನಕ್ಕೆ ಮಾಹಿತಿ ಇಲ್ಲ. ಪ್ರಚಾರದ ಕೊರತೆಯಿಂದಾಗಿ ಹೀಗಾಗಿದ್ದು, ಮುಂದಿನ ದಿನಗಳಲ್ಲಿ ಪ್ರಚಾರಕ್ಕೆ ಒತ್ತು ಕೊಡಲಾಗುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಎಲ್ಲಾ ಜಿಲ್ಲಾ ಕಚೇರಿಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿ ಅದರ ಸಂಪರ್ಕವನ್ನು ಕೇಂದ್ರ ಕಚೇರಿಗೆ ನೀಡಲಾಗುವುದು. ಅನಗತ್ಯವಾಗಿ ವ್ಯಕ್ತಿಗಳ ಓಡಾಟಕ್ಕೂ ಕಡಿವಾಣ ಹಾಕಲಾಗುವುದು’ ಎಂದರು.

ADVERTISEMENT

‘ಪ್ರಧಾನ ಮಂತ್ರಿ ಕೌಶಲ ಭಾರತ ಯೋಜನೆಗೆ ನಿಗಮವು ಚಿಮ್ಮು ಹಲಗೆಯಂತೆ ಕಾರ್ಯನಿರ್ವಹಿಸಲಿದೆ. ಪ್ರತಿ ತಿಂಗಳು ಕನಿಷ್ಠ 100 ಯುವಕರಿಗೆ ವೃತ್ತಿ ಕಸಬು ಆಧರಿಸಿ ಕೌಶಲ ತರಬೇತಿ ನೀಡಿ, ಸೌಲ ಸೌಲಭ್ಯ ಒದಗಿಸಲಾಗುವುದು. ಧಾರವಾಡ ಜಿಲ್ಲೆಯಲ್ಲಿ 2013ರಿಂದ ಇಲ್ಲಿಯವರೆಗೆ ನಿಗಮದ ವಿವಿಧ ಯೋಜನೆಗಳ ಅಡಿ 8,637 ಫಲಾನುಭವಿಗಳಿಗೆ ₹43.56 ಕೋಟಿ ಸಾಲ ನೀಡಲಾಗಿದೆ’ ಎಂದರು.

‘ನಿಗಮದಿಂದ ರಿಯಾಯಿತಿ ಸಹಾಯಧನ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ರಾಜ್ಯದಾದ್ಯಂತ ₹400 ಕೋಟಿ ಸಾಲ ಫಲಾನುಭವಿಗಳಿಂದ ಬರುವುದು ಬಾಕಿಯಿದೆ. ಫಲಾನುಭವಿಗಳು ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದರೆ ನಿಗಮಕ್ಕೆ ಹೆಚ್ಚಿನ ಕೆಲಸ ಮಾಡಲು ಚೈತನ್ಯ ಬರುತ್ತದೆ. ಮುಂದಿನ ವಾರದಿಂದ ಸ್ವಯಂಪ್ರೇರಿತ ಸಾಲ ಮರುಪಾವತಿ ಅಭಿಯಾನ ಆರಂಭಿಸಲಾಗುವುದು. ಆಗಲೂ ಸಾಲ ಕೊಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಹಿಂದುಳಿದ ವರ್ಗಗಳ ಮುಖಂಡರುರಾದ ರವೀಂದ್ರ ದಂಡಿನ, ಸತೀಶ್ ಶೇಜ್ವಾಡಕರ್‌, ಬಸವರಾಜ ಬೆಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.