ADVERTISEMENT

‘ಕ್ರೀಡಾ ಗ್ರಾಮದಿಂದ ಜಿಲ್ಲೆಯ ಘನತೆ ಹೆಚ್ಚಳ’

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 16:24 IST
Last Updated 25 ಡಿಸೆಂಬರ್ 2018, 16:24 IST
ಹುಬ್ಬಳ್ಳಿಯಲ್ಲಿ ಸೋಮವಾರ ಆ್ಯಕ್ಸಸ್‌ ಕ್ರೀಡಾಗ್ರಾಮ ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಶಾಸಕ ಜಗದೀಶ ಶೆಟ್ಟರ್‌ ಚಾಲನೆ ನೀಡಿದರು
ಹುಬ್ಬಳ್ಳಿಯಲ್ಲಿ ಸೋಮವಾರ ಆ್ಯಕ್ಸಸ್‌ ಕ್ರೀಡಾಗ್ರಾಮ ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಶಾಸಕ ಜಗದೀಶ ಶೆಟ್ಟರ್‌ ಚಾಲನೆ ನೀಡಿದರು   

ಹುಬ್ಬಳ್ಳಿ:‌ ರಿಯಲ್‌ ಎಸ್ಟೇಟ್‌ ಕೆಲಸದಲ್ಲಿ ತೊಡಗಿರುವವರು ಲಾಭದ ಲೆಕ್ಕಾಚಾರ ಹೊಂದಿರುತ್ತಾರೆ. ಆದರೆ, ಪ್ರಕಾಶ ಪಾಟೀಲ ಕ್ರೀಡಾಪಟುಗಳ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆ್ಯಕ್ಸಸ್‌ ಕ್ರೀಡಾಗ್ರಾಮ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ಸೋಮವಾರ ನಗರದಲ್ಲಿ ನಡೆದ ಕ್ರೀಡಾಗ್ರಾಮ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಧಾರವಾಡ ಜಿಲ್ಲೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳು ಇದ್ದಾರೆ. ಅಭ್ಯಾಸ ನಡೆಸಲು ಈ ಕ್ರೀಡಾಗ್ರಾಮ ನೆರವಾಗಲಿದೆ. ಇದರಿಂದ ಜಿಲ್ಲೆಯ ಗೌರವ ಹೆಚ್ಚಾಗುತ್ತದೆ’ ಎಂದರು.

‘ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ತರಬೇತಿ ನೀಡಲು ಕ್ರೀಡಾಗ್ರಾಮ ನಿರ್ಮಾಣವಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ನೆರವು ನೀಡಬೇಕು. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಇದನ್ನು ಅಧಿಕಾರಿಗಳು ತಡೆಯಬೇಕು’ ಎಂದರು.

ADVERTISEMENT

ಆ್ಯಕ್ಸಸ್‌ ಡವಲಪರ್ಸ್‌ ಕುಸಗಲ್‌ ರಸ್ತೆಯಲ್ಲಿ ಮೂರು ಏಕರೆ ಪ್ರದೇಶದಲ್ಲಿ ಕ್ರೀಡಾಗ್ರಾಮ ನಿರ್ಮಿಸಲಿದೆ. ಬ್ಯಾಡ್ಮಿಂಟನ್‌, ಸ್ಕ್ವಾಷ್‌, ಟೇಬಲ್‌ ಟೆನಿಸ್‌, ಬಿಲಿಯರ್ಡ್ಸ್‌, ಜಿಮ್ನಾಸ್ಟಿಕ್‌, ಕುಸ್ತಿ, ಕೇರಮ್‌, ಫುಟ್‌ಬಾಲ್‌, ಈಜುಕೊಳ ಹೀಗೆ ಎಲ್ಲ ಕ್ರೀಡೆಗಳಿಗೂ ತರಬೇತಿ ನೀಡಲಾಗುತ್ತದೆ.

ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಹುಬ್ಬಳ್ಳಿ ಉತ್ತರ ವಲಯದ ಸಹಾಯಕ ಕಮಿಷನರ್ ಎಚ್‌.ಕೆ. ಪಠಾಣ್‌, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಧಾರವಾಡ ವಲಯದ ನಿಮಂತ್ರಕ ಬಾಬಾ ಭೂಸದ, ಬೆಂಗಳೂರು ವಿಶೇಷ ತಹಶೀಲ್ದಾರ್‌ ಸತ್ಯಭಾಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ, ಪ್ರಕಾಶ ಪಾಟೀಲ, ರಜನಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.