ADVERTISEMENT

ಮತ್ತಣ್ಣನವರ ವಿರುದ್ಧ ಕ್ರಮಕ್ಕೆ ಒತ್ತಾಯ

ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಆಗ್ರಹ, ಡಿ.ಸಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 10:18 IST
Last Updated 9 ಡಿಸೆಂಬರ್ 2020, 10:18 IST

ಹುಬ್ಬಳ್ಳಿ: ನಗರದ ವೀರಾಪುರ ಓಣಿಯಲ್ಲಿ ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಲ್ಯಾಪ್‌ಟಾಪ್‌ ವಿತರಣೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಅನಧಿಕೃತವಾಗಿ ಮಾತನಾಡಿ ಪರಿಶಿಷ್ಟ ಜಾತಿಯ ಶಾಸಕ ಪ್ರಸಾದ ಅಬ್ಬಯ್ಯ ಅವರನ್ನು ಅವಮಾನ ಮಾಡಿದ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಒತ್ತಾಯಿಸಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೇನಾದ ರಾಜ್ಯ ಘಟಕದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ‘ಆಯಾ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮದಲ್ಲಿ ಆಯಾ ಕ್ಷೇತ್ರದ ಶಾಸಕರು ಅಧ್ಯಕ್ಷತೆ ವಹಿಸುವುದು ನಿಯಮ. ಅದರಂತೆ ಅಬ್ಬಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಭಾಷಣ ಆರಂಭಿಸಿದಾಗ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಮತ್ತು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಸಮ್ಮುಖದಲ್ಲಿ ಅಬ್ಬಯ್ಯ ಅವರ ಭಾಷಣಕ್ಕೆ ಮುತ್ತಣ್ಣನವರ ಅಡ್ಡಿಪಡಿಸಿದ್ದಾರೆ. ವೈಯಕ್ತಿಕ ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರಿ ಕಾರ್ಯಕ್ರಮದಲ್ಲಿ ಮಾನಹಾನಿ ಮಾಡಿದ್ದಾರೆ. ಆದ್ದರಿಂದ ಮುತ್ತಣ್ಣನವರ ವಿರುದ್ಧ ಈ ತಿಂಗಳ ಅಂತ್ಯದೊಳಗೆ ಜಿಲ್ಲಾಧಿಕಾರಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಿತರಕ್ಷಣಾ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳು ಸರ್ಕಾರಿ ಕಾರ್ಯಕ್ರಮದಲ್ಲಿ ಅನಧಿಕೃತವಾಗಿ ಮಾತನಾಡಿದ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಗಲೂ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವುದು. ಒಂದು ವೇಳೆ ಕ್ರಮ ಕೈಗೊಂಡರೆ ಅದನ್ನು ಎಲ್ಲರಿಗೂ ತಿಳಿಸಬೇಕು. ಹಿತರಕ್ಷಣಾ ಸಮಿತಿ ಮುಂದಿನ ಸಭೆಯಲ್ಲಿ ಇದರ ಬಗ್ಗೆ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಮೀಸಲು ಕ್ಷೇತ್ರದ ಶಾಸಕರನ್ನು ಬಹಿರಂಗವಾಗಿ ಅವಮಾನಿಸಲಾಗಿದೆ. ಪರಿಶಿಷ್ಟ ಜಾತಿಯ ಶಾಸಕರ ಸ್ಥಿತಿಯೇ ಹೀಗಾದರೆ; ಹಿಂದುಳಿದ ಸಮಾಜದವರ ಜನಸಾಮಾನ್ಯರ ಪಾಡೇನು’ ಎಂದು ಪ್ರಶ್ನಿಸಿದರು.

ಮಹಾಮಂಡಳದ ಪ್ರಮುಖರಾದ ಗಣೇಶ ಟಗರಗುಂಟಿ, ಪ್ರಭು ಪ್ರಭಾಕರ, ವೆಂಕಟೇಶ ಮೇಸ್ತಿ, ಕುಮಾರ ಕುಂದನಳ್ಳಿ, ಯಮನೂರ ಗುಡಿಹಾಳ, ಶ್ರೀನಿವಾಸ ಬೆಳದಡಿ, ಯಲ್ಲಪ್ಪ ಮಡಿವಾಳರ ಮತ್ತು ರೇವಣಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.