ADVERTISEMENT

ಧಾರವಾಡ | ಯೋಗ ಮಾಡುವುದರಿಂದ ತಾಳ್ಮೆ, ನೆಮ್ಮದಿ: ಡಾ. ಶೋಭಾ ಹೂಲಿಕಟ್ಟಿ ಅಭಿಮತ

ಯೋಗ ದಿನ: ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ ಸಂವಾದ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 16:32 IST
Last Updated 21 ಜೂನ್ 2022, 16:32 IST
ಡಾ. ಶೋಭಾ ಹೂಲಿಕಟ್ಟಿ
ಡಾ. ಶೋಭಾ ಹೂಲಿಕಟ್ಟಿ   

ಹುಬ್ಬಳ್ಳಿ: ‘ಯೋಗ ಮಾಡುವುದರಿಂದ ಶಾರೀರಿಕ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ. ಅಲ್ಲದೆ, ಒತ್ತಡದ ಜೀವನದಲ್ಲಿ ಯೋಗ ಅತ್ಯಂತ ಅವಶ್ಯ’ ಎಂದು ಯೋಗ ತರಬೇತುದಾರರಾದ ಡಾ. ಶೋಭಾ ಹೂಲಿಕಟ್ಟಿ ಹೇಳಿದರು.

ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮಂಗಳವಾರ ‘ಪ್ರಜಾವಾಣಿ’ ಆಯೋಜಿಸಿದ್ದ ಫೇಸ್‌ಬುಕ್‌ ಲೈವ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಮನಸ್ಸು ಹಾಗೂ ಶರೀರ ಬೇರೆ ಬೇರೆ ಯೋಚಿಸುತ್ತದೆ. ಯೋಗದಿಂದ ಎರಡನ್ನೂ ಒಗ್ಗೂಡಿಸಲು ಸಾಧ್ಯ. ಎರಡೂ ಕೇಂದ್ರೀಕೃತವಾದಾಗ ಬುದ್ಧಿ, ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಯೋಗದಲ್ಲಿ ಐದು ಹಂತಗಳನ್ನು ಗುರುತಿಸಲಾಗಿದೆ. ಶರೀರ, ಪ್ರಾಣ, ಮನಸ್ಸು ಹಾಗೂ ಬುದ್ಧಿ ನಾಲ್ಕು ಅಂಶಗಳಾಗಿವೆ. ಇವು ಉತ್ತಮವಾಗಿದ್ದರೆ ಐದನೇ ಹಂತವಾದ ಆನಂದದ ಸ್ಥಿತಿ ತಲುಪುತ್ತಾರೆ. ನಿರಂತರವಾಗಿ ಯೋಗದಲ್ಲಿ ತೊಡಗಿಸಿಕೊಳ್ಳುವುದರಿಂದ ಏಕಾಗ್ರತೆ ಮತ್ತು ತಾಳ್ಮೆ ಮೂಡುತ್ತದೆ. ಧ್ಯಾನ ಮಾಡುವುದರಿಂದ ನೆ‌ಮ್ಮದಿ ದೊರೆಯುತ್ತದೆ. ದೇಹದ ಒಳಗಿನ ಅಂಗಾಂಗಗಳ ಶುದ್ಧೀಕರಣ ಹಾಗೂ ಶಾರೀರಿಕ ಕ್ರಿಯೆಗಳು ಸುಗಮವಾಗಿ ನಡೆಯುತ್ತವೆ’ ಎಂದು ವಿವರಿಸಿದರು.

‘ಮೊದಲಿನಿಂದಲೂ ಮನುಷ್ಯ ಪ್ರಚೋದನೆಗೆ ಒಳಗಾಗುವುದು ಹೆಚ್ಚು. ಮಾನಸಿಕ ವಿಸ್ತಾರ ಹೆಚ್ಚಿದಂತೆ ಚಿಂತನೆಯ ವಿಧಾನವೂ ಬದಲಾಗಿದೆ. ಹೀಗಾಗಿ ಯೋಗದಲ್ಲಿ ಪ್ರಾಣವನ್ನು (ಉಸಿರಾಟ) ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ಮಹತ್ವ ನೀಡಲಾಗಿದೆ. ಇದರಿಂದ ತನ್ನಿಂದ ತಾನೇ ಮನಸ್ಸು ಶಾಂತವಾಗುತ್ತದೆ. ಶರೀರದ ಮೇಲೆ ನಂಬಿಕೆ ಮೂಡಿದರೆ ಬುದ್ಧಿಯೂಚುರುಕುಗೊಳ್ಳಲಿದೆ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಯೋಗದಿಂದ ಉದ್ಯೋಗ ಸೃಷ್ಟಿಯೂ ಆಗಿದೆ. ಯುವಕರು ಯೋಗ ಕಲಿತು ಇದನ್ನೇ ವೃತ್ತಿಯನ್ನಾಗಿಯೂ ಮಾಡಿಕೊಳ್ಳಬಹುದು. ಇದು ಎಲ್ಲರನ್ನೂ ಒಳಗೊಳ್ಳುವಿಕೆ ಹಂತ ತಲುಪಿದೆ. ಬದಲಾಗುತ್ತಿರುವ ಬದುಕಿನಲ್ಲಿ ಯುವಕರು ಯೋಗ ಅಳವಡಿಸಿಕೊಂಡರೆ ಉತ್ತಮ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.