‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ’ ಎಂಬ ಗಾದೆ ಮಾತಿನಂತೆ ಸಮಸ್ಯೆಗಳು ಹೇರಳವಾಗಿ ಬೆಳೆದು ಮರವಾದಾಗ ಪರಿಹರಿಸುವುದು ತುಂಬಾ ಕಷ್ಟ. ಆದರೆ ಆ ಸಮಸ್ಯೆ ಚಿಕ್ಕದಾದ ಸಸಿಯಾದಾಗ ತಪ್ಪು ದಾರಿಯಲ್ಲಿ ಬೆಳೆಯುತ್ತಿದ್ದರೇ ಅದನ್ನು ಬಾಗಿಸಿ, ಪೋಷಿಸಿ ಸರಿಪಡಿಸಬಹುದು. ಹಾಗೆಯೇ ವ್ಯಸನವು ಅತೀಯಾದಾಗ ಅತಿವೇಗವಾಗಿ ಹೊರ ಬರುವುದು ತುಂಬಾ ಕಷ್ಟ. ಮತ್ತು ಯಾವುದೇ ವ್ಯಸನವಾಗಲೀ ತತ್‌ಕ್ಷಣವಾಗಿ ಪೂರ್ಣ ಪ್ರಮಾಣದಲ್ಲಿ ಬಿಡಿಸಬಾರದು. ಇದರಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು. ಏಕೆಂದರೆ ವ್ಯಸನದ ಲಕ್ಷಣಗಳಿಗಿಂತ ತತ್‌ಕ್ಷಣವಾಗಿ ವ್ಯಸನವನ್ನು ಬಿಡಿಸಿದ ಲಕ್ಷಣಗಳು ತುಂಬಾ ತೀವ್ರತರವಾಗಿರುತ್ತವೆ. ಅದು ಮನಸ್ಸಿಗೆ ಅಷ್ಟೇ ಅಲ್ಲ; ದೇಹಕ್ಕೂ ಸಮಸ್ಯೆ ತಂದೊಡ್ಡಬಲ್ಲದು. ನಿಧಾನವಾಗಿ ವ್ಯಸನದ ಪ್ರಮಾಣವನ್ನು ದಿನದಿಂದ ದಿನಕ್ಕೆ ಕಡಿಮೆಗೊಳಿಸಿ ಕೊನೆಗೊಂದು ದಿನ ನಿಲ್ಲಿಸಬೇಕು.
ಇಂಟರ್‌ನೆಟ್ ವ್ಯಸನ ಕೂಡ ಹಾಗೆಯೇ. ತತ್‌ಕ್ಷಣವಾಗಿ ಬಿಡಿಸಬಾರದು ದಿನದಿಂದ ದಿನಕ್ಕೆ ಬಳಕೆಯ ಪ್ರಮಾಣವನ್ನು, ಸಮಯವನ್ನು ಕಡಿತಗೊಳಿಸಬೇಕು. ಹದಿಹರೆಯದವರಲ್ಲಿ ಮತ್ತು ಮಕ್ಕಳಲ್ಲಿ ಈ ವ್ಯಸನವನ್ನು ಕೂದಲಿನ ಎಳೆ ತೆಗೆದ ಹಾಗೆ ಸೂಕ್ಷ್ಮವಾಗಿ ಬಿಡಿಸಬೇಕು. ಏಕೆಂದರೆ ಕೆಲವೊಂದು ಬಾರಿ ಕಳ್ಳತನ ಅಥವಾ ಕದ್ದುಮುಚ್ಚಿ ಮಾಡಿಯಾದರು ಅದನ್ನು ಪಡೆಯಲು ಇಚ್ಚಿಸಿರುತ್ತಾರೆ. ಈ ವಯಸ್ಸಿನವರ ಮನಃಸ್ಥಿತಿ ಯಾವಾಗಲೂ ಚಂಚಲವಾಗಿರುತ್ತದೆ. ಸ್ವಂತ ತಂದೆ-ತಾಯಿಯ ಮಾತನ್ನು ಕೂಡ ಕೇಳುವುದಿಲ್ಲ. ಮನೆಯವರಿಗಿಂತಲೂ ಸ್ನೇಹಿತರ ಜೊತೆಗಿನ ಒಡನಾಟ ಹೆಚ್ಚಾಗಿರುತ್ತದೆ. ಮನಸ್ಸಿಗೆ ಏನು ತಿಳಿಯುತ್ತದೆಯೋ ಅದನ್ನು ಮಾಡಿ ತೀರುತ್ತಾರೆ. ಹಾಗಾಗಿ ಅತಿಯಾದ ನಿಯಂತ್ರಣವು ಕೆಲವೊಂದು ಸಲ ತಪ್ಪು ದಾರಿಗೆ ಹೋಗುವಂತೆ ನಾವೇ ಎಡೆ ಮಾಡಿ ಕೊಟ್ಟಂತಾಗುತ್ತದೆ.
ಹಾಗಾದರೇ ಇಂಟರ್‌ನೆಟ್ ವ್ಯಸನದಿಂದ ಹೊರಬರುವುದು ಹೇಗೆ? ಮುಖ್ಯವಾಗಿ ಮೂರು ವಿಧಾನಗಳಿಂದ ನೀವು ವ್ಯಸನ ಮುಕ್ತವಾಗಬಹುದು. 1. ಇಂಟರ್‌ನೆಟ್ ಬಳಕೆಯನ್ನು ನಿಯಂತ್ರಿಸುವುದು, 2. ಸಹಾಯ ಪಡೆಯುವುದು, 3. ಸಮಸ್ಯೆಗಳನ್ನು ಗುರುತಿಸುವುದು.
ಇಂಟರ್‌ನೆಟ್ ಬಳಕೆಯನ್ನು ನಿಯಂತ್ರಿಸುವುದು: ವೈಯಕ್ತಿಕವಾಗಿ ಅಭಿವೃದ್ಧಿಗೊಳುವುದು ಮತ್ತು ಇಂಟರ್‌ನೆಟ್ ವ್ಯಸನದಿಂದ ದೂರವಿರುವುದು. ವೈಯಕ್ತಿಕವಾಗಿ ಅಭಿವೃದ್ಧಿಯಾಗಲೂ ಸಂತೋಷವಾಗಿರಲು ಮತ್ತು ಅನುಭವಿಸಲು ಇತರೇ ಚಟುವಟಿಕೆಗಳನ್ನು ಪಟ್ಟಿ ಮಾಡಿರಿ. ಅವುಗಳಲ್ಲೇ ಹೆಚ್ಚು ಪಾಲ್ಗೊಳ್ಳಿರಿ. ಇದು ಆನ್‌ಲೈನ್‌ನಲ್ಲಿ ಖರ್ಚುಮಾಡುತ್ತಿರುವ ಸಮಯವನ್ನು ಉಳಿಸಬಹುದು ಹಾಗೂ ನೀವು ಕೆಟ್ಟದ್ದನ್ನು ಅನುಭವಿಸಲು ಇದು ಉದ್ದೇಶಿಸುವುದಿಲ್ಲ. ಆದರೆ ಇಂಟರ್‌ನೆಟ್ ಬಳಕೆಯ ಸಮಯವನ್ನು ಕಡಿಮೆ ಮಾಡುತ್ತದೆ.
ಸೂಕ್ತ ಸಮಯಕ್ಕಾಗಿ ನಿರ್ದಿಷ್ಟ ಗುರಿಗಳನ್ನು ಅಳವಡಿಸಿಕೊಳ್ಳುವುದು. ದೈನಂದಿನ ಚಟುವಟಿಕೆಗಳಾದ ನಿದ್ರೆ, ವ್ಯಾಯಾಮ, ಕೆಲಸ, ಅಧ್ಯಯನ ಮತ್ತು ಸ್ನೇಹಿತರು ಅಥವಾ ಕುಟುಂಬದೊಂದಿಗೆ ಕಳೆಯುವ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದು. ದೇವರ ಪ್ರಾರ್ಥನೆಗೆ ಅಥವಾ ಪೂಜಿಸಲು ಒಂದು ವಾರಕ್ಕೆ ಎಷ್ಟು ಸಮಯವನ್ನು ಮಿಸಲಿಡಲಿದ್ದೀರಿ ಎಂದು ನಿರ್ಧರಿಸಿ ಮತ್ತು ಅಗತ್ಯ ಸಮಯವನ್ನು ದೇವರ ಪ್ರಾರ್ಥನೆಗೆ ಬಳಸಿಕೊಳ್ಳಿರಿ. ನೀವು ವಾರಕ್ಕೆ ಎಷ್ಟು ಸಮಯ ಕಳೆದುಕೊಂಡಿರುವಿರಿ ಎಂದು ಲೆಕ್ಕ ಹಾಕಿರಿ. ವಿಶ್ರಾಂತಿ ಮತ್ತು ವೈಯಕ್ತಿಕ ಬಳಕೆಗಾಗಿ ಎಷ್ಟು ಸಮಯವನ್ನು ಬಿಡಬೇಕೆಂದು ಪರಿಗಣಿಸಿ ಉಳಿದ ಸಮಯವನ್ನು ವೈಯಕ್ತಿಕ ಇಂಟರ್‌ನೆಟ್ ಬಳಕೆಗಾಗಿ ಸೂಕ್ತವಾದ ಸಮಯವನ್ನು ನಿಗದಿಪಡಿಸಿರಿ. ಇದರಿಂದ ಆನ್‌ಲೈನ್‌ನಲ್ಲಿ ಖರ್ಚುಮಾಡುವ ಸಮಯವನ್ನು ಮುಂದೂಡಬಹುದು ಅಥವಾ ಇತರೇ ಅವಶ್ಯಕತೆಗಳಿಗೆ ಬಳಸಬಹುದು.
ಹೊಸ ವೇಳಾಪಟ್ಟಿಯನ್ನು ಸಿದ್ದಪಡಿಸುವುದು: ಇಂಟರ್‌ನೆಟ್ ಬಳಕೆಯಿಂದ ನಿಮ್ಮ ಸಮಯ ಹೆಚ್ಚು ವ್ಯರ್ಥವಾಗುತ್ತಿದ್ದರೆ ಪರ್ಯಾಯ ಚಟುವಟಿಕೆಗಳೊಂದಿಗೆ ನಿಮ್ಮ ವೇಳಾಪಟ್ಟಿಯನ್ನು ತುಂಬುವ ಮೂಲಕ ಸಮಸ್ಯೆಗಳನ್ನು ನಿರ್ಬಂಧಿಸಬಹುದು. ನೀವು ಇಂಟರ್‌ನೆಟ್ ಬಳಸುತ್ತಿರುವಾಗ ಯಾರಾದರೂ ಅಥವಾ ಏನಾದರೂ ಅಡಚಣೆ ಉಂಟು ಮಾಡುತ್ತಿದ್ದರೆ ಅದು ಬಹಳ ಪರಿಣಾಮಕಾರಿಯಾಗಬಲ್ಲದು. ಮೊದಲಿಗೆ ನಿಮಗೆ ಕಷ್ಟ ಮತ್ತು ಒತ್ತಡ ಆಗಬಹುದು. ಆದರೆ ಇಂಟರ್‌ನೆಟ್ ಬಳಕೆಯನ್ನು ನಿಯಂತ್ರಿಸುವುದಕ್ಕೆ ಬಹಳ ಉಪಯಕಾರಿಯಾಗಬಹುದು. ನಿಮ್ಮ ಇಂಟರ್‌ನೆಟ್ ಬಳಕೆಯಿಂದ ಹಿಂತಿರುಗಲು ನೀವು ಬಳಸಬಹುದಾದ ವಿವಿಧ ಉಪಯೋಗಿತ ಆ್ಯಪ್‌ಗಳು ಲಭ್ಯವಿವೆ. ಇವುಗಳು ಪೂರ್ವ ನಿರ್ಧರಿತ ಸಮಯಕ್ಕೆ ಇಂಟರ್‌ನೆಟ್ ಸಾಮರ್ಥ್ಯವನ್ನು ನಿಲ್ಲಿಸುತ್ತವೆ ಅಂತಹ ಆ್ಯಪ್‌ಗಳನ್ನು ಬಳಸಿರಿ.
ಆದ್ಯತೆ ಅಥವಾ ಪ್ರಾಶಸ್ತ್ಯಗಳನ್ನು ಪಟ್ಟಿ ಮಾಡಿರಿ: ಆನ್‌ಲೈನ್ ಚಟುವಟಿಕೆಗಳು ನಿಮ್ಮ ದೃಷ್ಟಿಕೋನದಿಂದ ಜೀವನದಲ್ಲಿ ಉಳಿದಂತೆ ಎಂದು ಹೋಲಿಸಿರಿ ಮತ್ತು ನೀವು ಬಯಸುವ ಆಪ್‌ಲೈನ್ ಚಟುವಟಿಕೆಗಳನ್ನು ಅದ್ಯತೆಯ ಮೇರೆಗೆ ಪಟ್ಟಿ ಮಾಡಿರಿ. ಸಮಸ್ಯೆಯಾಗುವ ಅಪ್ಲಿಕೇಶನ್, ವೆಬ್‌ಸೈಟ್‌ಗಳಿಂದ ದೂರವಿರಿ.
ಜ್ಞಾಪನ ಅಥವಾ ನೆನಪಿಸುವ ಪತ್ರಗಳನ್ನು ಬಳಸಿರಿ. ದಿನನಿತ್ಯ ವ್ಯಾಯಾಮವು ನಿಮ್ಮನ್ನು ಆರೋಗ್ಯವಾಗಿಯೂ ಮನಸ್ಸು ಹಗುರವಾಗಿಡಲು ಮತ್ತು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಇಂಟರ್‌ನೆಟ್‌ನಿಂದ ದೂರವಿಡಲು ಸಹಾಯ ಮಾಡುತ್ತದೆ.
ಸಹಾಯ ಪಡೆಯುವುದು
ನಿಮ್ಮನ್ನು ಬೆಂಬಲಿಸುವ ಸ್ನೇಹಿತರನ್ನು ಮತ್ತು ಸಮುದಾಯವನ್ನು ಹುಡುಕಿರಿ. ನಿಮ್ಮ ಸಮಸ್ಯೆಯನ್ನು ಬೆಂಬಲಿಸುವ ಸ್ನೇಹಿತರನ್ನು, ಇಂಟರ್‌ನೆಟ್ ವ್ಯಸನ ಮುಕ್ತದ ಮಾಹಿತಿಯನ್ನು ನೀಡುವ ಕೇಂದ್ರಗಳನ್ನು, ಇಂಟರ್‌ನೆಟ್ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವ ಸಂಸ್ಥೆಗಳನ್ನು ಸಂಪರ್ಕಿಸಿರಿ. ಆಪ್ತ ಸಲಹೆಗಾರರನ್ನು ಭೇಟಿ ಮಾಡಿರಿ. ಇಂಟರ್‌ನೆಟ್ ವ್ಯಸನಿಯಾಗಲು ಕಾರಣವಾದ ಅಂಶಗಳನ್ನು ಅಥವಾ ಪ್ರೇರಣೆಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ನಿಮ್ಮ ಸಮಸ್ಯೆಯನ್ನು ನಿವಾರಿಸಲು ಇಂಟರ್‌ನೆಟ್ ವ್ಯಸನದ ಚಿಕಿತ್ಸೆಯಲ್ಲಿ ತರಬೇತಿ ಪಡೆದ ವೃತ್ತಿಪರ ತಜ್ಞರನ್ನು ಭೇಟಿ ಮಾಡಿರಿ. ಇಂಟರ್‌ನೆಟ್ ವ್ಯಸನವು ನಿಮಗೆ ಮತ್ತು ಕುಟುಂಬದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಬಹುದು.
ಸಮಸ್ಯೆಗಳನ್ನು ಗುರುತಿಸುವುದು: ನೀವು ಆನ್‌ಲೈನ್‌ನಲ್ಲಿ ವ್ಯಯ ಮಾಡಿದ ಸಮಯದಿಂದ ನಿಮ್ಮ ಮನಃಸ್ಥಿತಿ ಅಥವಾ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರಬಹುದೇ ಎಂದು ಯೋಚಿಸಿ. ಇಂಟರ್‌ನೆಟ್ ಬಳಕೆಯಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತಿದೆಯೇ ಎಂಬುದರ ಚಿಹ್ನೆಗಳನ್ನು ವಿಕ್ಷಿಸಿರಿ. ಉದಾಹರಣೆ ತೂಕ ಹೆಚ್ಚಾಗುವುದು ಮತ್ತು ಕಡಿಮೆಯಾಗುವುದು. ನಿದ್ರಾಹೀನತೆ, ತಲೆನೋವು, ಬೆನ್ನುನೋವು, ಕಾರ್ಪೆಲ್ ಟನೇಲ್ ಸಿಂಡ್ರೋಮ್. ನೀವು ಆನ್‌ಲೈನ್‌ನಲ್ಲಿ ಕಳೆಯುವ ಸಮಯವನ್ನು ಪತ್ತೆ ಹಚ್ಚಿರಿ. ಆನ್‌ಲೈನ್ ಬಳಕೆಯಿಂದ ನಿಮ್ಮ ಸಂಬಂಧದ ಗುಣಮಟ್ಟ ಹದೆಗೆಟ್ಟಿದೆಯೇ ಎಂದು ಗುರುತಿಸಿ. ಇಂಟರ್‌ನೆಟ್ ವ್ಯಸನದಿಂದ ಹೊರಬರುವ ವಿಷಯ ಸುಲಭವಾಗಿದ್ದರೂ ಅನುಸರಿಸುವ ವಿಧಾನಗಳು ಕ್ಲಿಷ್ಟಕರವಾಗಿವೆ. ಬದಲಾವಣೆಯು ಎಂದಿಗೂ ಸುಲಭವಾಗಿರುವುದಿಲ್ಲ. ಆದರೆ ಇದು ವೈಯಕ್ತಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಂಪೂರ್ಣ ಅಗತ್ಯವಿದೆ. ಇಂಟರ್‌ನೆಟ್ ಉಪಯೋಗಿಸುವ ಪದ್ಧತಿಗಳನ್ನು ಬದಲಾಯಿಸುವುದರಿಂದ ನಿಮಗೆ ಕಷ್ಟವಾಗಬಹುದು. ಆದರೆ ಇಂದು ಕಳೆದುಕೊಂಡಿರುವ ಸಂಬಂಧಗಳು, ಕಳೆದುಹೋದ ಅವಕಾಶಗಳು ಮತ್ತು ಅವಾಸ್ತವಿಕ ವಿಷಾದದಿಂದ ಜೀವಿಸಿರುವಷ್ಟು ಕಷ್ಟವಾಗಿರುವುದಿಲ್ಲ. ಇಂಟರ್‌ನೆಟ್‌ಅನ್ನು ಜವಾಬ್ದಾರಿಯುತವಾಗಿ ಮತ್ತು ಮಿತವಾಗಿ ಬಳಸಿದಾಗ ಉಹಿಸಲಾಗದ ಮಾಹಿತಿಯೊಂದಿಗೆ ಉಪಯೋಗವಾಗಬಹುದು.
ಪೋಷಕರು ತಮ್ಮ ಮಕ್ಕಳಿಗೆ ತಾವೇ ಸುಲಭವಾಗಿ ವಿಡಿಯೊ ಗೇಮ್ಸ್, ವೆಬ್‌ಸೈಟ್, ಸಾಮಾಜಿಕ ಜಾಲಾತಾಣಗಳ ಪರಿಚಯ ಮಾಡಿಕೊಡುವುದೇ ಮಗುವಿನ ಆರೈಕೆ ಆಗಬಾರದು. ಅರಿಯದೆ ಮಾಡಿದ ಪಾಪ ಅರಿತಂದು ಪರಿಹಾರ ಎನ್ನುವ ಮಾತಿನಂತೆ ನಾವು ಮಾಡುತ್ತಿರುವ ತಪ್ಪು ನಮಗೆ ಅರಿವಾದರೆ ಯಾವುದೇ ವ್ಯಸನವಾಗಲಿ ಅದರಿಂದ ಸುಲಭವಾಗಿ ಹೊರಬರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.