ಹುಬ್ಬಳ್ಳಿ: ನಗರದ ಐಟಿ ಪಾರ್ಕ್‌ನ ಕೆಯುಡಿಎಫ್‌ಸಿ ಕಚೇರಿಯಲ್ಲಿ ಮಂಗಳವಾರ ನಡೆದ ಹು–ಧಾ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಲವು ಯೋಜನೆಗಳ ಕುರಿತು ಸಮರ್ಪಕ ಮಾಹಿತಿ ನೀಡದ ಪಾಲಿಕೆ ಆಯುಕ್ತರು ಸೇರಿ ಇತರ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತೀವ್ರ ತರಾಟೆಗೆ ತೆಗೆದುಕೊಂಡರು.
ನಿರಂತರ ನೀರು ಪೂರೈಕೆ ಯೋಜನೆ, ಭೂ ಬಾಡಿಗೆ (ಲೀಸ್) ಮೇಲೆ ನೀಡಿದ ಪಾಲಿಕೆಯ ಆಸ್ತಿ, ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗೆ ಬಳಕೆಯಾಗುವ ಡಿಸೇಲ್ ವೆಚ್ಚ, ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಕ್ಕೆ ಸೇರಿದ ಅಂಗವಿಕಲರ ಸಂಖ್ಯೆ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾದರು.
ಇದರಿಂದ ಕೋಪಗೊಂಡ ಸಚಿವ ಲಾಡ್, ‘ನಗರವನ್ನು ಹೇಗೆ ಅಭಿವೃದ್ಧಿ ಮಾಡುತ್ತೀರಿ? ಉನ್ನತ ವಿದ್ಯಾರ್ಹತೆ ಹೊಂದಿರುವ ನೀವು, ರಾಜಕಾರಣಿಗಳು ಓದಿಕೊಂಡಿರುವುದಿಲ್ಲ ಎಂದು ಹೇಳುತ್ತೀರಿ. ಆದರೆ, ನಿಮಗೆ ಗ್ರಾಮ ಪಂಚಾಯ್ತಿ ಮಟ್ಟದ ಅಧಿಕಾರಿಗಳಷ್ಟು ಸಹ ಬುದ್ಧಿ ಇಲ್ಲ ಎನಿಸುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವಿಷಯದ ಕುರಿತು ಆ. 20ರಂದು ಮತ್ತೊಮ್ಮೆ ಸಭೆ ನಡೆಸಲಾಗುವುದು. ಆಗಲಾದರೂ ಸಂಪೂರ್ಣ ಮಾಹಿತಿಯೊಂದಿಗೆ ಬರುತ್ತೀರೋ ಇಲ್ಲವೋ ನೋಡುತ್ತೇನೆ’ ಎಂದರು.
‘ಬೇರೆ ರಾಷ್ಟ್ರಗಳನ್ನು ಹೇಗೆ ಅಭಿವೃದ್ಧಿ ಪಡಿಸಲಾಗಿದೆ ಎನ್ನುವುದರ ಬಗ್ಗೆ ಅಧಿಕಾರಿಗಳು ಅಧ್ಯಯನ ನಡೆಸಿ, ಇಲ್ಲಿ ಕಾಮಗಾರಿ ನಡೆಸಬೇಕು. ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು. ಕೈಗಾರಿಕೋದ್ಯಮ ಮತ್ತು ವ್ಯಾಪಾರ ವಹಿವಾಟು ಹೆಚ್ಚಾದಾಗ ಮಾತ್ರ ನಗರಗಳು ಅಭಿವೃದ್ಧಿ ಹೊಂದುತ್ತವೆ. ಆ ನಿಟ್ಟಿನಲ್ಲಿ ಸಂಪನ್ಮೂಲಗಳ ಬಳಕೆಗೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು’ ಎಂದು ಹೇಳಿದರು.
‘ಕುಡಿಯುವ ನೀರು, ವಿದ್ಯುತ್, ಸಾರಿಗೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ನಗರ ಪ್ರದೇಶಗಳಲ್ಲಿನ ಸ್ಲಮ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಅಲ್ಲಿಯ ನಿವಾಸಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು. ಸರ್ಕಾರದ ಜಾಗಗಳ ಅತಿಕ್ರಮಣವಾಗಿರುವುದರ ಬಗ್ಗೆ ಪರಿಶೀಲನೆ ನಡೆಸಿ, ಅತಿಕ್ರಮಣ ಮಾಡಿಕೊಂಡಿದ್ದರೆ ನೋಟೀಸ್ ಜಾರಿ ಮಾಡಬೇಕು’ ಎಂದು ಸೂಚಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ರಾಮಪ್ಪ ಬಡಿಗೇರ, ಉಪ ಮೇಯರ್ ದುರ್ಗಮ್ಮ ಬಿಜವಾಡ, ವಿಪಕ್ಷ ನಾಯಕ ರಾಜಶೇಖರ ಕಮತಿ, ಪಾಲಿಕೆ ಸಭಾ ನಾಯಕ ವೀರಣ್ಣ ಸವಡಿ, ಆಯುಕ್ತ ಈಶ್ವರ ಉಳ್ಳಾಗಡ್ಡಿ, ಸ್ಮಾರ್ಟ್ ಸಿಟಿ ಎಂಡಿ ರುದ್ರೇಶ ಘಾಳಿ ಇದ್ದರು.
ನಿರಂತರ ನೀರು ಯೋಜನೆಯ ಕಾಮಗಾರಿಯನ್ನು ಗುತ್ತಿಗೆ ಪಡೆದ ಎಲ್ ಆ್ಯಂಡ್ ಟಿ ಕಂಪನಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇದನ್ನು ಎಲ್ ಆ್ಯಂಡ್ ಟಿ ಕಂಪನಿಗೆ ಕೊಟ್ಟಿದ್ದು ಸರ್ಕಾರದ ತಪ್ಪು ನಡೆಸಂತೋಷ ಲಾಡ್ ಜಿಲ್ಲಾ ಉಸ್ತುವಾರಿ ಸಚಿವ
ನೀಲನಕ್ಷೆ ಸಿದ್ಧಪಡಿಸಿ: ಲಾಡ್
‘ಮುಂದಿನ 15-20 ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಹೇಗಿರಬೇಕು ಎಂಬುದರ ಬಗ್ಗೆ ಪರಿಣಿತ ಸಂಸ್ಥೆಯಿಂದ ನೀಲನಕ್ಷೆ ತಯಾರಿಸಬೇಕು. ಹಸಿರು ವಲಯ ಎಲ್ಲಿರಬೇಕು ಅಂಡರ್ ಪಾಸ್ ನಿರ್ಮಾಣ ಸಂಚಾರ ದಟ್ಟಣೆ ನಿಯಂತ್ರಣ ಪಾರ್ಕಿಂಗ್ ವ್ಯವಸ್ಥೆ ಕೈಗಾರಿಕೆಗಳ ಸ್ಥಾಪನೆ ಬಗ್ಗೆ ಸಂಪೂರ್ಣ ಮಾಹಿತಿ ಅದರಲ್ಲಿರಬೇಕು’ ಎಂದು ಸಚಿವ ಸಂತೋಷ ಲಾಡ್ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
‘ಹು–ಧಾ ಮಹಾನಗರ ಪಾಲಿಕೆಗೆ ಕೊನೆಯ ಸ್ಥಾನ’
‘ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳು 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯ ಕಾಮಗಾರಿಗಳ ಕ್ರಿಯಾ ಯೋಜನೆಗೆ ಒಪ್ಪಿಗೆ ಪಡೆದಿವೆ. ಆದರೆ ಹು-ಧಾ ಮಹಾನಗರ ಪಾಲಿಕೆ 2023-24ನೇ ಸಾಲಿನ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಿಲ್ಲ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಸಭೆಯ ಗಮನಕ್ಕೆ ತಂದರು. ‘ಮಾನದಂಡಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಕ್ರಿಯಾ ಯೋಜನೆಯನ್ನು ವಾಪಸ್ ಕಳುಹಿಸಿದ್ದೆ. ಇಲ್ಲಿಯವರೆಗೂ ಪಾಲಿಕೆ ಅಧಿಕಾರಿಗಳು ಪುನಃ ಕಳುಹಿಸಿಲ್ಲ. ಪುನಃ ಕ್ರಿಯಾ ಯೋಜನೆ ತಯಾರಿಸಲು ನಾಲ್ಕು ತಿಂಗಳು ಬೇಕಾಗುತ್ತದೆಯೇ’ ಎಂದು ಅವರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.