ADVERTISEMENT

ವಿಜಯಯಾತ್ರೆಯಾಗಲಿರುವ ಜನಸಂಕಲ್ಪ ಯಾತ್ರೆ: ಸಿಎಂ ಬೊಮ್ಮಾಯಿ

ಜಗಳೂರಿನಲ್ಲಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 4:20 IST
Last Updated 24 ನವೆಂಬರ್ 2022, 4:20 IST
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೂವಿನ ಹಾರದಿಂದ ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೂವಿನ ಹಾರದಿಂದ ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ಜಗಳೂರು: ಜನಸಂಕಲ್ಪ ಯಾತ್ರೆಗೆ ಜನರಿಂದ ಸಿಗುತ್ತಿರುವ ಸ್ಪಂದನವನ್ನು ನೋಡಿದರೆ, ಬಿಜೆಪಿಯ ವಿಜಯಯಾತ್ರೆಯಾಗಿ ಬದಲಾಗುತ್ತಿರುವುದು ಕಂಡು ಬರುತ್ತಿದೆ. ಮತ್ತೆ ಕೇಂದ್ರದಲ್ಲೂ ರಾಜ್ಯದಲ್ಲೂ ಡಬಲ್‌ ಎಂಜಿನ್‌ ಸರ್ಕಾರ ಇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಗಳೂರು ಬಯಲು ಮಂದಿರದಲ್ಲಿ ಬುಧವಾರ ನಡೆದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ನ ಐದು ವರ್ಷಗಳ ಆಡಳಿತ ಮತ್ತು ಬಿಜೆಪಿಯ ಮೂರೂವರೆ ವರ್ಷಗಳ ಆಡಳಿತವನ್ನು ತುಲನೆ ಮಾಡಿ ನೋಡಿ. ಕಾಂಗ್ರೆಸ್‌ ಐದು ವರ್ಷಗಳಲ್ಲಿ ಜಗಳೂರಿಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಅದಕ್ಕಿಂತಲೂ ಹಿಂದೆ ಜಗಳೂರಿಗೆ ಕೆರೆ ತುಂಬಿಸಿ, ಮೇಲ್ದಂಡೆ ಯೋಜನೆ ಮಾಡಿ ಎಂದು 30 ವರ್ಷಗಳ ಕಾಲ ಹೋರಾಟ ಮಾಡಿದ್ರೂ ಸ್ಪಂದಿಸಿರಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ, ನಾನು ನೀರಾವರಿ ಸಚಿವನಾಗಿದ್ದ ಆಗಿದ್ದ ಸಂದರ್ಭದಲ್ಲಿ ₹ 1.5 ಟಿಎಂಸಿ ಅಡಿ ನೀರು ಹರಿಸುವಂತೆ ಮಾಡಿದೆವು. ಮೂರುವರೆ ವರ್ಷದ ಹಿಂದೆ ಬಿಜೆಪಿ ಅಧಿಕಾರಕ್ಕೆ ಮತ್ತೆ ಬಂದ ಮೇಲೆ ಕೆರೆ ತುಂಬಿಸಲು ಮತ್ತೆ ₹ 660 ಕೋಟಿ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದರು.

ADVERTISEMENT

₹ 1400 ಕೋಟಿಯಲ್ಲಿ 46 ಸಾವಿರ ಎಕರೆ ಭೂಮಿಗೆ ಹನಿ ನೀರಾವರಿ ಒದಗಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಶಂಕುಸ್ಥಾಪನೆ ಮಾಡಲಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಕೇಂದ್ರ ಸರ್ಕಾರ ಇನ್ನೂ ₹ 16 ಸಾವಿರ ಕೋಟಿ ನೀಡಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 154 ಗ್ರಾಮಗಳಿಗೆ ಸುಮಾರು ₹ 424 ಕೋಟಿ ರೂಪಾಯಿ ವೆಚ್ಚದಲ್ಲಿ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ನಾವು ನೀರು ಹರಿಸಿ ಬರದ ನಾಡು ಹಸಿರ ನಾಡನ್ನಾಗಿ ಮಾಡಿದರೆ, ಕಾಂಗ್ರೆಸ್‌ ಮಾತಿನಲ್ಲೇ ನೀರು ಕುಡಿಸಿತು ಎಂದು ಟೀಕಿಸಿದರು.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಲ್ಪವನ್ನು ಜನರು ಮಾಡಬೇಕು. ಕಾಂಗ್ರೆಸ್ ಅನ್ನು ಎಲ್ಲ ಕ್ಷೇತ್ರಗಳಲ್ಲಿ ಕಿತ್ತೊಗೆಯಬೇಕು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಬರುತ್ತದೆ. ಬಿಜೆಪಿ ಬಂದಾಗ ಉತ್ತಮ ಮಳೆ ಬೆಳೆಯಾಗಿ ರೈತರು ಚಿಂತೆ ಇಲ್ಲದೇ ಬದುಕುವಂತಾಗುತ್ತದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ರಾಹುಲ್ ಗಾಂಧಿ ಭಾರತ್‌ ಜೋಡೊ ಮಾಡುತ್ತಿದ್ದಾರೆ. ಮೊದಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರನ್ನು ಜೋಡಿಸುವ ಕಾರ್ಯ ಮಾಡಲು. ಅವರಿಬ್ಬರು ಕ್ಷೇತ್ರಗಳನ್ನು ಹಂಚಿಕೊಂಡು ಬೈಟು ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ದೀನದಲಿತರ ಹೆಸರಲ್ಲಿ ರೈತರ ಹೆಸರಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡಿತು. ಆದರೆ ಅಭಿವೃದ್ಧಿ ಕಾರ್ಯವನ್ನು ಮಾಡಲಿಲ್ಲ. ಇಂದು ದೀನದಲಿತರು ಕಾಂಗ್ರೆಸ್‌ನ ಓಟ್‌ ಆಗಿ ಉಳಿದಿಲ್ಲ. ಹಾಗಾಗಿ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ನೆಲಕಚ್ಚಿದೆ. ಆದರೂ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಪರಮೇಶ್ವರ್‌ ಸಹಿತ ಮೂರ್ನಾಲ್ಕು ಮಂದಿ ಮುಖ್ಯಮಂತ್ರಿ ಆಗಲು ಹಾತೊರೆಯುತ್ತಿದ್ದಾರೆ. ಅದಕ್ಕಾಗಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಮಾಡಾಳ್‌ ವಿರೂಪಾಕ್ಷಪ್ಪ, ಎಂ. ಪಿ. ರೇಣುಕಾಚಾರ್ಯ, ಪ್ರೊ.ಎನ್‌. ಲಿಂಗಣ್ಣ, ಕೆ.ಎಸ್‌. ನವೀನ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌, ಮುಖಂಡರಾದ ಬಿ.ಎಸ್‌. ಜಗದೀಶ್‌, ಅನಿತ್‌ ಕುಮಾರ್‌, ಇಂದಿರಾ ರಾಮಚಂದ್ರ, ವಿಶಾಲಾಕ್ಷಿ, ನಿರ್ಮಲ ಕುಮಾರಿ, ಡಾ.ಎ.ಎಚ್‌. ಶಿವಯೋಗಿಸ್ವಾಮಿ, ವೇಣುಗೋಪಾಲ ರೆಡ್ಡಿ, ಶ್ರೀನಿವಾಸ ದಾಸಕರಿಯಪ್ಪ, ಬಸವರಾಜ ನಾಯ್ಕ, ಕೆ.ಎನ್‌. ಸಿದ್ದೇಶ್‌, ಎಚ್‌.ಸಿ. ಮಹೇಶ್‌, ಸೊಕ್ಕೆ ನಾಗರಾಜ್ ಮುಂತಾದವರು ಇದ್ದರು.

‘ಮೋದಿ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿಗೆ 140ಕ್ಕೂ ಅಧಿಕ ಸ್ಥಾನ’

ಮೋದಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. 140ಕ್ಕೂ ಅಧಿಕ ಸ್ಥಾನಗಳನ್ನು ಪಡೆಯುವುದರಲ್ಲಿ ಸಂಶಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕೆಲವು ಕಾಂಗ್ರೆಸ್‌ ಮುಖಂಡರು ತಿರುಕನ ಕನಸು ಕಾಣುತ್ತಿದ್ದಾರೆ. ಇದು ಕನಸಾಗಿಯೇ ಉಳಿಯಲಿದೆ. ಹಣ, ಹೆಂಡ, ತೋಲ್ಬಳದಿಂದ ಗೆಲ್ಲುವ ಭ್ರಮೆಯಲ್ಲಿ ಕಾಂಗ್ರೆಸ್‌ ಇದೆ. ಇದು ಸಾಧ್ಯವಿಲ್ಲ ಎಂಬುದು ಜನರ ಸ್ಪಂದನೆ ನೋಡುವಾಗ ಗೊತ್ತಾಗಿದೆ ಎಂದು ತಿಳಿಸಿದರು.

‘ಶಾಸಕ ರಾಮಚಂದ್ರ ಅವರು ₹ 3500 ಕೋಟಿಗೂ ಹೆಚ್ಚು ಅನುದಾನ ತಂದಿದ್ದಾರೆ. ರಾಜ್ಯದ ಗಳೂರು, ಎಲ್ಲ 224 ಶಾಸಕರಲ್ಲಿ ಮೊದಲಿಗರಾಗಿ ಕೆಲಸ ಮಾಡಿದ್ದಾರೆ. ಶಿಕಾರಿಪುರದಲ್ಲೂ ನನಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಮುಂದಿನ ಚುನಾವಣೆಯಲ್ಲಿ ರಾಮಚಂದ್ರ ಅವರನ್ನು 50 ಸಾವಿರಕ್ಕೂ ಅಧಿಕ ಮತಗಳಿಂದ ಆರಿಸಿ ಕಳುಹಿಸಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.